ರಸ್ತೆ ಬದಿ ಸಾರಿಗೆ ಬಸ್‍ಗಳ ಪಾರ್ಕಿಂಗ್
ಮೈಸೂರು

ರಸ್ತೆ ಬದಿ ಸಾರಿಗೆ ಬಸ್‍ಗಳ ಪಾರ್ಕಿಂಗ್

June 13, 2020

ಮೈಸೂರು, ಜೂ.12(ಆರ್‍ಕೆ)ಮೈಸೂರಿನ ಗ್ರಾಮಾಂತರ (ಸಬರ್ಬನ್) ಬಸ್ ನಿಲ್ದಾಣದೆದುರು ಪೀಪಲ್ಸ್ ಪಾರ್ಕ್ ಸುತ್ತ ರಸ್ತೆ ಬದಿ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ಪಾರ್ಕ್ ಮಾಡಲಾಗುತ್ತಿದೆ.

ಬಸ್ ಸ್ಟ್ಯಾಂಡ್ ಎದುರಿನ ಪೀಪಲ್ಸ್ ಪಾರ್ಕ್ ಪಶ್ಚಿಮ ಗೇಟಿ ನಿಂದ ಪೂರ್ವ ದ್ವಾರ ಸೇರಿದಂತೆ ನಜರ್‍ಬಾದಿನ ಕೆನರಾ ಬ್ಯಾಂಕ್ ಸರ್ಕಲ್‍ವರೆಗೆ (ಆದಾಯ ತೆರಿಗೆ ಕಚೇರಿ ರಸ್ತೆ) ಹಾಗೂ ಮಿನಿ ವಿಧಾನಸೌಧದ ಸರ್ಕಾರಿ ಅತಿಥಿ ಗೃಹ ದಕ್ಷಿಣ ಗೇಟ್ ಸರ್ಕಲ್ ಬಳಿ ಪ್ರತೀ ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಸುಮಾರು 50ಕ್ಕೂ ಹೆಚ್ಚು ಬಸ್ಸುಗಳನ್ನು ಪಾರ್ಕ್ ಮಾಡಲಾಗುತ್ತಿದೆ.

ಪರಿಣಾಮ ಆ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ವಾಹನ ಓಡಾಡುವ ರಸ್ತೆಯನ್ನು ಕೆಎಸ್‍ಆರ್‍ಟಿಸಿಯು ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿಕೊಂಡಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್, ಒಂದು ಬಸ್ಸಿನಲ್ಲಿ ಕೇವಲ 30 ಮಂದಿ ಪ್ರಯಾಣಿ ಸಲು ಅವಕಾಶವಿರುವುದರಿಂದ ಹೆಚ್ಚಿನ ಬಸ್ಸುಗಳ ಅಗತ್ಯವಿದೆ. ಬಸ್ ಸ್ಟ್ಯಾಂಡ್ ಒಳಗೆ ಸ್ಥಳಾಭಾವವಿರುವ ಕಾರಣ ಹೊರಗೆ ರಸ್ತೆ ಬದಿ ನಿಲ್ಲಿಸಿರುತ್ತೇವೆ ಎಂದರು.

ಒಂದು ಬಸ್ಸು ಹೊರಗೆ ಹೋದ ನಂತರ ಟಿಸಿ ಫೋನ್ ಮಾಡಿ ಇನ್ನೊಂದು ಬಸ್ಸನ್ನು ಕರೆಸಿಕೊಳ್ಳುತ್ತಾರೆ. ಅದಕ್ಕಾಗಿ ನಾವು ಎಲ್ಲಾ ಘಟಕದ ಬಸ್ಸುಗಳನ್ನು ಬಸ್ ಸ್ಟ್ಯಾಂಡ್ ಸಮೀಪವೇ ನಿಲ್ಲಿಸಿಕೊಳ್ಳುವ ಅನಿವಾರ್ಯತೆ ಇದೆ. 60 ಮಂದಿಗೆ ಅವಕಾಶ ನೀಡುವವರೆಗಷ್ಟೇ ಈ ವ್ಯವಸ್ಥೆ. ಮುಂದೆ ಅಲ್ಲಿ ಪಾರ್ಕ್ ಮಾಡುವ ಅಗತ್ಯವಿರುವುದಿಲ್ಲ ಎಂದು ಅವರು ತಿಳಿಸಿದರು.

Translate »