ರಾಜ್ಯದಲ್ಲಿ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಿ.ವೈ.ವಿಜಯೇಂದ್ರ ಭವಿಷ್ಯ
ಚಾಮರಾಜನಗರ

ರಾಜ್ಯದಲ್ಲಿ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಿ.ವೈ.ವಿಜಯೇಂದ್ರ ಭವಿಷ್ಯ

July 19, 2018

ಗುಂಡ್ಲುಪೇಟೆ: ರಾಜ್ಯದ ಜನತೆಯ ಆಶೀರ್ವಾದವಿಲ್ಲದ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂಭವ ಹೆಚ್ಚಾಗಿದೆ ಎಂದು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದೇಟು ಹಾಕಿದ್ದರೂ ಸಹ ಪಟ್ಟುಬಿಡದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ ಪರಿಣಾಮ ಸಾಲಮನ್ನಾ ಮಾಡಲಾಗಿದೆ. ಆದರೆ ಸರ್ಕಾರ ಯಾವ ಸಾಲಮನ್ನಾ ಮಾಡಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲದೆ ಗೊಂದಲವುಂಟಾಗಿದ್ದು, ವಿದ್ಯಾರ್ಥಿ ಗಳಿಗೆ ಉಚಿತ ಬಸ್‍ಪಾಸ್ ನೀಡಲೂ ಸಾಧ್ಯವಾಗಿಲ್ಲ. ಹಿಂದಿನ ಸರ್ಕಾರ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದೆ. ಬಿಎಸ್‍ವೈ ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಜಾತಿ ವರ್ಗಗಳಿಗೆ ಸೀಮಿತವಾಗದೆ ಎಲ್ಲಾ ಯೋಜನೆಗಳಲ್ಲಿಯೂ ಸರ್ವರಿಗೂ ಸಮಪಾಲು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಸಮ್ಮಿಶ್ರ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಣ್ಣೀರಿಡಬೇಕಿದೆ: ಜನತೆಯ ಆಶೀರ್ವಾದ ಇಲ್ಲದಿದ್ದರೂ ಅಧಿಕಾರದ ವ್ಯಾಮೋಹದಿಂದ ಒಂದಾದ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಬೀಳಲಿದೆ ಎಂಬ ಭೀತಿಯಿಂದ ತೀವ್ರ ಗೊಂದಲಕ್ಕೆ ಸಿಲುಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಡುತ್ತಾ ಅನುಕಂಪಗಿಟ್ಟಿಸಲು ಮುಂದಾಗಿದ್ದಾರೆ. ಕಳೆದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿದ್ರೆಮಾಡುತ್ತಾ ದುರಾಡಳಿತ ನಡೆಸಿದ ಪರಿಣಾಮವಾಗಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಸಿಗರು ನಿಜವಾಗಿಯೂ ಕಣ್ಣೀರಿಡಬೇಕಾಗಿದೆ ಎಂದರು.

ಕಳೆದ ಆರು ತಿಂಗಳಿನಿಂದ ಸಂಬಳ ದೊರಕದ ಬೆಂಗಳೂರಿನ ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ವಿವಿಧ ಇಲಾಖೆಗಳ ಅನುದಾನಗಳು ಬಳಕೆಯಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಉತ್ತಮ ಆಡಳಿತ ನೀಡಿದ್ದರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋಲುತ್ತಿದ್ದರು. ಅದೃಷ್ಟವಶಾತ್ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅಸಹಾಯ ಕತೆಯಿಂದ ಸಾರ್ವಜನಿಕವಾಗಿ ಕಣ್ಣೀರಿಡು ತ್ತಿರುವುದರಿಂದ ಅಭದ್ರತೆಗೊಳಗಾಗಿದ್ದು, ಸರ್ಕಾರ ಯಾವಾಗ ಬೇಕಾದರೂ ಉರು ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜನತೆಯ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕೃಪೆಯಿಂದ ಆಗಿದ್ದೇನೆ ಎಂದು ಹೇಳುವ ಮೂಲಕ ಮತದಾ ರರಿಗೆ ಕುಮಾರಸ್ವಾಮಿ ಅಗೌರವ ತೋರಿ ದ್ದಾರೆ ಎಂದು ದೂಷಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಸಿಎಸ್. ನಿರಂಜನಕುಮಾರ್, ವಿಜಯೇಂದ್ರ, ಮೈಸೂರಿನ ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಯುವ ಮೊರ್ಚಾ ಅಧ್ಯಕ್ಷ ಪ್ರಣಯ್, ಮಾಜಿ ಸದಸ್ಯ ಮಹದೇವಪ್ರಸಾದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ್, ಎಂಡಿ ಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್. ಮುಖಂಡರಾದ ಕೆ.ಆರ್.ಲೋಕೇಶ್, ಎನ್. ಮಲ್ಲೇಶ್ ಸೇರಿದಂತೆ ಹಲವರು ಇದ್ದರು.

Translate »