‘ಲಘು ಉದ್ಯೋಗ್ ಭಾರತಿ’ ಮೈಸೂರು ವಿಭಾಗ ಕಾರ್ಯಾರಂಭ
ಮೈಸೂರು

‘ಲಘು ಉದ್ಯೋಗ್ ಭಾರತಿ’ ಮೈಸೂರು ವಿಭಾಗ ಕಾರ್ಯಾರಂಭ

February 22, 2021

ಮೈಸೂರು, ಫೆ.21 (ಪಿಎಂ)- ದೇಶದ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಸೂಕ್ಷ್ಮ-ಸಣ್ಣ ಉದ್ಯಮಗಳ ಸಂಘಟನೆ `ಲಘು ಉದ್ಯೋಗ್ ಭಾರತಿ’ಯ ಮೈಸೂರು ವಿಭಾಗ ಭಾನುವಾರ ಅಸ್ತಿತ್ವಕ್ಕೆ ಬಂತು.

ಮೈಸೂರಿನ ಹೈವೇ ವೃತ್ತದ ಬಳಿ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ `ಎಲ್‍ಯುಬಿ-ಮೈಸೂರು ವಿಭಾಗ’ವನ್ನು ಸಂಸದ ಪ್ರತಾಪ ಸಿಂಹ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ `ಆತ್ಮನಿರ್ಭರ ಭಾರತ’ ಪರಿಕಲ್ಪನೆ ಕುರಿತು ಗಣ್ಯರು ವಿಚಾರ ಮಂಡಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಮೈಸೂರು, ನೆರೆಯ ಜಿಲ್ಲೆಗಳ ಕೈಗಾರಿಕೆಗಳ ಸರಕು ಸಾಗಣೆÉಗೆ ಅನುಕೂಲ ಕಲ್ಪಿಸಲು ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ `ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ನಿರ್ಮಿಸಲಾಗುವುದು. ಶೀಘ್ರವೇ ಕಾಮಗಾರಿ ಆರಂ ಭಿಸಿ, 2022ಕ್ಕೆ ಪೂರ್ಣಗೊಳಿಸಲಾಗುವುದು ಎಂದರು.

ರಸ್ತೆ, ರೈಲು ಮಾರ್ಗ, ವಿಮಾನಯಾನ ಸೌಕರ್ಯದಲ್ಲಿ ಸುಧಾರಣೆ ಯಾದರಷ್ಟೇ ಈ ಭಾಗಕ್ಕೆ ಕೈಗಾರಿಕೆಗಳು ಬರುತ್ತವೆ. ಹಾಗಾಗಿಯೇ ಸಂಪರ್ಕ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮೈಸೂರು ಬಗ್ಗೆ ಪ್ರಧಾನಿ ಅಪಾರ ಕಾಳಜಿ ಹೊಂದಿದ್ದು, ಈವರೆಗೆ 16 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ಕಲ್ಪಿಸಿ, ವಿವಿಧ ಯೋಜನೆ ಗಳ ಅನುಷ್ಠಾನಕ್ಕೆ ನೆರವಾಗಿದ್ದಾರೆ ಎಂದು ವಿವರಿಸಿದರು.

ನಾನು ಸಂಸದನಾಗಿ ಆಯ್ಕೆಯಾದಾಗ ಮೈಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳಿದ್ದವು. ಆದರೆ, ಉದ್ಯೋಗ ಸೃಷ್ಟಿ ಕಡಿಮೆ ಎಂದು ಜನತೆ ಆಕ್ಷೇಪಿಸುತ್ತಿದ್ದರು. ಮೈಸೂರಿನ ಬಗ್ಗೆ ಒಳ್ಳೆ ಅಭಿಪ್ರಾಯವಿದ್ದರೂ ಕಂಪನಿಗಳು ಇಲ್ಲಿಗೆ ಬರಲು ಸಿದ್ಧವಿರಲಿಲ್ಲ. ಕಾರಣ ಸಂಪರ್ಕ-ಸಾಗಣೆ ಸಮಸ್ಯೆ. ಈಗ ರಸ್ತೆ, ರೈಲು, ವಿಮಾನಯಾನ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತು ನೀಡ ಲಾಗಿದೆ ಎಂದರು. ಈ ಮೊದಲು ಕಾರ್ಯಾಚರಣೆ ಇಲ್ಲದೆ ಸ್ಥಗಿತ ಗೊಂಡಿದ್ದ ಮಂಡಕಳ್ಳಿ ಬಳಿಯ ಮೈಸೂರು ವಿಮಾನ ನಿಲ್ದಾಣ ಇಂದು ಬಹಳ ಚಟುವಟಿಕೆಯಲ್ಲಿದೆ. 7 ವಿಮಾನಗಳು ಸಂಚರಿಸು ತ್ತಿವೆ. ಶೀಘ್ರವೇ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಗಿ ಉನ್ನತೀಕರಿಸಲಾಗುವುದು. ಬೆಂಗಳೂರು-ಮೈಸೂರು ನಡುವೆ ದಶಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬಳಿಕ ಎರಡೂ ನಗರಗಳ ಸಂಪರ್ಕ 1 ಗಂಟೆಯಲ್ಲಿ ಸಾಧ್ಯವಾಗಲಿದೆ. ಇದೆಲ್ಲದಕ್ಕೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುದಾನ ಕಲ್ಪಿಸಿದೆ ಎಂದರು.

ಅಮೆರಿಕವನ್ನು `ಅವಕಾಶಗಳ ತಾಣ’ ಎಂದೇ ಕರೆಯಲಾಗು ತ್ತದೆ. ಅಮೆರಿಕ ಹೀಗೆ ರೂಪುಗೊಳ್ಳಲು ಮೂಲಸೌಲಭ್ಯಗಳಲ್ಲಿ ಅಭಿವೃದ್ಧಿ ಸಾಧಿಸಿದ್ದೇ ಕಾರಣವಾಗಿದೆ. ಜಗತ್ತಿನಾದ್ಯಂತದ ಪ್ರತಿಭಾ ವಂತರು ಅಮೆರಿಕದಲ್ಲಿ ನೆಲೆಸುತ್ತಿರುವುದೂ ಇದೇ ಕಾರಣಕ್ಕೆ ಎಂದರು.

ನಮ್ಮ ದೇಶದಲ್ಲಿ 1998ಕ್ಕಿಂತ ಮುಂಚೆ `ಹೈವೆ’ ಎಂಬ ಪರಿ ಕಲ್ಪನೆಯೇ ಇರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದಾಗ `ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್’ ಹೆದ್ದಾರಿ ನಿರ್ಮಿಸಿ ದರು. ಭಾರತದ ಅತಿದೊಡ್ಡ ಹೆದ್ದಾರಿ ಯೋಜನೆ ಇದು. ಅಲ್ಲದೇ, ವಾಜಪೇಯಿ ಸರ್ಕಾರ ಮೂಲಸೌಲಭ್ಯಗಳಿಗೆ ಒತ್ತು ನೀಡಿತು. ಸರ್ವಶಿಕ್ಷಣ ಅಭಿಯಾನ ಮೂಲಕ ಮಕ್ಕಳು ಶಾಲೆಯತ್ತ ಬರಲು ಉತ್ತೇಜಿಸಲಾಯಿತು. ಮೊಬೈಲ್ ನೆಟ್‍ವರ್ಕ್ ಮಹತ್ವದ ಸಾಧನೆ ಮಾಡಿದ್ದೂ ವಾಜಪೇಯಿ ಸರ್ಕಾರವೇ. ಆದರೆ `ಇದೆಲ್ಲದರ ಶ್ರೇಯಸ್ಸು ನಮ್ಮದು’ ಎಂದು ಬೇರೆಯವರು ಹೇಳಿಕೊಳ್ಳುತ್ತಿದ್ದಾರೆ. ದೇಶದಲ್ಲಿ ದಿನಕ್ಕೆ 8ರಿಂದ 9 ಕಿ.ಮೀ. ಮಾತ್ರವೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿತ್ತು. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದಿನಕ್ಕೆ 50 ಕಿ.ಮೀ.ಗೂ ಅಧಿಕ ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.

ಸಿಎಫ್‍ಟಿಆರ್‍ಐ ನಿರ್ದೇಶಕಿ ಶ್ರೀದೇವಿ ಎ.ಸಿಂಗ್, ತಮ್ಮ ಅಭಿ ಪ್ರಾಯ ಒಂದು ಹಂತದಲ್ಲಿ ನಿಜವಿರಬಹುದು. ನಮ್ಮದೇ ಸಂಸ್ಥೆ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಅದಾಗ್ಯೂ ಸಾಕಷ್ಟು ಸ್ಪಂದನೆ ಮಾಡುತ್ತಿ ದ್ದೇವೆ. ಸಣ್ಣ ಉದ್ಯಮಿಗಳು ಮತ್ತು ರೈತರನ್ನು ತಲುಪಲು ಅನೇಕ ಕಾರ್ಯ ಕ್ರಮಗಳನ್ನು ಮಾಡಲಾಗುತ್ತಿದೆ. ಈವರೆಗೆ 400ಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ ತಂತ್ರಜ್ಞಾನದ ಸಹಕಾರ ನೀಡಲಾ ಗಿದೆ ಎಂದರು. ಇದೇ ವೇಳೆ ಎಲ್‍ಯುಬಿ ಮೈಸೂರು ವಿಭಾಗದ ಅಧ್ಯಕ್ಷರಾಗಿ ಮಹೇಶ್ ಶೆಣೈ, ಉಪಾಧ್ಯಕ್ಷರಾಗಿ ಬಿ.ಎಸ್.ಪ್ರಶಾಂತ್, ಕಾರ್ಯದರ್ಶಿಯಾಗಿ ರಾಜಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪಕ್, ಎಂ.ಅಯ್ಯಪ್ಪ, ನೀಲಾ ರಾಮಕೃಷ್ಣ ನಾಮನಿರ್ದೇಶನ ಗೊಂಡಿದ್ದಾರೆ ಎಂದು ಪ್ರಕಟಿಸಲಾಯಿತು. `ಸ್ಕ್ಯಾನ್ ರೇ ಟೆಕ್ನಾ ಲಜೀಸ್’ ಎಂಡಿ ವಿಶ್ವಪ್ರಸಾದ್ ಆಳ್ವಾ, ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಿಎಫ್‍ಟಿಇಆರ್‍ಐ ನಿರ್ದೇಶಕಿ ಶ್ರೀದೇವಿ ಎ.ಸಿಂಗ್, ಐಐಟಿ ಖರಗ್ಪುರ್ ಹಳೆ ವಿದ್ಯಾರ್ಥಿ ಸುಕುಮಾರ್ ರಂಗಾಚಾರಿ, ತಂಜಾವೂರಿನ ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಆನಂದ ರಾಮಕೃಷ್ಣನ್, ಎಲ್‍ಯುಬಿ ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀಕಂಠದತ್ತ ಮತ್ತಿತರರಿದ್ದರು.

Translate »