3 ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗಕ್ಕೆ 4.2 ಕೋಟಿ ನಷ್ಟ
ಮೈಸೂರು

3 ತಿಂಗಳ ಲಾಕ್‍ಡೌನ್ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗಕ್ಕೆ 4.2 ಕೋಟಿ ನಷ್ಟ

June 12, 2020

ಬೇಡಿಕೆಗೆ ತಕ್ಕಂತೆ ಹಂತಹಂತವಾಗಿ ಬಸ್ ಸಂಖ್ಯೆ ಹೆಚ್ಚಳವಾಗುತ್ತಿದೆ

ಮೈಸೂರು, ಜೂ.11(ಆರ್‍ಕೆ)-ಕೋವಿಡ್-19 ಲಾಕ್‍ಡೌನ್‍ನಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗಕ್ಕೆ ಮೂರು ತಿಂಗಳಲ್ಲಿ ಸುಮಾರು 4.2 ಕೋಟಿ ರೂ. ನಷ್ಟವಾದಂತಾಗಿದೆ.

ಲಾಕ್‍ಡೌನ್ ಇಲ್ಲದಿದ್ದಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗಕ್ಕೆ ಬಸ್ ಸಂಚಾರ ಮತ್ತು ಬಸ್ ನಿಲ್ದಾಣಗಳ ಅಂಗಡಿ-ಮುಂಗಟ್ಟು ಬಾಡಿಗೆಯಿಂದ ಪ್ರತೀ ತಿಂಗಳು ಸುಮಾರು 1.4 ಕೋಟಿ ರೂ. ಆದಾಯ ಬರುತ್ತಿತ್ತು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ತಿಳಿಸಿದ್ದಾರೆ.

ನಮ್ಮ ವಿಭಾಗದಲ್ಲಿ ಕೇವಲ ಬಸ್‍ಗಳ ಸಂಚಾರ ಸೇವೆಯಿಂದ ತಿಂಗಳಿಗೆ 80 ಲಕ್ಷದಿಂದ 1 ಕೋಟಿ ರೂ., ಮೈಸೂರು ಸಬರ್ಬನ್ ಬಸ್ ಸ್ಟ್ಯಾಂಡಿನ ಅಂಗಡಿಗಳ ಬಾಡಿಗೆಯಿಂದ 25 ಲಕ್ಷ ರೂ. ಮತ್ತು ತಾಲೂಕುಗಳ ಬಸ್ ನಿಲ್ದಾಣದ ಉದ್ದಿಮೆಗಳ ಬಾಡಿಗೆಯಿಂದ ಸುಮಾರು 15 ಲಕ್ಷ ರೂ. ಆದಾಯ ಬರುತ್ತಿತ್ತು ಎಂದು ತಿಳಿಸಿದರು.

ಮೊದಲು ಮೈಸೂರು ಭಾಗದಿಂದ ದಿನಕ್ಕೆ 670 ಬಸ್‍ಗಳು ರಾಜ್ಯದಾದ್ಯಂತ ಹಾಗೂ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಚರಿಸುತ್ತಿದ್ದವು. ಈಗ ದಿನಕ್ಕೆ ಕೇವಲ 250 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಇದೀಗ ಎಲ್ಲಾ ಬಸ್ ಸ್ಟ್ಯಾಂಡ್‍ಗಳಲ್ಲಿನ ಅಂಗಡಿ, ಹೋಟೆಲ್‍ಗಳು ಮೇ 19ರಿಂದ ಬಾಡಿಗೆ ಕೊಡಬೇಕೆಂದು ಹೇಳಿದ್ದೇವೆ. ಬಸ್‍ಗಳ ಸಂಖ್ಯೆ ಹೆಚ್ಚಾಗದಿದ್ದರೆ ಸಂಸ್ಥೆಗೆ ಮತ್ತಷ್ಟು ನಷ್ಟ ಸಂಭವಿಸಲಿದೆ ಎಂದು ಅಶೋಕ್‍ಕುಮಾರ್ ತಿಳಿಸಿದರು.

ಮೈಸೂರಿಂದ ಹೊಸಪೇಟೆ, ಬೆಳಗಾಂ, ಗುಲ್ಬರ್ಗಾ, ರಾಯಚೂರುಗಳಂತಹ ದೂರದ ಜಿಲ್ಲೆಗಳಿಗೆ ಬಸ್ ಸೇವೆ ಆರಂಭಿಸಿದ್ದೇವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ವೋಲ್ವೋ ಮತ್ತು ಅಂತರ ರಾಜ್ಯ ಬಸ್ಸುಗಳ ಸೇವೆಗೆ ಅವಕಾಶ ನೀಡಿದ್ದಲ್ಲಿ ಅನುಕೂಲವಾಗಬಹುದೆಂದು ತಿಳಿಸಿದ್ದಾರೆ.

Translate »