ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಗೆ ಅಡ್ಡಿಯಾಗಿರುವ 5 ಮರಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ.
ಮರಗಳ ತೆರವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧವಿದ್ದ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಸದ ಪ್ರತಾಪ್‍ಸಿಂಹ ಅವರು ಗುರುವಾರ ಮೈಸೂರು ಗ್ರಾಹಕರ ಪರಿಷತ್ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೇವಲ 5 ಮರಗಳ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಸಂಸದ ಪ್ರತಾಪ್‍ಸಿಂಹ ಅವರು ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮೈಸೂರು ಗ್ರಾಹಕರ ಪರಿಷತ್‍ನ ಭಾಮಿ ವಿ.ಶೆಣೈ, ಶೋಭನಾ, ವೆಂಕಟೇಶ್, ರವಿಚಂದ್ರನ್, ಆರ್‌ಎಫ್‌ಓ ದೇವರಾಜ್, ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ.ಚಂದ್ರಪ್ಪ, ನಗರ ಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮುರುಳಿಧರ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಯನ್ನೂ ನಡೆಸಿದರು.
ರಸ್ತೆ ಅಭಿವೃದ್ಧಿಯ ಜೊತೆಗೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಪಾದಚಾರಿಗಳ ಅನುಕೂಲಕ್ಕಾಗಿ ಸೂಕ್ತ ರೀತಿಯಲ್ಲಿ ಫುಟ್‍ಪಾತ್ ನಿರ್ಮಿಸಲು ಅಡ್ಡಿಯಾಗಿರುವ ಮರಗಳ ತೆರವಿಗೆ ಅನುಮತಿ ನೀಡುವಂತೆ ಸಂಸದ ಪ್ರತಾಪ್‍ಸಿಂಹ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಗರ ಪಾಲಿಕೆ ತೋಟಗಾರಿಕೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ನಂತರ ಇವರು ಅರಣ್ಯ ಇಲಾಖೆಗೆ ಪತ್ರ ಬರೆದು ಅನುಮತಿ ಕೋರಿದ್ದರು. ಈ ನಡುವೆ ಮೈಸೂರು ಗ್ರಾಹಕರ ಪರಿಷತ್, ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದೆಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್‍ಸಿಂಹ ಅವರು ಇಂದು ಸಭೆ ನಡೆಸಿದ್ದು, ಬಹುತೇಕ ಸಮಸ್ಯೆ ಪರಿಹರಿಸಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರು ಗ್ರಾಹಕರ ಪರಿಷತ್‍ನ ಭಾಮಿ ಶೆಣೈ ಅವರು, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಫುಟ್‍ಪಾತ್ ನಿರ್ಮಾಣಕ್ಕೆ ಅಡ್ಡಿಯಾಗಿರುವ 5 ಮರಗಳನ್ನು ಮಾತ್ರ ತೆರವುಗೊಳಿಸಲು ಒಪ್ಪಿದ್ದೇವೆ. ಆದರೆ ಯಾವುದೇ ರೀತಿಯಲ್ಲಿ ರಸ್ತೆ ವಿಸ್ತರಣೆ ಮಾಡಬಾರದು. ಕಾಮಗಾರಿ ನಡೆಸುವ ಮುನ್ನ ನಮ್ಮ ಗಮನಕ್ಕೂ ತರಬೇಕೆಂದು ತಿಳಿಸಿದ್ದೇವೆಂದು ಹೇಳಿದರು.
ಕೇಂದ್ರ ಸರ್ಕಾರದ ಸೆಂಟ್ರಲ್ ರೋಡ್ ಫಂಡ್(ಸಿಆರ್‌ಎಫ್)ನಿಂದ ಬಿಡುಗಡೆಯಾದ 12.5 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗಿದ್ದು, ಯೋಜಿತ ರೀತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ ಸಂಸದ ಪ್ರತಾಪ್‍ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ಸುಮಾರು 20 ದಿನಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಯೋಜಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗ ಹುಣಸೂರು ರಸ್ತೆ ಅಭಿವೃದ್ಧಿಗೆ ಮರಗಳು ಅಡ್ಡಿಯಾಗಿರುವ ಬಗ್ಗೆ ಸಂಸದ ಪ್ರತಾಪ್‍ಸಿಂಹ ಅವರು, ಮೈಸೂರು ಗ್ರಾಹಕರ ಪರಿಷತ್ ಪ್ರತಿನಿಧಿಗಳಿಗೆ ವಿವರಿಸಿದರು. ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.