ಜೇನು ಕುರುಬ ಯುವತಿಯ ಸ್ಪರ್ಧಾತ್ಮಕ ಪರೀಕ್ಷೆ ಕನಸಿಗೆ ಮುಕ್ತ ವಿವಿ ನೆರವು
ಮೈಸೂರು

ಜೇನು ಕುರುಬ ಯುವತಿಯ ಸ್ಪರ್ಧಾತ್ಮಕ ಪರೀಕ್ಷೆ ಕನಸಿಗೆ ಮುಕ್ತ ವಿವಿ ನೆರವು

November 22, 2020

ಮೈಸೂರು, ನ.21(ಎಸ್‍ಪಿಎನ್)- ಜೇನು ಕುರುಬ ಸಮುದಾಯದ 20 ವರ್ಷದ ಯುವತಿ `ನಾಗಿ’ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಹಂಬಲಕ್ಕೆ ಮುಕ್ತ ವಿವಿ ಸಕಲ ನೆರವು ನೀಡಿದೆ.

ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಗೌಡಮಾಚನ ಹಳ್ಳಿ(ಜಿಎಂ ಹಳ್ಳಿ) ಹಾಡಿಯವರಾಗಿ ಪದವಿ ಶಿಕ್ಷಣ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ಮಾರ್ಗದರ್ಶನ ಕ್ಕಾಗಿ ಜಿಲ್ಲಾಡಳಿತದತ್ತ ಮುಖಮಾಡಿದ ಸಂದರ್ಭ ಆಕೆಯ ಕನಸು ನನಸು ಮಾಡಲು ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಕುಲಸಚಿವ ಪ್ರೊ.ಲಿಂಗರಾಜ್ ಗಾಂಧಿ ಮತ್ತಿತರ ಅಧಿಕಾರಿಗಳು ಟೊಂಕಕಟ್ಟಿದ್ದಾರೆ.

ವಿದ್ಯಾಶಂಕರ್, ನಾಗಿ ಮತ್ತು ಆಕೆಯ ತಂದೆ ಚಿನ್ನಪ್ಪ ಅವರನ್ನು ಶುಕ್ರವಾರ ಮಧ್ಯಾಹ್ನ ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ನಾಗಿ ಅವರ ಆಸೆಗಳನ್ನು ತಾಳ್ಮೆಯಿಂದ ಆಲಿಸಿದರು. ನಂತರ ನಾಗಿ ಅವರಿಗೆ ಮುಕ್ತ ವಿವಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಪ್ರವೇಶ ನೀಡಿ, ಊಟ-ವಸತಿ ವ್ಯವಸ್ಥೆಯನ್ನೂ ಉಚಿತವಾಗಿ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ, ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ ತರಗತಿಗೆ ಪ್ರವೇಶ ನೀಡಿದರು. ಸ್ಥಳದಲ್ಲಿಯೇ ಪಠ್ಯಪುಸ್ತಕಗಳನ್ನೂ ಒದಗಿಸಿ ಮುಂದಿನ ವ್ಯಾಸಂಗಕ್ಕೂ ಅನುವು ಮಾಡಿಕೊಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕರಾಮುವಿ ಕುಲಪತಿ ಪ್ರೊ. ವಿದ್ಯಾಶಂಕರ್, ಮುಕ್ತ ವಿವಿ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು. ಈ ಸಂಬಂಧ ಹಲವು ದಿನಗಳ ಹಿಂದೆ `ಮೈಸೂರು ಮಿತ್ರ’ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ಹಾಡಿ ಯುವತಿ ನಾಗಿ ಬಗ್ಗೆ ವರದಿ ಪ್ರಕಟವಾಗಿದ್ದನ್ನು ಗಮನಿಸಿ ನೆರವಿನ ಹಸ್ತ ಚಾಚಿದೆ. ಅಲ್ಲದೆ, ಇಂತಹ ಇತರೆ ವಿದ್ಯಾರ್ಥಿನಿಯರ ವ್ಯಾಸಂಗಕ್ಕೂ ಮುಕ್ತ ವಿವಿ ನೆರವಾಗಲಿದೆ ಎಂದರು. ಈ ವೇಳೆ ಕುಲಪತಿಗಳ ವಿಶೇಷಾಧಿಕಾರಿ ಪ್ರೊ.ದೇವರಾಜು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಜನಸಂಗ್ರಾಮ ಪರಿಷತ್‍ನ ಉಪಾಧ್ಯಕ್ಷ ಪಾಲಹಳ್ಳಿ ಪ್ರಸನ್ನ, ಮುಕ್ತ ವಿವಿ ಸಿಬ್ಬಂದಿ ಅರುಣ್‍ಕುಮಾರ್ ರಾಜೇ ಅರಸ್ ಉಪಸ್ಥಿತರಿದ್ದರು.

Translate »