ಡಿ.ಗ್ರೂಪ್ ನೌಕರರಿಗೆ ಗೃಹ ನಿರ್ಮಾಣ, ನಿವೇಶನ  ಖರೀದಿಗೆ ಅನುದಾನ ಹೆಚ್ಚಿಸಲು ಆಗ್ರಹ
ಮೈಸೂರು

ಡಿ.ಗ್ರೂಪ್ ನೌಕರರಿಗೆ ಗೃಹ ನಿರ್ಮಾಣ, ನಿವೇಶನ ಖರೀದಿಗೆ ಅನುದಾನ ಹೆಚ್ಚಿಸಲು ಆಗ್ರಹ

January 12, 2019

ಮೈಸೂರು: ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವುದರೊಂದಿಗೆ ಹಳೆ ಪಿಂಚಣಿ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ-ಗ್ರೂಪ್ ನೌಕರರ ಸಂಘದ ಪಿ.ಕೆಂಪರಾಜು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿ-ಗ್ರೂಪ್ ನೌಕರರ ಸಂಘದ 2019ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಡಿ ಗ್ರೂಪ್ ನೌಕರರಿಗೆ ಮನೆ ನಿರ್ಮಾಣ ಅಥವಾ ನಿವೇಶನ ಖರೀದಿಗೆ 2,80 ಲಕ್ಷರೂ ಅನುದಾನ ನೀಡುತ್ತಿದೆ. ಇದರಿಂದ ಸರ್ಕಾರದ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರುತ್ತಿಲ್ಲ. ಈ ಅನು ದಾನವನ್ನು 5 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕು. ಆ ಮೂಲಕ ಸಂಕಷ್ಟ ಸ್ಥಿತಿಯಲ್ಲಿರುವ ಆರೋಗ್ಯ ಇಲಾಖೆ ಡಿ ಗ್ರೂಪ್ ನೌಕರರ ಹಿತ ಕಾಪಾಡುವಂತೆ ಮನವಿ ಮಾಡಿದರು.

ವರ್ಷಕ್ಕೆ 30ಕ್ಕೂ ಹೆಚ್ಚು ಸರ್ಕಾರಿ ರಜಾ ದಿನಗಳಲ್ಲಿ ಡಿ ಗ್ರೂಪ್ ನೌಕರರು ಕಾರ್ಯ ನಿರ್ವಹಿಸುತ್ತಾರೆ. ಆದರೆ ಕೇವಲ 15 ದಿನಗಳ ರಜೆ ಮುಂಗಡ ನೀಡಲಾಗುತ್ತಿದೆ. ಇದ ರಿಂದ ಕೆಲಸ ಮಾಡಿಯೂ 15 ದಿನಗಳ ವೇತನ ಪಡೆಯಲಾಗದೆ ಸಿಬ್ಬಂದಿಗೆ ಅನ್ಯಾಯ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ರಜೆ ದಿನಗಳ ಭತ್ಯೆ ನೀಡಬೇಕು. ಪ್ರಸ್ತುತ ಹೊಸದಾಗಿ ಜಾರಿಗೆ ತಂದಿರುವ ಪಿಂಚಣಿ ವ್ಯವಸ್ಥೆ ನೌಕರರಿಗೆ ಮಾರಕವಾಗಿದೆ. ಇದರಿಂದ ಡಿ ದರ್ಜೆ ನೌಕರರು ನಿವೃತ್ತಿಯಾದ ಬಳಿಕ ವೃದ್ಧಾಪ್ಯ ವೇತನದಂತೆ ಒಂದು ಸಾವಿರ ರೂ. ಪಿಂಚಣಿ ಲಭ್ಯವಾಗಲಿದೆ. ಇದನ್ನು ಮನಗಂಡು ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಹಿರಿಯ ಪತ್ರಕರ್ತ ಕಾಶಿನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ-ಗ್ರೂಪ್ ನೌಕರರ ಸಂಘದ 2019ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡಿ ಗ್ರೂಪ್ ನೌಕರರ ಸಂಘದ ಗೌರವಾಧ್ಯಕ್ಷ ಜವರೇಗೌಡ, ಉಪಾಧ್ಯಕ್ಷ ಕೆ.ನಾಗರಾಜು, ಕಾರ್ಯದರ್ಶಿ ಎಂ.ಅಶೋಕ, ನಿರ್ದೇಶಕ ರಾದ ಜಿ.ಸುರೇಶ್ ರಾವ್ ಚವ್ಹಾಣ್ ಇನ್ನಿತರರು ಉಪಸ್ಥಿತದ್ದರು.

Translate »