ಆಗಸ್ಟ್ ಎರಡನೇ ವಾರದಲ್ಲಿ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಹೊಸ ಕಚೇರಿ ಆರಂಭ
ಮೈಸೂರು

ಆಗಸ್ಟ್ ಎರಡನೇ ವಾರದಲ್ಲಿ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಹೊಸ ಕಚೇರಿ ಆರಂಭ

July 13, 2018
  • ಕೊನೆಗೂ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ
  • ಸುಸಜ್ಜಿತ ಕಟ್ಟಡದಲ್ಲಿ ಚಟುವಟಿಕೆ ಆರಂಭವಾಗಲಿದೆ

ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿ ನಾರಾಯಣ ಹೃದಯಾಲಯದ ಬಳಿ ಕಳೆದ ಎರಡು ವರ್ಷದ ಹಿಂದೆ 9.30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಪೂರ್ವ ಕಚೇರಿ ಹಾಗೂ ಡ್ರೈವಿಂಗ್ ಟ್ರಾಕ್ ಕೊನೆಗೂ ಕಾರ್ಯ ನಿರ್ವಹಿಸುವುದಕ್ಕೆ ಕಾಲಸನ್ನಿಹಿತವಾಗಿದ್ದು, ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ನೂತನ ಕಚೇರಿಗೆ ಚಟುವಟಿಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಚಾಲನೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ಹಾಗೂ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಬಲ್ಲವರಿಗಾಗಿ ಚಾಲನಾ ಪರವಾನಗಿ ನೀಡುವುದಕ್ಕಾಗಿ ಸುಸಜ್ಜಿತ ಟ್ರಾಕ್‍ನೊಂದಿಗೆ ಪ್ರಾದೇಶಿಕ ಸಾರಿಗೆಯ ಪೂರ್ವ ಕಚೇರಿಗೆ ಹೊಸ ಕಟ್ಟಡವನ್ನು ಕಳೆದ ಎರಡು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಇದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 8 ಎಕರೆ 10 ಗುಂಟೆ ಭೂಮಿಯನ್ನು ನೀಡಿತ್ತು. ಎರಡು ಮಹಡಿಯುಳ್ಳ ಪಾರಂಪರಿಕ ಶೈಲಿಯ ಕಟ್ಟಡವನ್ನು ನಿರ್ಮಿಸಲಾಗಿತ್ತು. ಹೊಸ ಕಟ್ಟಡವನ್ನು 2017ರ ಜೂನ್ 3ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಆದರೆ ಪೀಠೋಪಕರಣ, ವಿದ್ಯುತ್ ಸಂಪರ್ಕದ ವೈರಿಂಗ್ ಮಾಡಲು ಕರೆಯಲಾಗಿದ್ದ ಟೆಂಡರ್ ಕೆಲ ಕಾರಣದಿಂದರದ್ದಾಗಿತ್ತು.

ಇದರಿಂದ ಕಟ್ಟಡವಿದ್ದರೂ ಪೀಠೋಪಕರಣ ಹಾಗೂ ಸೌಲಭ್ಯವಿಲ್ಲದೆ ಹೊಸ ಕಚೇರಿಯಲ್ಲಿ ಯಾವುದೇ ಚಟುವಟಿಕೆ ನಡೆಯದೆ ಸ್ತಬ್ಧವಾಗಿತ್ತು. ಆದರೆ ಇದೀಗ ಹೊಸ ಕಟ್ಟಡ ಸದ್ದು ಮಾಡುತ್ತಿದ್ದು, ಒಂದು ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ.
ಕಟ್ಟಡದಲ್ಲಿ ಸುಮಾರು 15 ವಿಶಾಲವಾದ ಕೊಠಡಿಗಳು, ನಿರೀಕ್ಷಣಾ ಸಭಾಂಗಣ, ವಿವಿಧ ಮಾಹಿತಿ ನೀಡುವುದಕ್ಕೆ ಕೌಂಟರ್, ಖಜಾನೆ, ದಾಖಲೆಗಳ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಜನರೇಟರ್, ಕುಡಿಯುವ ನೀರಿನ ವ್ಯವಸ್ಥೆಯೂ ಮಾಡಲಾಗಿದ್ದು, ಚಾಲನಾ ಪರವಾನಗಿ ಪಡೆಯಲು ಹಾಗೂ ವಾಹನಗಳ ನೊಂದಣ ಮಾಡಿಸಿಕೊಳ್ಳಲು ಬರುವವರಿಗೆ ಉತ್ತಮವಾದ ವಾತಾವರಣ ಹೊಸ ಕಟ್ಟಡದಲ್ಲಿದೆ. ಬೆಂಗಳೂರಿನ ಸಂಸ್ಥೆಯೊಂದು ಪೀಠೋಪಕರಣ ಅಳವಡಿಕೆಗೆ ಟೆಂಡರ್ ಪಡೆದಿದ್ದು, ಪೀಠೋಪಕರಣ ಅಳವಡಿಸುವುದಕ್ಕೆ ಮುಂದಾಗಿದೆ. ಈಗಾಗಲೇ ವೈರಿಂಗ್ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಇನ್ನೆರಡು ದಿನದಲ್ಲಿ ಕಚೇರಿಗೆ ಅಗತ್ಯವಾದ ಪೀಠೋಪಕರಣಗಳು ಹೊಸ ಕಟ್ಟಡಕ್ಕೆ ಆಗಮಿಸಲಿವೆ.

ಬಾಡಿಗೆ ಕಟ್ಟಡದಲ್ಲಿ: ಪ್ರಾದೇಶಿಕ ಸಾರಿಗೆ ಇಲಾಖೆಯ ಮೈಸೂರಿನ ಪೂರ್ವ ಕಚೇರಿಯು ಕಳೆದ ಎರಡು ವರ್ಷದಿಂದ ಕಲ್ಯಾಣಗಿರಿಯ ಡಾ. ರಾಜ್‍ಕುಮಾರ್ ರಸ್ತೆಯಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿತ್ತು. ತಿಂಗಳಿಗೆ 75 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಆದರೆ ಈ ಕಟ್ಟಡ ಕಿಷ್ಕಿಂಧೆಯಾಗಿತ್ತು. ಇದರಿಂದ ಚಾಲನಾ ಪರವಾನಗಿ, ವಾಹನ ನೋಂದಣಿ ಸೇರಿದಂತೆ ವಿವಿಧ ಕಾರ್ಯ ನಿಮಿತ್ತ ಕಚೇರಿಗೆ ಬರುವ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಹೊಸ ಕಟ್ಟಡಕ್ಕೆ ಚಟುವಟಿಕೆಯನ್ನು ಸ್ಥಳಾಂತರ ಮಾಡುವಂತೆ ಸಾರ್ವಜನಿಕ ವಲಯದಿಂದ ಒತ್ತಾಯಗಳು ಹೆಚ್ಚಾಗತೊಡಗಿದ್ದವು.

ಟ್ರಾಕ್‍ನಲ್ಲಿ ಪರಿಶೀಲನೆ: ಪೂರ್ವ ಪ್ರಾದೇಶಿಕ ಕಚೇರಿಯ ಕಟ್ಟಡದ ನಿರ್ಮಾಣದ ವೇಳೆ ಇ-ಟ್ರಾಕ್ ನಿರ್ಮಿಸಲಾಗಿತ್ತು. ಕಂಪ್ಯೂಟರೀಕರಣದ ವ್ಯವಸ್ಥೆಯೊಂದಿಗೆ ಸಿದ್ಧಪಡಿಸಲಾಗಿದ್ದ ಇ-ಟ್ರಾಕ್‍ನಲ್ಲಿ ನಾಲ್ಕು ಹಾಗೂ ಆರು ಚಕ್ರದ ವಾಹನಗಳ ಚಾಲಕರ ಚಾಲನಾ ಪರೀಕ್ಷೆಯನ್ನು ನಡೆಸಿ ಚಾಲನೆಯಲ್ಲಿ ಪರಿಣಿತಿ ಹೊಂದಿದವರಿಗೆ ಮಾತ್ರ ಡ್ರೈವಿಂಗ್ ಲೈಸೆನ್ಸ್ ನೀಡುವುದಕ್ಕೆ ಸಾರಿಗೆ ಇಲಾಖೆ ಉದ್ದೇಶಿಸಿತ್ತು. ಆಗಸ್ಟ್ 2ನೇ ವಾರದಿಂದ ಹೊಸ ಕಟ್ಟಡ ಆರಂಭವಾಗುತ್ತದೆ. ಅಲ್ಲದೇ ಡ್ರೈವಿಂಗ್ ಟ್ರಾಕ್ ಅನ್ನು ಬಳಸಲಾಗುತ್ತದೆ. ಆದರೆ ಡ್ರೈವಿಂಗ್ ಟ್ರಾಕ್‍ನಲ್ಲಿ ಕಂಪ್ಯೂಟರೀಕರಣದ ವ್ಯವಸ್ಥೆ ಇನ್ನೂ ಮಾಡದೇ ಇರುವುದರಿಂದ ಕೇವಲ ಚಾಲನಾ ಟೆಸ್ಟ್ ಅನ್ನು ಮಾತ್ರ ಇ-ಟ್ರಾಕ್‍ನಲ್ಲಿ ಮಾಡಲಾಗುತ್ತದೆ.

ಇ-ಟ್ರಾಕ್‍ನಲ್ಲಿ: ಇ-ಟ್ರಾಕ್‍ನಲ್ಲಿ ಸ್ಕ್ಯಾನರ್, ಬೀಪ್ ಶಬ್ದ ಮಾಡುವ ಯಂತ್ರ, ಸೆನ್ಸಾರ್ ಅನ್ನು ಅಳವಡಿಸಲಾಗುತ್ತದೆ. ಚಾಲನೆಯಲ್ಲಿ ಕೌಶಲ್ಯವನ್ನು ಕಲಿಸುವುದಕ್ಕಾಗಿ ಇ-ಟ್ರಾಕ್ ವ್ಯವಸ್ಥೆ ಸಹಕಾರಿಯಾಗಲಿದೆ. ಇದರಲ್ಲಿ `8’ ಮಾದರಿಯ ಟ್ರಾಕ್, ಇಳಿಜಾರು, ದಿಣ್ಣೆ, ಸೇತುವೆ, ಏರ್‍ಪಿನ್ ಬೆಂಡ್, ತಿರುವು ಸೇರಿದಂತೆ ವಿವಿಧ ಟ್ರಾಕ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇ-ಟ್ರಾಕ್‍ನ ಎರಡೂ ಬದಿಯಲ್ಲಿಯೂ ಸ್ಕ್ಯಾನರ್‍ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. ಚಾಲನಾ ಟೆಸ್ಟ್ ವೇಳೆ ವಾಹನ ಸ್ಕ್ಯಾನರ್‍ಗೆ ತಗುಲಿದರೆ ಆ ಚಾಲಕನ ಪರೀಕ್ಷೆಯನ್ನು ಅನುತ್ತೀರ್ಣಗೊಳಿಸಲಾಗುತ್ತದೆ. ಇದರಿಂದ ಚಾಲನೆಯಲ್ಲಿ ಪರಿಣಿತರಾದವರಿಗೆ ಡ್ರೈವಿಂಗ್ ಲೈಸೆನ್ಸ್ ಸಿಕ್ಕುವುದರಿಂದ ಅಪಘಾತಗಳ ಸಂಖ್ಯೆ ಇಳಿಮುಖವಾಗಲಿದೆ. ಇ-ಟ್ರಾಕ್ ಅನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈಗಾಗಲೇ ಬೆಂಗಳೂರು, ಶಿವಮೊಗ್ಗ, ಹಾಸನದಲ್ಲಿ ಇ-ಟ್ರಾಕ್ ವ್ಯವಸ್ಥೆ ಜಾರಿಯಲ್ಲಿದೆ.

ಹೊಸ ಕಟ್ಟಡದ ಕಾರ್ಯಾರಂಭಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪೀಠೋಪಕರಣಗಳ ಅಳವಡಿಕೆಗೆ ಅಳವಡಿಸುವ ಕಾರ್ಯ ಆರಂಭವಾಗಿದೆ. ಆಗಸ್ಟ್ ತಿಂಗಳ 2ನೇ ವಾರದಲ್ಲಿ ಪೂರ್ವ ಕಚೇರಿಯ ಕಟ್ಟಡದಲ್ಲಿ ಪರವಾನಗಿ ಹಾಗೂ ವಾಹನ ನೋಂದಣ ಯ ಚಟುವಟಿಕೆಯು ನಡೆಯಲಿದೆ. ಆದರೆ ಕಂಪ್ಯೂಟರೀಕರಣಗೊಳಿಸಿದ ಟ್ರಾಕ್ ಬಳಕೆಗೆ ಸಮಯ ಬೇಕಾಗಲಿದ್ದು, ಕೇವಲ ಟ್ರಾಕ್ ಅನ್ನು ಬಳಸಿಕೊಳ್ಳಲಾಗುತ್ತಿದೆ. – ಎಂ.ಪ್ರಭುಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ

Translate »