ಮೈಸೂರು: ಅಗಲೀಕರಣ ಹಾಗೂ ಅಭಿವೃದ್ಧಿಗೊಳ್ಳು ತ್ತಿರುವ ಮೈಸೂರಿನ ಇರ್ವಿನ್ ರಸ್ತೆಯ ಮೂರು ಕಟ್ಟಡಗಳ ತೆರವಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಇರ್ವಿನ್ ರಸ್ತೆ ಉಳಿಸಿ ಹೋರಾಟ ಸಮಿತಿಯ ತಾಜ್ ಮೊಹಮ್ಮದ್ ಖಾನ್ ತಿಳಿಸಿದ್ದಾರೆ.
ಇರ್ವಿನ್ ರಸ್ತೆಯ ವಕ್ಫ್ ಕಮಿಟಿ ಆಶ್ರಯದ ಜಮ್ಮಾ ಮಸೀದಿ ಕಟ್ಟಡ, ಚಿತ್ರಾಸ್ ಆಸ್ಪತ್ರೆ ಹಾಗೂ ಪ್ರಸಾದ್ ನರ್ಸಿಂಗ್ ಹೋಂ ಕಟ್ಟಡ ಗಳ ಭಾಗಶಃ ನೆಲಸಮಗೊಳಿಸುವುದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಡಾ.ಸಿದ್ದಪ್ಪ ಸುನಿಲ್ ದತ್ ಯಾದವ್ ತಡೆಯಾಜ್ಞೆ ನೀಡಿದ್ದಾರೆ ಎಂದು ತಾಜ್ ಮೊಹಮ್ಮದ್ ಖಾನ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಸದರಿ ಕಟ್ಟಡಗಳ ನೆಲಸಮಕ್ಕೆ ತಡೆಯಾಜ್ಞೆ ಕೋರಿ ಎರಡು ಖಾಸಗಿ ಆಸ್ಪತ್ರೆಗಳ ಮಾಲೀಕರು ಹಾಗೂ ವಕ್ಫ್ ಕಮಿಟಿ ಸದಸ್ಯರೊಬ್ಬರು ಪ್ರತ್ಯೇಕ ವಾಗಿ ರಿಟ್ ಅರ್ಜಿ(ಸಂಖ್ಯೆ 1240/19, 1207/19 ಮತ್ತು 1208) ಸಲ್ಲಿಸಿದ್ದರು. ಅರ್ಜಿ ಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಳು, ಆ ಮೂರು ಕಟ್ಟಡಗಳ ಭಾಗಶಃ ನೆಲಸಮ ತಡೆಯಾಜ್ಞೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜ್, ಈಗಾಗಲೇ ರಸ್ತೆ ಅಗಲೀ ಕರಣಕ್ಕಾಗಿ ಅಗತ್ಯ ವಿರುವ ತಮ್ಮ ಕಟ್ಟಡಗಳ ಭಾಗಶಃ ಭಾಗವನ್ನು ಬಿಟ್ಟುಕೊಡಲು 83 ಮಂದಿ ಒಪ್ಪಿಗೆ ನೀಡಿದ್ದಾರೆ. ಆ ಪೈಕಿ 41 ಮಂದಿಯ ಆಸ್ತಿಗಳನ್ನು ಉಪನೊಂದಣಾ ಧಿಕಾರಿ ಕಚೇರಿಯಲ್ಲಿ ಪಾಲಿಕೆ ಹೆಸರಿಗೆ ನೊಂದಾಯಿಸಿಕೊಂಡು ನಿಗದಿಪಡಿ ಸಿರುವ ಪರಿಹಾರದ ಹಣವನ್ನು ಮಾಲೀಕರಿಗೆ ಚೆಕ್ ಮೂಲಕ ನೀಡಿದ್ದೇವೆ. ಈಗಾಗಲೇ ಅವು ಗಳಲ್ಲಿ 14 ಕಟ್ಟಡಗಳ ಭಾಗಶಃ ಭಾಗವನ್ನು ನೆಲಸಮಗೊಳಿಸಿದ್ದೇವೆ ಎಂದು ತಿಳಿಸಿದರು. ನ್ಯಾಯಾಲಯವು ರಿಟ್ ಅರ್ಜಿ ಸಲ್ಲಿಸಿದ ಮೂವರಿಗೆ ವೈಯಕ್ತಿಕ ತಡೆ ನೀಡಿರಬಹುದು. ಸದ್ಯಕ್ಕೆ ಆ ಕಟ್ಟಡಗಳನ್ನು ಬಿಟ್ಟು ನೋಂದಣಿ ಯಾಗಿರುವ ಕಟ್ಟಡಗಳ ಭಾಗಶಃ ನೆಲಸಮ ಕಾರ್ಯವನ್ನು ನಾವು ಮುಂದುವರೆಸುತ್ತೇವೆ. ಹಾಲಿ ನಡೆಯುತ್ತಿರುವ ಇರ್ವಿನ್ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲು ಈಗ ನೀಡಿ ರುವ ತಡೆಯಾಜ್ಞೆ ಅನ್ವಯಿಸುವುದಿಲ್ಲ ವಾದ್ದರಿಂದ ರಸ್ತೆ ಕೆಲಸ ನಿಲ್ಲಿಸುವ ಪ್ರಶ್ನೆ ಇಲ್ಲ. ಯಾರ್ಯಾರು ನೋಂದಣಿ ಮಾಡಿ ಕೊಡುತ್ತಾರೋ ಅಂತಹ ಕಟ್ಟಡಗಳನ್ನು ನೆಲ ಸಮಗೊಳಿಸುವ ಕೆಲಸವನ್ನು ಮುಂದುವರೆ ಸುತ್ತೇವೆ ಎಂದರು. 2018ರ ಡಿಸೆಂಬರ್ 25 ರಂದು ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮ್ಮದ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಂದಿನಿಂದ ಕಟ್ಟಡಗಳ ನೆಲಸಮಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.