ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಸ್ಥಗಿತಕ್ಕೆ ಹೈಕೋರ್ಟ್‍ಗೆ ಪಿಐಎಲ್
ಮೈಸೂರು

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಸ್ಥಗಿತಕ್ಕೆ ಹೈಕೋರ್ಟ್‍ಗೆ ಪಿಐಎಲ್

July 13, 2018

ಮೈಸೂರು: ಪ್ರಸ್ತಾಪಿತ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ವಿರೋಧಿಸಿ ಸಲ್ಲಿ ಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಉತ್ತರಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರ ವನ್ನು ಕೇಳಿದೆ. ರಾಜ್ಯ ಸರ್ಕಾರ ಪಿಐಎಲ್‍ಗೆ ಜುಲೈ 25ರೊಳಗೆ ಪ್ರತಿಕ್ರಿಯೆ ನೀಡಬೇಕು. ಅಲ್ಲಿಯವ ರೆಗೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

ಕೊಡಗು ಜಿಲ್ಲೆಯ ಮೂಲಕ ಕೇರಳದ ತಲ ಚೇರಿ ಮತ್ತು ಮೈಸೂರು ನಡುವೆ ರೈಲು ಮಾರ್ಗ ಮತ್ತು ಮೈಸೂರು-ಕುಶಾಲನಗರ-ಮಡಿಕೇರಿ ರೈಲು ಮಾರ್ಗಗಳ ನಿರ್ಮಾಣದ ಯೋಜನೆ ಯನ್ನು ಸ್ಥಗಿತಗೊಳಿಸುವಂತೆ ಪ್ರಶ್ನಿಸಿ ಕೂರ್ಗ್ ವೈಲ್ಡ್‍ಲೈಫ್ ಸರ್ಕಾರೇತರ ಸಂಸ್ಥೆ ಅಧ್ಯಕ್ಷರೂ ಹಾಗೂ ಕೊಡಗು ಮತ್ತು ಕಾವೇರಿ ಉಳಿಸಿ ಅಭಿ ಯಾನದ ಸಮನ್ವಯಾಧಿಕಾರಿಯೂ ಆದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ ಅವರು ಹೈಕೋರ್ಟ್‍ಗೆ ಸಾರ್ವಜನಿಕ ಹಿತರಕ್ಷಣಾ ಅರ್ಜಿ (ಪಿಐಎಲ್) (ಪಿಐಎಲ್ ಸಂಖ್ಯೆ ಡಬ್ಲ್ಯುಪಿ 17990/2018) ಅನ್ನು ಏಪ್ರಿಲ್ 24 ರಂದು ಸಲ್ಲಿಸಿದ್ದರು.

ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯ ಮೂರ್ತಿ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಪಡೆದು ತಿಳಿಸು ವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜು.25ಕ್ಕೆ ಮುಂದೂಡಿತು.

ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿ ವಾಲಯದ ಕಾರ್ಯದರ್ಶಿ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ರೈಲ್ವೆ ಸಚಿವಾಲಯದ ಮುಖ್ಯ ಕಾರ್ಯದರ್ಶಿಗಳು ಮತ್ತು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳು ಅರ್ಜಿ ಪ್ರತಿವಾದಿಗಳಾಗಿದ್ದಾರೆ.

ಮುತ್ತಣ್ಣ ಅವರು ತಮ್ಮ ಅರ್ಜಿಯಲ್ಲಿ ಕೇರಳದ ತಲಚೇರಿಗೆ ಸಂಪರ್ಕ ಕಲ್ಪಿಸುವ ಮೈಸೂರು-ಕೊಡಗು ಜಿಲ್ಲೆ ಮಾರ್ಗ ಮತ್ತು ಮೈಸೂರು, ಕುಶಾಲನಗರ ಮತ್ತು ಮಡಿಕೇರಿ ಸಂಪರ್ಕ ಕಲ್ಪಿಸುವ ಎರಡು ಮಾರ್ಗಗಳಿಂದ ಹಸಿರು ಅರಣ್ಯ ಪ್ರದೇಶ ನಾಶವಾಗುತ್ತದೆ. ಪ್ರವಾಸೋದ್ಯಮ ಅಥವಾ ವಾಣಿಜ್ಯೀಕರಣ ಅಭಿವೃದ್ಧಿ ಉದ್ದೇಶದಿಂದ ಇಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದೆಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಹೈಕೋರ್ಟ್‍ಗೆ ಮನವಿ ಮಾಡಿದೆ.

ಕೇರಳದ ವಾಣ ಜ್ಯೋದ್ಯಮಿಗಳು ಮತ್ತು ವ್ಯಾಪಾರಸ್ಥರು ಕೇರಳ ಸರ್ಕಾರದ ಮೂಲಕ ಕೇಂದ್ರ ಸರ್ಕಾರವನ್ನು ಮೈಸೂರು-ತಲಚೇರಿ ರೈಲು ಮಾರ್ಗ ಸಂಪರ್ಕ ಯೋಜನೆಗೆ ಒತ್ತಾ ಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರೈಲ್ವೆ ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳನ್ನು ನಡೆಸಬಾರದೆಂದು ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯ ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಪಿರ್ಯಾದು ದಾರರ ಪ್ರಕಾರ,ಈ ಯೋಜನೆಗೆ ಸಂಬಂಧಿಸಿದಂತೆ ಮೈಸೂರು-ಕೋಜಿಕೋಡ್ ಮಧ್ಯೆ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಈಗಾಗಲೇ 54 ಸಾವಿರ ಮಗಳನ್ನು ಕತ್ತರಿಸಲಾಗಿದೆ. ಈಗ ಈ ಎರಡು ರೈಲು ಮಾರ್ಗಗಳ ಯೋಜನೆಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 2 ರಿಂದ 3 ಲಕ್ಷ ಮರಗಳನ್ನು ಕತ್ತರಿಸಲು ಅಂದಾಜಿಸಲಾಗಿದೆ.

“ಈ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವೆಂದರೆ ಕರ್ನಾಟಕ ಮತ್ತು ಕೇರಳದಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಹೊರತು ಜನರ ಜೀವನೋಪಾಯಕ್ಕಲ್ಲ’’ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇಲ್ಲಿ ಆನೆ ಕಾರಿಡಾರ್ ಇರುವ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಈ ಯೋಜನೆಯು ಮಾನವ- ಪ್ರಾಣಿಗಳ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈಲು ಮಾರ್ಗ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದೆಂದು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷಿ ಯಿಂದ ಜೀವವೈವಿಧ್ಯ ಹಾಳುವ ಮಾಡುವ ಯಾವುದೇ ಯೋಜನೆ ಅಥವಾ ರೈಲ್ವೆ ಯೋಜನೆಗೆ ಸಂಬಂಧಿಸಿದ ಸಮಗ್ರ ಸರ್ವೆ ಕಾರ್ಯ ಇನ್ನಿತರ ಚಟುವಟಿಕೆ ಗಳನ್ನು ನಡೆಸದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರ್ಟ್‍ಗೆ ಮನವಿ ಮಾಡಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಎನ್‍ಹೆಚ್‍ಎಐ ವಿರುದ್ಧ ಮತ್ತೊಂದು ಪಿಐಎಲ್

ಕರ್ನಲ್ ಮುತ್ತಣ್ಣ, ಕೊಡಗಿನ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸು ವಂತೆ ಪ್ರಶ್ನಿಸಿ ಹೈಕೋರ್ಟ್‍ಗೆ ಮತ್ತೊಂದು ಸಾರ್ವಜನಿಕ ಹಿತರಕ್ಷಣಾ ಅರ್ಜಿಯನ್ನು ಸಲ್ಲಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು “ಕೊಡಗು ಜಿಲ್ಲೆಯಲ್ಲಿ ದಕ್ಷಿಣ ಕೊಡಗು ಅಥವಾ ಕುಶಾಲನಗರದವರೆಗೆ ಯಾವುದೇ ರೈಲ್ವೆ ಮಾರ್ಗದ ಅವಶ್ಯಕತೆಯಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಯಾವುದೇ ಭಾರೀ ವಸ್ತುಗಳಾದ ಕಬ್ಬಿಣ, ಉಕ್ಕು ಇನ್ನಿತರ ವಸ್ತುಗಳನ್ನು ಸಾಗಿಸುವುದಿಲ್ಲ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ರಸ್ತೆಗಳು ಉತ್ತಮವಾಗಿದ್ದು, ಬಸ್‍ಗಳು ಖಾಲಿಯಾಗಿ ಸಂಚರಿಸುತ್ತವೆ. ಆದ್ದರಿಂದ ರೈಲು ಮಾರ್ಗದ ಅವಶ್ಯಕತೆ ಇಲ್ಲ’’ ಎಂದರು.

ಈ ಯೋಜನೆಗೆ ಕೇರಳ ರಾಜ್ಯದ ವಾಣಿಜ್ಯೋದ್ಯಮಿಗಳು ಕೈಜೋಡಿಸಿದ್ದು, ಈ ನಾಶಕಾರಿ ಯೋಜನೆ ಅನುಷ್ಠಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಅವರು ತಿಳಿಸಿದರು. ಕುಶಾಲ ನಗರದವರೆಗೆ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಬಂದರೆ ಸಾವಿರಾರು ಮರಗಳು ನಾಶವಾಗುವುದಲ್ಲದೆ ಕೊಡಗಿನಂತ ಸಣ್ಣ ಜಿಲ್ಲೆಯಲ್ಲಿ ಜನಸಂಖ್ಯಾ ಒತ್ತಡ ಹೆಚ್ಚಾಗುತ್ತದೆ. ಈಗಾಗಲೇ ಕೈಗೆತ್ತಿಕೊಂಡಿರುವ ಬುದ್ಧಿಹೀನ ಯೋಜನೆಗಳಿಂದ ಕೊಡಗು ಜಿಲ್ಲೆ ನಾಶವಾಗುತ್ತಿದೆ ಎಂದು ತಿಳಿಸಿದ್ದಾರೆ.

Translate »