ಚಾಮರಾಜನಗರ: ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ವೊಂದರ ಟೈರು ಕಳಚಿ ಬಿದ್ದ ಘಟನೆ ತಾಲೂ ಕಿನ ಬದನಗುಪ್ಪೆ ಗ್ರಾಮದ ಬಳಿ ಬುಧವಾರ ನಡೆದಿದೆ.
ಚಾ.ನಗರದಿಂದ ಮಧ್ಯಾಹ್ನ 1.15ಕ್ಕೆ ಕೆಎಸ್ಆರ್‌ಟಿಸಿ ಬಸ್ (ಏಂ.10 ಈ.0140) ಮೈಸೂರಿಗೆ ತೆರಳುತ್ತಿತ್ತು. ಈ ವೇಳೆ ಬಸ್ ಬದನಗುಪ್ಪೆ ಗ್ರಾಮವನ್ನು ದಾಟುತ್ತಿ ದ್ದಂತೆಯೇ ಬಸ್‍ನ ಹಿಂಬದಿಯ ಎಡ ಭಾಗದ ಟೈರೊಂದು ಕಳಚಿತು. ಬಸ್‍ನಿಂದ ಕಳಚಿದ ಟೈರು ವೇಗವಾಗಿ ಬಸ್ ಮುಂಭಾಗವೇ ಹೋಯಿತು. ಆ ಟೈರು ಸುಮಾರು 100 ಮೀಟರ್‍ನಷ್ಟು ದೂರ ಹೋಗಿ ಸಣ್ಣ ಹಳ್ಳಕ್ಕೆ ಬಿದ್ದು ಮೇಲಕ್ಕೆ ಹಾರಿ ನಂತರ ಕೆಳಕ್ಕೆ ಬಿತ್ತು. ಅದೃಷ್ಟವಶಾತ್ ಬಸ್‍ನಿಂದ ಕಳಚಿದ ಟೈರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.
ಬಸ್‍ನಿಂದ ಇಳಿದ ಪ್ರಯಾಣಿಕರು ಪರಿಸ್ಥಿತಿಯನ್ನು ನೋಡಿ ಸದ್ಯ ಯಾವುದೇ ಅನಾಹುತ ಸಂಭವಿಸಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟರು. ಟೈರ್ ಕಳಚಿದ ಜಾಗದಲ್ಲಿ ಇದ್ದ ಇನ್ನೊಂದು ಟೈರನ್ನು ಗಮನಿಸಿದಾಗ ಆ ಟೈರು ಶೇ.80ರಷ್ಟು ಭಾಗ ಹಾಳಾಗಿದ್ದನ್ನು ನೋಡಿದ ಪ್ರಯಾಣಿಕರು, ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಶಾಪ ಹಾಕುತ್ತಾ ಬೇರೆ ಬಸ್‍ನಲ್ಲಿ ತೆರಳಿದರು.