ಮೈಸೂರು: ಕೋರ್ಸ್ ಆರಂಭಿಸಲು ಯುಜಿಸಿ ಮಾನ್ಯತೆ ನೀಡುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ 60,000 ಮಂದಿಗೆ ಅನುಕೂಲವಾಗಲಿದೆ ಎಂದು ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.
ನವದೆಹಲಿಯ ಯುಜಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ತಜ್ಞರ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಬಳಿಕ ದೂರವಾಣಿ ಮೂಲಕ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಂದು ವಾರ ಅಥವಾ 15 ದಿನಗಳಲ್ಲಿ ಮಾನ್ಯತೆ ದೊರೆಯಬಹುದೆಂಬ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ನಾನು ವಿಶ್ವವಿದ್ಯಾನಿಲಯದ ಸ್ಥಿತಿ-ಗತಿ, ಮೂಲ ಸೌಲಭ್ಯ, ಉನ್ನತ ಶಿಕ್ಷಣಕ್ಕೆ ಇರುವ ಬೇಡಿಕೆ ಇತ್ಯಾದಿ ವಿಷಯಗಳನ್ನು ಸಮರ್ಪಕವಾಗಿ ಮಂಡಿಸಿರುವುದರಿಂದ ಖಂಡಿತವಾಗಿ ಈ ಬಾರಿ ಮಾನ್ಯತೆ ಸಿಗಲಿದೆ ಎಂಬ ಭರವಸೆ ಇದೆ. ಹಾಗೆ ಆದಲ್ಲಿ ವರ್ಷಕ್ಕೆ 60,000 ಮಂದಿಗೆ ಕುಳಿತಲ್ಲೇ ಉನ್ನತ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದರು.