ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ
ಮೈಸೂರು

ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ

January 12, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, `ಮನೆ ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮದಡಿ ಶುಕ್ರವಾರವೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಇಲವಾಲ ಮತ್ತು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಸಾರ್ವ ಜನಿಕ ಸಂಪರ್ಕ ಸಭೆಗಳ ನಡೆಸಿ ಜನರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.

ಇಲವಾಲ ಹೋಬಳಿಯ ಕಟ್ಟೆನಾಯಕನಹಳ್ಳಿ, ಮಾಣಿಕ್ಯಪುರ, ಕಮರಹಳ್ಳಿ, ದೊಡ್ಡಮಾರಗೌಡನಹಳ್ಳಿ, ದೊಡ್ಡಹಟ್ಟಿಹುಂಡಿ, ಮರಯ್ಯನಹುಂಡಿ, ಕಟ್ಟೆ ಹುಂಡಿ, ನುಗ್ಗಹಳ್ಳಿ, ಜಯಪುರ ಹೋಬಳಿಯ ಮಾದಹಳ್ಳಿ, ಅನಗನಹಳ್ಳಿ, ತಿಬ್ಬಯ್ಯನಹುಂಡಿ ಇನ್ನಿ ತರ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಿ, ಜನರಿಂದ ಅಹವಾಲು ಸ್ವೀಕರಿಸಿದರು.

ಸಚಿವರು ಹೋದಲ್ಲೆಲ್ಲಾ ಗ್ರಾಮಗಳಲ್ಲಿ ಅಭೂತ ಪೂರ್ವ ಸ್ವಾಗತ ದೊರೆಯಿತು. ಗ್ರಾಮಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಈ ವೇಳೆ, ಚುನಾವಣೆ ಬಳಿಕ ಉನ್ನತ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸದ ಒತ್ತಡದಿಂದಾಗಿ ಗ್ರಾಮಗಳಿಗೆ ಬರಲಾಗದ್ದಕ್ಕೆ ಕ್ಷಮೆ ಕೋರಿ, ಜನರಿಗೆ ಮನವರಿಕೆ ಮಾಡಿಕೊಟ್ಟರು. ನೀರು, ರಸ್ತೆ, ವಿದ್ಯುತ್, ಶಾಲಾ ಕಟ್ಟಡ, ವೃದ್ಧಾಪ್ಯ, ಅಂಗವಿಕಲ ವೇತನ ಇನ್ನಿತರ ಸಮಸ್ಯೆಗಳ ಬಗ್ಗೆ ಜನರಿಂದ ದೂರುಗಳನ್ನು ಆಲಿಸಿದ ಸಚಿವರು, ಸಂಬಂಧಪಟ್ಟ ಸಚಿವರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿ ಮತ್ತೊಮ್ಮೆ ದೂರುಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕಟ್ಟೆನಾಯಕನಹಳ್ಳಿಯಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ, 6 ಲಕ್ಷದಲ್ಲಿ ಅಂಗನ ವಾಡಿ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು. ಕಟ್ಟೆಹುಂಡಿಯಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ, ನುಗ್ಗಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ, ಮಾದಹಳ್ಳಿ ಗ್ರಾಮದಲ್ಲಿ ಗ್ರಾಮವಿಕಾಸ ಯೋಜನೆಯಡಿ ಕಾಮಗಾರಿ ಹಾಗೂ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸ್ಥಳಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ `ಮನೆ ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮ ಹಾಕಿಕೊಂಡು ನಾನೇ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಪರಿಹರಿಸುತ್ತಿದ್ದೇನೆ. ಹೀಗೆ ಮಾಡಿದರೆ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಈ ಮೂಲಕ ಹಂತ ಹಂತವಾಗಿ ಜನರ ಸಮಸ್ಯೆ ಬಗೆಹರಿಸುವ ಗುರಿ ಹೊಂದಿರುವುದಾಗಿಯೂ ತಿಳಿಸಿದರು.

ವೃದ್ದಾಪ್ಯ ವೇತನ 2000ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿಗಳು ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಲ್ಲದೇ 20019ರ ಬಜೆಟ್ ನಲ್ಲಿ ವೃದ್ದಾಪ್ಯ ವೇತನವನ್ನು 2000ಕ್ಕೆ ಏರಿಸಲು ಚಿಂತಿಸಲಾಗುತ್ತಿದೆ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಸುತ್ತಮುತ್ತಲಿನ ರಸ್ತೆಗಳ ಡಾಂಬರೀಕರಣಕ್ಕೆ 8 ಕೋಟಿ ಟೆಂಡರ್ ಆಗಿದೆ. ಮಾದಹಳ್ಳಿಯ ಸುತ್ತ ಮುತ್ತ ಗ್ರಾಮಗಳ ಕೆರೆಗಳಿಗೆ ಕೆಆರ್‍ಎಸ್‍ನಿಂದ ನೀರು ತುಂಬಿಸಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಚುನಾವಣೆ ಬಳಿಕ ಪಕ್ಷಭೇದ ಬಿಟ್ಟು ಜನಸೇವೆ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಸಹಜ. ಆದರೆ ಚುನಾವಣೆ ಮುಗಿದ ಬಳಿಕ ಪಕ್ಷಭೇದವಿಲ್ಲದೆ ಸೇವೆ ನೀಡಬೇಕಾದದ್ದು ನಮ್ಮ ಗುರಿ. ಅದರಂತೆ ಎಲ್ಲರೂ ಒಟ್ಟಾಗಿ ಪಕ್ಷ ಭೇದ ಬಿಟ್ಟು ಜನಪರ ಕೆಲಸಗಳಲ್ಲಿ ನಿರತರಾಗಿದ್ದೇವೆ ಎಂದರು. ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ತಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ತಾಪಂ ಸದಸ್ಯರಾದ ಮಹದೇವು, ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಪೊಲೀಸ್ ಅಧೀಕ್ಷಕ ಅಮಿತ್‍ಸಿಂಗ್, ಅಪರ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ, ಉಪ ವಿಭಾಗಾಧಿಕಾರಿ ಶಿವೇಗೌಡ, ತಹಶೀಲ್ದಾರ್ ರಮೇಶ್‍ಬಾಬು, ತಾಪಂ ಇಒ ಲಿಂಗರಾಜಪ್ಪ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »