ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ
ಮೈಸೂರು

ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ

May 19, 2020

ಬೆಂಗಳೂರು, ಮೇ 18(ಕೆಎಂಶಿ)- ಸಿನಿಮಾ ಮಂದಿರ, ಮಾಲ್ ಹೊರತುಪಡಿಸಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗೆ ಸರ್ಕಾರ ನಾಳೆಯಿಂದ ಹಸಿರು ನಿಶಾನೆ ತೋರಿದೆ. ಆದರೆ ಭಾನುವಾರ ರಜೆ ದಿನದಂತೆ ಸಂಪೂರ್ಣ ಕಫ್ರ್ಯೂ ಹೇರಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ನಾಳೆ ಯಿಂದ (ಮೇ 19)ಸಂಚಾರ ಪ್ರಾರಂಭಿಸಲಿದ್ದು, ಇದೇ ಸಂದರ್ಭದಲ್ಲಿ ನಗರ ಸಾರಿಗೆ ಹಾಗೂ ಖಾಸಗಿ ಬಸ್ ಓಡಾಟಕ್ಕೂ ಅನುವು ಮಾಡಿ ಕೊಟ್ಟಿದೆ. ರಾಜ್ಯದ ಒಳಗಡೆ ರೈಲು ಓಡಾ ಟಕ್ಕೆ ಅನುವು ಮಾಡಿಕೊಟ್ಟಿರುವ ಸರ್ಕಾರ, ಮೆಟ್ರೋ, ವಿಮಾನ ಸೇವೆಯನ್ನು ಮೇ 31 ರವರೆಗೂ ಬಂದ್ ಮಾಡಿದೆ.

ಕೇಂದ್ರ ಸರ್ಕಾರ ನಾಲ್ಕನೇ ಲಾಕ್‍ಡೌನ್ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ, ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮ ವಾರ ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಈ ಮಹತ್ವದ ತೀರ್ಮಾನ ಕೈಗೊಂ ಡರು. ಸಭೆಯ ನಂತರ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ, ಸಾರಿಗೆ ಸಂಸ್ಥೆ ನಾಳೆ ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭಿಸಲಿದೆ. ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಚಾಲಕ ಸೇರಿ ಮೂರು ಮಂದಿ ಮಾತ್ರ ಪ್ರಯಾಣ ಮಾಡಬೇಕು. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದಂತೆ ಇಡೀ ರಾಜ್ಯದಲ್ಲಿ ಮೇ 31 ರವರೆಗೂ ಲಾಕ್‍ಡೌನ್ ಮುಂದುವರೆಯಲಿದೆ. ಆದರೆ ಬಹುತೇಕ ವಾಣಿಜ್ಯ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಎಲ್ಲಿಯಾದರೂ ಸರ್ಕಾರದ ಷರತ್ತುಗಳನ್ನು ಮುರಿದಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಂದಿನಂತೆ ಸಾರ್ವಜನಿಕ ಸಮಾರಂಭ, ಶಾಲಾ ಕಾಲೇಜು, ಮೆಟ್ರೋ ರೈಲು ಸೇವೆ, ಸಿನಿಮಾ ಹಾಗೂ ಮಾಲ್‍ಗಳು ಬಂದ್ ಆಗಿರುತ್ತವೆ. ಈಗಾಗಲೇ ಪ್ರಕಟಿಸಿರುವಂತೆ 50 ಜನಸಂಖ್ಯೆ ಯೊಳಗೆ ಮದುವೆ ಸಮಾರಂಭಗಳನ್ನು ಮಾಡಿಕೊಳ್ಳಬಹುದಾಗಿದೆ. ಕಂಟೈನ್ಮೆಂಟ್ ಜೋನ್‍ಗಳಲ್ಲಿ ಅತ್ಯಂತ ಬಿಗಿ ಭದ್ರತೆ ಮಾಡಲಿದ್ದು, ಯಾರಾದರೂ ಕಾನೂನು ಬಾಹಿರ ವರ್ತನೆ ಮಾಡಿದರೆ ಕ್ರಿಮಿನಲ್ ದಾವೆ ಹೂಡುವುದಾಗಿ ಎಚ್ಚರಿಸಿದರು.

ಹೊರ ರಾಜ್ಯಗಳಿಂದ ಬರುವವರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ ಮಾಡುತ್ತೇವೆ, ಬಂದವರನ್ನು ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ. ಬೇರೆ ರಾಜ್ಯಗಳಿಂದ ಜನ ಬರುವುದಕ್ಕೆ ಅವಕಾಶವಿಲ್ಲ. ಆದರೆ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಅನುವು ಮಾಡಿಕೊಡಲಾಗುವುದು. ವಾಯು ವಿಹಾರಿಗಳಿಗೆ ಸಂತಸದ ಸುದ್ದಿ ನೀಡಿರುವ ಮುಖ್ಯಮಂತ್ರಿಯವರು ಬೆಳಿಗ್ಗೆ 7ರಿಂದ 9, ಸಂಜೆ 5ರಿಂದ 7ರವರೆಗೆ ಉದ್ಯಾನವನಗಳಲ್ಲಿ ನಡಿಗೆ ಮಾಡಬಹುದಾಗಿದೆ. ಎಲ್ಲಿ ಹೆಚ್ಚಾಗಿ ಸೋಂಕಿತರಿರುತ್ತಾರೋ ಆ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಪರಿಗಣನೆ ಮಾಡಿದ್ದೇವೆ. ಅಲ್ಲಿ ಯಾವುದೇ ರೀತಿಯ ಆರ್ಥಿಕ ಚಟುವಟಿಕೆ ಇರುವುದಿಲ್ಲ. ವಾಹನ ಓಡಾಟಕ್ಕೂ ಅವಕಾಶ ವಿರುವುದಿಲ್ಲ. ಬೀದಿಬದಿ ವ್ಯಾಪಾರ ನಾಳೆಯಿಂದಲೇ ಪ್ರಾರಂಭಿಸಬಹುದು. ಇದೇ ಸಂದರ್ಭದಲ್ಲಿ ಎಲ್ಲರೂ ಹೊಟೇಲ್‍ಗಳನ್ನು ತೆರೆದು, ಪಾರ್ಸೆಲ್ ವ್ಯವಸ್ಥೆ ಮಾಡಬೇಕು. ಯಾರೂ ಹೊಟೇಲ್ ತೆರೆಯುವುದಿಲ್ಲವೋ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಜಿಮ್‍ಗೆ ಅವಕಾಶವಿಲ್ಲ. ಆದರೆ ಮೈದಾನದಲ್ಲಿ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದೆ. ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೂ ಕಫ್ರ್ಯೂ ಎಂದಿನಂತೆ ಮುಂದುವರೆಯಲಿದೆ. ಅದರಲ್ಲೂ ಭಾನುವಾರ ಯಾವುದೇ ಆರ್ಥಿಕ ಚಟುವಟಿಕೆಗೂ ಅವಕಾಶವಿಲ್ಲ. ಅನ ಗತ್ಯವಾಗಿ ಅಂದು ಮನೆಯಿಂದ ಯಾರೂ ಹೊರಬರಬಾರದು ಎಂದರು.

ಅಂತರರಾಜ್ಯ ಬಸ್ ಸಾರಿಗೆ ಇಲ್ಲ
ಬೆಂಗಳೂರು, ಮೇ 18(ಕೆಎಂಶಿ)-ಕಫ್ರ್ಯೂ ಸಮಯದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‍ಗಳ ಸಂಚಾರ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 31ರವರೆಗೆ ಅಂತರ ರಾಜ್ಯ ಬಸ್ ಸಂಚಾರ ಇರುವುದಿಲ್ಲ. ನಮ್ಮ ಬಸ್‍ಗಳು ರಾಜ್ಯ ದೊಳಗೆ ಬೆಳಿಗ್ಗೆ 7ರಿಂದ ಸಂಜೆ 7ರವೆರೆಗೆ ಮಾತ್ರ ಸಂಚರಿಸಲಿವೆ. ರಾಜ್ಯದ ಯಾವುದೇ ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದು, ಯಾವುದೇ ಬಸ್ ಈ ನಿಗದಿತ ಸಮಯದಲ್ಲೇ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರ ತಲುಪಲು ವ್ಯವಸ್ಥೆ ಮಾಡಲಾಗಿದೆ. ಕಫ್ರ್ಯೂ ಸಮಯದಲ್ಲಿ ಸಾರಿಗೆ ಸಂಸ್ಥೆ ಬಸ್‍ಗಳಲ್ಲದೆ, ಆಟೋ, ಟ್ಯಾಕ್ಸಿ, ಸೇರಿದಂತೆ ಯಾವುದೇ ಖಾಸಗಿ ವಾಹನಗಳು ಓಡಾಟ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಖಾಸಗಿ ಬಸ್‍ಗಳು ಓಡಾಟ ನಡೆಸಬಹುದು. ಆದರೆ ಪ್ರತಿ ಬಸ್‍ನಲ್ಲಿ 30ಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಮಾಡಿಕೊಡುವಂತಿಲ್ಲ. ಸರ್ಕಾರದ ನಿಯಮಾ ವಳಿಯಂತೆ ಎಲ್ಲಾ ಬಸ್‍ಗಳಲ್ಲೂ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್ ಹತ್ತುವುದಕ್ಕೂ ಮುನ್ನ ಆರೋಗ್ಯ ಇಲಾಖೆಯ ಪ್ರತಿನಿಧಿಗಳಿಂದ ಪರೀಕ್ಷೆಗೆ ಒಳಪಡ ಬೇಕು. ಬಸ್ ನಿಲ್ದಾಣಗಳಲ್ಲಿ ಶುಚ್ಚಿತ್ವಕ್ಕೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದೇವೆ. ಕೇರಳ ಮತ್ತು ಒರಿಸ್ಸಾಗಳಲ್ಲಿ ಸಾರಿಗೆ ದರ ಹೆಚ್ಚಳ ಮಾಡಿವೆ. ಆದರೆ ನಾವು ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ, ಹಾಲಿ ದರವನ್ನೇ ಮುಂದುವರೆಸುತ್ತೇವೆ. ಸಾರಿಗೆ ನಿಗಮಗಳಿ ಗಾಗುವ ನಷ್ಟವನ್ನು ಸರ್ಕಾರ ಭರಿಸಿಕೊಡಲಿದೆ ಎಂದು ಮುಖ್ಯಮಂತ್ರಿಯವರು ಇಂದಿನ ಸಭೆಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳ ಸಾರಿಗೆ ಸಂಚಾರವನ್ನು ನಿಷೇಧಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಅಂತರರಾಜ್ಯ ಸಾರಿಗೆ ಸೇವೆಗೂ ಅವಕಾಶ ಮಾಡಿಕೊಟ್ಟಿದೆ. ಆದರೆ ಸದ್ಯಕ್ಕೆ ತುರ್ತು ಸೇವೆ ಹೊರತುಪಡಿಸಿ, ಉಳಿದ ಯಾವುದೇ ಸಾರಿಗೆ ಸಂಚಾರ ನೆರೆ ರಾಜ್ಯಗಳೊಂದಿಗೆ ಇಟ್ಟುಕೊಳ್ಳುವುದಿಲ್ಲ ಎಂದರು.

Translate »