ಇಂದು ಮೈತ್ರಿ ಬಜೆಟ್: ಸಾಲ ಮನ್ನಾದತ್ತ ಅನ್ನದಾತನ ಆಸೆಗಣ್ಣು
ಮೈಸೂರು

ಇಂದು ಮೈತ್ರಿ ಬಜೆಟ್: ಸಾಲ ಮನ್ನಾದತ್ತ ಅನ್ನದಾತನ ಆಸೆಗಣ್ಣು

July 5, 2018
  • ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ರೈತರ ಮನೆ ಬಾಗಿಲಿಗೆ ಬ್ಯಾಂಕಿನವರಿಂದ ಋಣಮುಕ್ತ ಪತ್ರ ಭರವಸೆ
  • ಮೊದಲ ಹಂತದಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಪೂರ್ಣ ಬೆಳೆ ಸಾಲ ಮನ್ನಾ
  • ರೈತರ ಹೆಸರಿನಲ್ಲಿ ಸಾಲ ಪಡೆದಿರುವ ಕುಳಗಳಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಾಗದು
  • ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಕ್ಕೆ ಹಿಂದಿನ ಸರ್ಕಾರದ ಪ್ರೋತ್ಸಾಹ
  • ಬಾಣಂತಿಯರಿಗೆ 6 ತಿಂಗಳ ಕಾಲ ಪ್ರತಿ ತಿಂಗಳು 6 ಸಾವಿರ ರೂ. ಭತ್ಯೆ, ವಯೋವೃದ್ಧರಿಗೆ ಮಾಸಿಕ ವೃದ್ಧಾಪ್ಯ ವೇತನ

ಬೆಂಗಳೂರು: ರೈತರನ್ನು ಸಾಲದಿಂದ ಮುಕ್ತಿಗೊಳಿ ಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಸಾಲ ಮನ್ನಾ ಸೇರಿದಂತೆ ಕೆಲವು ಕೃಷಿ ಬೆಳವಣಿಗೆಗೆ ಪೂರಕವಾಗಿ ಮಹತ್ತರವಾದ ಕಾರ್ಯಕ್ರಮಗಳನ್ನು ಪ್ರಕಟಿಸಲಿದ್ದಾರೆ.

ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿಯವರು ನಾಳೆ ಬೆಳಿಗ್ಗೆ 11.30ಕ್ಕೆ ವಿಧಾನಸಭೆಯಲ್ಲಿ ತಮ್ಮ ಮೊದಲ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಈ ಮುಂಗಡ ಪತ್ರಕ್ಕಾಗಿ ಇಡೀ ರೈತ ಸಮುದಾಯ ಕಣ್ಬಿಟ್ಟು ಕಾದು ಕುಳಿತಿದೆ. ಅವರಿಗೆ ನಿರಾಸೆಯಂತೂ ಆಗುವುದಿಲ್ಲ. ಆದರೆ ರೈತರ ಹೆಸರಿನಲ್ಲಿ ಸಾಲ ಪಡೆದಿರುವ ಕುಳಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಮೊದಲ ಹಂತದಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಅಂದರೆ ಐದು ಎಕರೆ ಪ್ರದೇಶದವರೆಗಿ ನವರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಪೂರ್ಣ ಬೆಳೆ ಸಾಲ ಮನ್ನಾ ಆಗಲಿದೆ. ಬಹುತೇಕ ಮೊದಲ ಹಂತದಲ್ಲಿ 16 ಸಾವಿರ ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಲಿದ್ದು, ಇದರ ಜೊತೆಯಲ್ಲೇ ರೈತರಿಗೂ ಕೆಲವು ಷರತ್ತುಗಳನ್ನು ವಿಧಿಸಿ, ಅವರು ತಾವು ಪಡೆದ ಸಾಲಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಹದಿನೈದು ದಿನಗಳೊಳಗಾಗಿ ಅರ್ಹ ರೈತರ ಮನೆ ಬಾಗಿಲಿಗೆ ಸಂಬಂಧಪಟ್ಟ ಬ್ಯಾಂಕಿನವರೇ ಋಣಮುಕ್ತ ಪತ್ರವನ್ನು ತಲುಪಿಸಲಿದ್ದಾರೆ. ನಂತರ ಎರಡನೇ ಹಂತದಲ್ಲಿ ರೈತರು ವಿವಿಧ ಬಾಬ್ತಿನಲ್ಲಿ ಮಾಡಿರುವ ಸಾಲ ಮನ್ನಾ ಮಾಡುವ ಬಗ್ಗೆಯೂ ಪ್ರಸ್ತಾಪ ಇಡುವ ಸಾಧ್ಯತೆ ಇದೆ. ಸಾಲ ಮನ್ನಾ ಅಷ್ಟೇ ಅಲ್ಲದೇ ರಾಜ್ಯದಲ್ಲಿರುವ ಜಲ ಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿ, ಬೆಳೆ ತೆಗೆಯುವಂತಹ ಕೆಲವು ಯೋಜನೆಗಳು ಪ್ರಕಟಗೊಳ್ಳಲಿವೆ. ರೈತರು ಬೆಳೆದ ಬೆಳೆಯನ್ನು ಅವರೇ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯು ಬರಲಿದೆ. ಇದಕ್ಕಾಗಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ಕಾರವೇ ಮೂರು ನಾಲ್ಕು ಎಕರೆ ಪ್ರದೇಶಗಳಲ್ಲಿ ಹೊಟೇಲ್ ಮಾದರಿಯಲ್ಲೇ ಸಂತೆಗಳನ್ನು ಪ್ರಾರಂಭಿಸುತ್ತದೆ. ಈ ಸಂತೆಗಳಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು. ಅಲ್ಲಿ ಮಾರಾಟ ವಾಗದಿದ್ದರೆ, ಸರ್ಕಾರದ ವಿವಿಧ ಸಂಸ್ಥೆಗಳೇ ಖರೀದಿ ಮಾಡಲಿದೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಕೆಲವು ಜನಪ್ರಿಯ ಯೋಜನೆಗಳನ್ನು ಮುಂದುವರೆಸಿ, ಇದೇ ಸಂದರ್ಭದಲ್ಲಿ ಹಾಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಕನಿಷ್ಠ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಯವರು
ತಮ್ಮ ಮುಂಗಡ ಪತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಇದರ ಜೊತೆಗೆ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಕೆಲವು ಮಹತ್ತರ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಎಲ್ಲ ಹಂತದ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸುವುದೂ ಸೇರಿದಂತೆ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳ ಅಭಿವೃದ್ಧಿಗೆ ಕೆಲವು ನಿರ್ದಿಷ್ಟ ಕಾರ್ಯಕ್ರಮ ರೂಪಿ ಸುವ ಸಾಧ್ಯತೆಯೂ ಇದೆ. ಇದೇ ರೀತಿ ಚುನಾವಣಾ ಸಂದರ್ಭದಲ್ಲಿ ನೀಡಿರುವ ಕೆಲವು ಆಶ್ವಾಸನೆಗಳನ್ನು ಈಡೇರಿಸಲಿದ್ದು, ಬಾಣಂತಿಯರಿಗೆ ಆರು ತಿಂಗಳ ಮಟ್ಟಿಗೆ ಪ್ರತಿ ತಿಂಗಳು ಹೆರಿಗೆ ಭತ್ಯೆ, ವಯೋವೃದ್ಧರಿಗೆ ಮಾಸಿಕ ವೃದ್ಧಾಪ್ಯ ವೇತನ ಹೆಚ್ಚಳವಾಗಲಿದೆ.

ಬೆಳೆ ಸಾಲ ಮನ್ನಾ ಮತ್ತು ಕೆಲವು ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳು ತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ಹೊರ ಬೀಳುತ್ತಿದೆ. ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ ಅನ್ಯ ಸಂಪನ್ಮೂಲಗಳಿಂದ ಸಂಗ್ರಹಿಸುವ ಯೋಜನೆಯನ್ನು ಮುಖ್ಯಮಂತ್ರಿಯವರು ಸಿದ್ಧಪಡಿಸಿದ್ದಾರೆ.

Translate »