ಮೈಸೂರಿಗೆ ಹೊಸ ರೈಲುಗಳು, ಹಲವು ಯೋಜನೆ ಕಲ್ಪಿಸಿದ್ದಕ್ಕೆ ರೈಲ್ವೆ ಸಚಿವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ
ಮೈಸೂರು

ಮೈಸೂರಿಗೆ ಹೊಸ ರೈಲುಗಳು, ಹಲವು ಯೋಜನೆ ಕಲ್ಪಿಸಿದ್ದಕ್ಕೆ ರೈಲ್ವೆ ಸಚಿವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ

March 14, 2020

ನವದೆಹಲಿ, ಮಾ.13 – ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಸಂಪರ್ಕ ಸಾಧಿಸಲು ರೈಲುಗಳ ಸಂಖ್ಯೆ ಹೆಚ್ಚಿಸಿದ್ದಕ್ಕಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಗುರುವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಮೇಲಿನ ತಮ್ಮ ಭಾಷಣದಲ್ಲಿ, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಮತ್ತು ಇತರ ನಗರಗಳಿಗೆ ಸಾಕಷ್ಟು ಸಂಪರ್ಕ ಸಾಧ್ಯವಾಗಿಸಲು ಹಣಕಾಸು ಅನುದಾನ ಕಲ್ಪಿಸಿದ ರೈಲ್ವೆ ಸಚಿವಾ ಲಯಕ್ಕೆ ಧನ್ಯವಾದ ಸಲ್ಲಿಸಿದರು.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ರೈಲ್ವೆ ಮಾಜಿ ಸಚಿವ ಸುರೇಶ್ ಪ್ರಭು, ಡಿ.ವಿ.ಸದಾನಂದಗೌಡ ಮತ್ತು 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮೈಸೂರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈಸೂರು ಮತ್ತು ಬೆಂಗಳೂರು ನಡುವೆ ಟ್ರ್ಯಾಕ್ ಡಬ್ಲಿಂಗ್, ವಿದ್ಯುದ್ದೀಕರಣ ಕಾಮಗಾರಿ ಹಾಗೂ ಇನ್ನಿತರ ಯೋಜನೆಗಳ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಜೋಡಿ ಹಳಿ ಯೋಜನೆ ಯುಪಿಎ ಆಳ್ವಿಕೆಯ 10 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಈಗ ನರೇಂದ್ರ ಮೋದಿ ಸರ್ಕಾರ ಅದನ್ನು ಪೂರ್ಣಗೊಳಿಸಿದೆ. ಮೈಸೂರು-ಕೊಡಗು ಸಂಸದನಾಗಿ ನಾನು ಆ ಕಾರ್ಯ ಸಾಧಿಸಿದೆ ಎಂದ ಅವರು, ಮೈಸೂರು-ಬೆಂಗಳೂರು ಡಬಲ್ ಟ್ರ್ಯಾಕ್ ನಿರ್ಮಾಣ ಸಂದರ್ಭದಲ್ಲಿ ಅಡಚಣೆಯಾಗಿದ್ದ 228 ವರ್ಷಗಳ ಹಳೆಯ ಮತ್ತು 1,050 ಟನ್ ತೂಕದ ಟಿಪ್ಪು ಶಸ್ತ್ರಾಗಾರವನ್ನು ಸ್ಥಳಾಂ ತರಿಸಲು ಬೇಕಾಗಿದ್ದ 13 ಕೋಟಿ ರೂ.ಗಳನ್ನು ವಿಶೇಷ ಅನುದಾನದಡಿ ಮಂಜೂರು ಮಾಡಿ ಕೇಂದ್ರ ಸರ್ಕಾರ ಮಹತ್ತರವಾದ ಕಾರ್ಯವನ್ನು ಮಾಡಿತು ಎಂದರು.

ಅಲ್ಲದೆ, ವಿಶ್ವಮಾನವ ಎಕ್ಸ್‍ಪ್ರೆಸ್, ಪ್ಯಾಲೇಸ್ ಕ್ವೀನ್ ಹಂಸಫರ್ ಎಕ್ಸ್‍ಪ್ರೆಸ್, ಮೈನ್‍ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಟ್ರೈನ್ಸ್ (ಮೆಮು), ವಾರಣಾಸಿ ಎಕ್ಸ್‍ಪ್ರೆಸ್ ಮತ್ತು ಇನ್ನಿತರ ರೈಲುಗಳನ್ನು ಮೈಸೂರಿನವರೆಗೆ ವಿಸ್ತರಿಸಿದ್ದನ್ನು ಉಲ್ಲೇಖಿಸಿದ ಅವರು, “ಮೈಸೂರಿನಿಂದ ದೇಶದ ಪ್ರಮುಖ ರಾಜಧಾನಿಗಳಾದ ದಕ್ಷಿಣ ಭಾರತದ ಚೆನ್ನೈ, ಹೈದರಾಬಾದ್ ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ನಗರಗಳಿಗೆ ನಿರಂತರವಾಗಿ ಪ್ರಯಾಣಿಸುವ ಮೈಸೂರಿನ ಸಾವಿರಾರು ಪ್ರಯಾಣಿಕರಿಗೆ ಈ ರೈಲುಗಳು ವರದಾನವಾಗಿವೆ ಎಂದು ಲೋಕಸಭೆಯಲ್ಲಿ ತಿಳಿಸಿದರು.

ಮೈಸೂರು-ಕುಶಾಲನಗರ ರೈಲ್ವೆ ಲೈನ್, ನಾಗನಹಳ್ಳಿ ಸಮೀಪ ನೂತನ ಸ್ಯಾಟಲೈಟ್ ಸ್ಟೇಷನ್ ಮತ್ತು ಕಡಕೊಳದಲ್ಲಿ ರೈಲ್ವೆ ಕಂಟೈನರ್ ಯಾರ್ಡ್ (ಕಂಟೈನರ್ ಕಾರ್ಪೋರೇಷನ್ ಆಫ್ ಇಂಡಿಯಾ) ಮತ್ತು ಮೈಸೂರು ರೈಲ್ವೆ ವಸ್ತು ಸಂಗ್ರಹಾ ಲಯದ ನವೀಕರಣಕ್ಕಾಗಿ 9 ಕೋಟಿ ಅನುದಾನ ಮಂಜೂರು ಮಾಡಿದ್ದನ್ನು ಉಲ್ಲೇಖಿಸಿದರು. ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೊದಲು ಒಂದೇ ಒಂದು ವಿಮಾನವಷ್ಟೇ ಹಾರಾಡುತ್ತಿತ್ತು. ಈಗ ಹಲವಾರು ವಿಮಾನಗಳು ಹಾರಾ ಡುತ್ತಿರುವುದಕ್ಕೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಕೊಡುಗೆ ಕಾರಣ ಎಂದು ನೆನಪು ಮಾಡಿಕೊಳ್ಳುವುದನ್ನು ಸಂಸದರು ಮರೆಯಲಿಲ್ಲ.

“2017ರಲ್ಲಿ ಪ್ರಥಮ ಬಾರಿ ಅಂದಿನ ಕೇಂದ್ರದ ಇಂಧನ, ಕಲ್ಲಿದ್ದಲು, ನವೀಕೃತ ಇಂಧನಗಳ ರಾಜ್ಯ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು ಖಾಸಗಿ ಜೆಟ್ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಲ್ಲಿ ಇಳಿದ ಕೂಡಲೇ `ಮೈಸೂರು ಅತ್ಯಂತ ಸುಂದರ ನಗರಿ’ (Mysore is a beautiful place) ಎಂದಿದ್ದರು. ಆಗ ನಾನು ಮೈಸೂರಿನಿಂದ ಚೆನ್ನೈಗೆ ಒಂದೇ ಒಂದು ವಿಮಾನ ಹಾರಾಡು ತ್ತಿರುವುದನ್ನು ಅವರ ಗಮನಕ್ಕೆ ತಂದೆ. ತಕ್ಷಣ ಗೋಯಲ್ ಅವರು ಅಂದಿನ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರಿಗೆ ಕರೆ ಮಾಡಿ, ಮೈಸೂರಿನಿಂದ ಇನ್ನೂ ಹೆಚ್ಚಿನ ವಿಮಾನಗಳ ಹಾರಾಟವನ್ನು ಆರಂಭಿಸುವಂತೆ ಸಲಹೆ ನೀಡಿದರು ಎಂದು ಪ್ರತಾಪ್ ಸಿಂಹ ನೆನಪಿಸಿಕೊಂಡರು.

“ಪಿಯೂಷ್ ಗೋಯಲ್ ಅವರ ಕಾರ್ಯತತ್ಪರತೆಯಿಂದಾಗಿ ನರೇಂದ್ರ ಮೋದಿ ಸರ್ಕಾರ ಉಡಾನ್ ಯೋಜನೆಗೆ ಚಾಲನೆ ನೀಡಿತು. ಇದರಿಂದಾಗಿ ಪ್ರಸ್ತುತ ಮೈಸೂರಿ ನಿಂದ ಪ್ರತಿದಿನ 8 ವಿಮಾನಗಳು ಹಾರಾಡುತ್ತಿವೆ’’ ಎಂದು ಪ್ರತಾಪ್ ಸಿಂಹ ಸದನಕ್ಕೆ ತಿಳಿಸಿ, ತಮ್ಮ ಪ್ರಸ್ತಾವನೆಗಳಿಗೆಲ್ಲಾ ಮನ್ನಣೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Translate »