ನಮ್ಮನ್ನೂ ಸರ್ಕಾರಿ ನೌಕರರೆಂದೇ ಪರಿಗಣಿಸಿ… ಮೈಸೂರಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಜಾಥಾ
ಮೈಸೂರು

ನಮ್ಮನ್ನೂ ಸರ್ಕಾರಿ ನೌಕರರೆಂದೇ ಪರಿಗಣಿಸಿ… ಮೈಸೂರಲ್ಲಿ ಕೆಎಸ್‍ಆರ್‍ಟಿಸಿ ನೌಕರರ ಜಾಥಾ

January 31, 2020

ಮೈಸೂರು: ತಮ್ಮನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಸರಿಸಮಾನ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಮೈಸೂರಿನಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸದಸ್ಯರು, ದೊಡ್ಡ ಗಡಿಯಾರ, ಗಾಂಧಿ ಚೌಕ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಜೆ.ಕೆ.ಮೈದಾನ, ಮೆಟ್ರೋಪೋಲ್ ಸರ್ಕಲ್ ಮೂಲಕ ಡಿಸಿ ಕಚೇರಿ ತಲುಪಿದರು. ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ, ಮುಂಬಡ್ತಿ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತವೆ. ಆದರೆ ಕೆಎಸ್‍ಆರ್‍ಟಿಸಿ ಬಸ್ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್‍ಗಳಿಗೆ ಯಾವುದೇ ಬಡ್ತಿ ಸೌಲಭ್ಯವಿಲ್ಲ ಎಂದು ಆರೋಪಿಸುತ್ತಿದ್ದ ಪ್ರತಿಭಟನಾಕಾರರು, ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸುತ್ತಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ವೈ.ಇ.ಮಂಜುನಾಥ್, ಚಂದ್ರಶೇಖರ್, ಆನಂದ್, ಗಣೇಶ್, ಪರಮೇಶ್, ಗಿರೀಶ್ ಕುಮಾರ್, ವಿಶ್ವನಾಥ್, ಮಹದೇವ ಸ್ವಾಮಿ ಸೇರಿದಂತೆ ಹಲವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Translate »