ಮೈಸೂರಲ್ಲಿದೆ ವೃದ್ಧೆಯರ ಚಿನ್ನಾಭರಣ  ದೋಚುವ ಖದೀಮರ ತಂಡ
ಮೈಸೂರು

ಮೈಸೂರಲ್ಲಿದೆ ವೃದ್ಧೆಯರ ಚಿನ್ನಾಭರಣ ದೋಚುವ ಖದೀಮರ ತಂಡ

January 12, 2019

ಮೈಸೂರು: ವೃದ್ಧ ಮಹಿಳೆಯರನ್ನು ವಂಚಿಸಿ, ಚಿನ್ನಾ ಭರಣ ದೋಚುವ ಜಾಲವೊಂದು ಮೈಸೂ ರಿನಲ್ಲಿ ಸಕ್ರಿಯವಾಗಿದ್ದು, ಯಾವ ನೆಪ ದಲ್ಲಾದರೂ ನಿಮ್ಮನ್ನು ಮೋಸದ ಖೆಡ್ಡಾಗೆ ಕೆಡವಿ, ಕ್ಷಣಾರ್ಧದಲ್ಲಿ ಕಣ್ಮರೆ ಯಾಗುತ್ತಾರೆ ಎಚ್ಚರ… ಎಚ್ಚರ…

ಪತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಇಬ್ಬರು ಖದೀಮರು ವಂಚಿಸಿ, ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ, ಪರಾರಿಯಾಗಿರುವ ಘಟನೆಯೇ ಇದ ಕ್ಕೊಂದು ತಾಜಾ ಉದಾಹರಣೆ. ಮೈಸೂ ರಿನ ಚಾಮರಾಜಪುರಂನ ಹಾಡ್ರ್ವಿಕ್ ಶಾಲೆ ಹಿಂಭಾಗದ ನಿವಾಸಿ ರಾಮ ರಾವ್ ಅವರ ಪತ್ನಿ ರತ್ನಾಬಾಯಿ(70) ವಂಚನೆಗೊಳಗಾದವರು. ಇವರಿಂದ ಚಿನ್ನಾಭರಣ ದೋಚಲು ಹೊಸತಲ್ಲದ ಅಪರೂಪದ ತಂತ್ರವೊಂದನ್ನು ಖದೀ ಮರು ಬಳಸಿದ್ದಾರೆ.

ರತ್ನಾಬಾಯಿ ಅವರು ಗುರುವಾರ ಮಧ್ಯಾಹ್ನ ಚಾಮುಂಡಿಪುರಂನಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್‍ಗೆ ತೆರಳಿ, ತಮ್ಮ ಪತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ತೆಗೆದುಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು. ನಂಜುಮಳಿಗೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ಪಕ್ಕದಲ್ಲೇ ಬರುತ್ತಿದ್ದ ಸುಮಾರು 35 ವರ್ಷದ ಅಪರಿಚಿತ ಮಹಿಳೆ ಮಾತನಾ ಡಿಸಿದ್ದಾಳೆ. ತಲೆಯ ಮೇಲೆ ಸೆರಗು ಹಾಕಿಕೊಂಡಿದ್ದ ಆಕೆ, ತುಂಬಾ ಬಿಸಿಲು ಎಂದು ಹೇಳುತ್ತಾ ರತ್ನಾಬಾಯಿ ಅವ ರೊಂದಿಗೆ ಹೆಜ್ಜೆ ಹಾಕಿದ್ದಾಳೆ. ಈ ಮಧ್ಯೆ ತುಸು ದೂರ ಹಿಂದಕ್ಕೆ ಉಳಿದು, ಮತ್ತೆ ರತ್ನಾಬಾಯಿ ಅವರ ಬಳಿ ಬಂದು, ನನಗೆ ಯಾರದೋ ಪರ್ಸ್ ಸಿಕ್ಕಿದೆ, ಯಾರೂ ಇಲ್ಲದ ಜಾಗದಲ್ಲಿ ಇದರಲ್ಲಿರುವ ಹಣವನ್ನು ಇಬ್ಬರೂ ಹಂಚಿಕೊಳ್ಳೋಣ ಎಂದು ಹೇಳಿದ್ದಾಳೆ.

ಹೇಗೋ ರತ್ನಾಬಾಯಿ ಅವರ ಮನಸ್ಸು ತನ್ನತ್ತ ಸೆಳೆದ ವಂಚಕಿ, ರಾಮಾನುಜ ರಸ್ತೆ 11ನೇ ಕ್ರಾಸ್‍ನಲ್ಲಿರುವ ಕಟ್ಟಡ ವೊಂದರ ಬಳಿಗೆ ಕರೆದುಕೊಂಡು ಹೋಗಿ ದ್ದಾಳೆ. ಅಲ್ಲಿ ಕುಳಿತು ತನ್ನ ಬಳಿ ಇದ್ದ ಪರ್ಸ್ ತೆರೆದಿದ್ದಾಳೆ. ಅದರಲ್ಲಿದ್ದ ಹಣವನ್ನು ಹಂಚಿಕೊಳ್ಳಲೆಂದು ತೆಗೆಯುವಷ್ಟರಲ್ಲಿ ಓರ್ವ ವ್ಯಕ್ತಿ ಅಲ್ಲಿಗೆ ಬರುತ್ತಾನೆ. ಆತನನ್ನು ಕಂಡ ಕೂಡಲೇ ವಂಚಕಿ ತನ್ನ ಕೈಲಿದ್ದ ಪರ್ಸ್ ಅನ್ನು ಬಚ್ಚಿಟ್ಟುಕೊಳ್ಳುತ್ತಾಳೆ. ಇದನ್ನು ಗಮ ನಿಸಿದ ಆ ವ್ಯಕ್ತಿ, ನನ್ನ ಪರ್ಸ್ ಕಳೆದಿದ್ದು, ನೀವೇ ತೆಗೆದುಕೊಂಡಿದ್ದೀರಿ ಎಂದು ಗದ ರುತ್ತಾನೆ. ಇದರಿಂದ ಬೆಚ್ಚಿದ ರತ್ನಾಬಾಯಿ ಹಾಗೂ ಆ ವಂಚಕಿ ಇಬ್ಬರೂ ನಾವು ತೆಗೆದು ಕೊಂಡಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ.

ಕೂಡಲೇ ಆ ವ್ಯಕ್ತಿ, ಸರಿ ನೀವು ತೆಗೆದು ಕೊಂಡಿಲ್ಲ ಎಂದಾದರೆ ನಿಮ್ಮ ಚಿನ್ನದ ಆಭರಣಗಳನ್ನು ತಲೆ ಮೇಲೆ ಇಟ್ಟು ಕೊಂಡು, ಪ್ರಮಾಣ ಮಾಡಿ ಎನ್ನುತ್ತಾನೆ. ಕೂಡಲೇ ವಂಚಕಿ ತನ್ನ ಸರ ಹಾಗೂ ಉಂಗುರವನ್ನು ತೆಗೆದು, ಪೇಪರ್‍ನಲ್ಲಿ ಸುತ್ತಿ, ತಲೆ ಮೇಲಿಟ್ಟುಕೊಂಡು ನಾನು ಪರ್ಸ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ನಂತರ ಆಕೆಯೇ ರತ್ನಾ ಬಾಯಿ ಅವರ ಕೊರಳಿನಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 5 ಗ್ರಾಂ ತೂಕದ ಉಂಗುರವನ್ನು ಬಿಚ್ಚಿ, ಪೇಪರ್ ನಲ್ಲಿ ಸುತ್ತುತ್ತಾಳೆ. ಬಳಿಕ ಅದನ್ನು ಮೊದಲು ರತ್ನಾಬಾಯಿ ಅವರ ತಲೆ ಮೇಲಿಟ್ಟು, ಬಳಿಕ ತನ್ನ ತಲೆ ಮೇಲಿಟ್ಟು ಪ್ರಮಾಣ ಮಾಡುತ್ತಾಳೆ. ಕಡೆಗೆ ಆ ಪೊಟ್ಟಣವನ್ನು ರತ್ನಾಬಾಯಿ ಅವರ ಸೆರಗಿನಲ್ಲಿ ಭದ್ರವಾಗಿ ಕಟ್ಟಿ, ಮನೆಗೆ ಹೋಗಿ ಹಾಕಿಕೊಳ್ಳಿ ಎಂದು ಹೇಳಿ, ಅಲ್ಲಿಂದ ತೆರಳುತ್ತಾಳೆ. ವಂಚಕಿ ಹಿಂದೆಯೇ ಆ ವ್ಯಕ್ತಿಯೂ ಕಾಲ್ಕೀಳುತ್ತಾನೆ. ಈ ಎಲ್ಲಾ ಬೆಳವಣಿಗೆಯಿಂದ ಭಯಭೀತ ರಾಗಿದ್ದ ರತ್ನಾಬಾಯಿ ಅವರು ಸ್ವಲ್ಪ ದೂರ ಹೋಗಿ, ಸೆರಗಿನ ಗಂಟು ಬಿಚ್ಚಿ ನೋಡಿ ದಾಗ, ಪೇಪರ್‍ನಲ್ಲಿ ಮರಳು ತುಂಬಿ, ಚಿನ್ನಾಭರಣ ವನ್ನು ದೋಚಿರುವುದು ಬೆಳಕಿಗೆ ಬಂದಿದೆ.

ಪೂರ್ವ ನಿಯೋಜನೆಯಂತೆ ರತ್ನಾಬಾಯಿ ಅವರನ್ನು ವಂಚಿಸಿ, ಕ್ಷಣಾರ್ಧದಲ್ಲಿ ಚಿನ್ನಾ ಭರಣ ದೋಚಿ, ಆ ವಂಚಕ ಜೋಡಿ ಪರಾರಿಯಾಗಿದೆ. ರತ್ನಾಬಾಯಿ ನೀಡಿರುವ ದೂರಿನನ್ವಯ ಕೃಷ್ಣರಾಜ ಠಾಣೆಯ ಪೊಲೀ ಸರು ಪ್ರಕರಣ ದಾಖಲಿಸಿಕೊಂಡು, ವಂಚಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ವಂಚನೆ ಜಾಲದ ಭೀತಿ: ಮೈಸೂರಿನಲ್ಲಿ ಈ ರೀತಿ ವೃದ್ಧ ಮಹಿಳೆಯರನ್ನು ವಂಚಿಸುವ ಪ್ರಕರಣ ಹೊಸದೇನಲ್ಲ. ಬಸ್ ನಿಲ್ದಾಣ, ಕೆ.ಆರ್.ಆಸ್ಪತ್ರೆ ಆವರಣ ಇನ್ನಿತರ ಸ್ಥಳಗಳಲ್ಲಿ ಮಹಿಳೆಯರನ್ನು ವಂಚಿಸಿರುವ ಪ್ರಕರಣ ಬಹಳಷ್ಟಿವೆ. ಕಳೆದ ವರ್ಷ ಗುಂಡ್ಲುಪೇಟೆ ಯಿಂದ ಮೈಸೂರಿನಲ್ಲಿರುವ ಮಗಳ ಮನೆಗೆ ಬಂದಿದ್ದ ಮಾದಮ್ಮ(70) ಅವ ರನ್ನು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪರಿಚಯ ಮಾಡಿಕೊಂಡು ಅಪರಿಚಿತ ವ್ಯಕ್ತಿ, ಸರ್ಕಾರದಿಂದ ಸಾಲ ಕೊಡಿಸುವು ದಾಗಿ ನಂಬಿಸಿ, 20 ಗ್ರಾಂ ಚಿನ್ನಾಭರಣ ದೋಚಿದ್ದ. ನಾನು ನಿಮ್ಮ ಮಗಳ ಮನೆ ಹತ್ತಿರವೇ ಇರುವುದು, ನಿಮಗೆ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ, ಚೆಲುವಾಂಬ ಆಸ್ಪತ್ರೆ ಕಡೆಗೆ ಕರೆದುಕೊಂಡು ಹೋಗಿ, ಚಿನ್ನಾಭರಣವಿದ್ದರೆ ನೆರವು ಸಿಗುವುದಿಲ್ಲ ಎಂದು, ಸರ ಹಾಗೂ ಓಲೆಗಳನ್ನು ಬ್ಯಾಗ್ ನಲ್ಲಿಟ್ಟು, ಕಡೆಗೆ ಮಾದಮ್ಮ ಅವರನ್ನು ಅಲ್ಲಿಯೇ ಬಿಟ್ಟು, ಬ್ಯಾಗ್‍ನೊಂದಿಗೆ ಪರಾರಿಯಾಗಿದ್ದ.

ಮೈಸೂರಿನ ಜೆ.ಪಿ.ನಗರದ ನಿವಾಸಿ ಪುಟ್ಟಮ್ಮ(55) ಎಂಬುವರನ್ನು ಇದೇ ರೀತಿ ವಂಚಿಸಿ, ಸುಮಾರು 38ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿ ದ್ದರು. ಗಾಂಧಿ ವೃತ್ತದಿಂದ ಸಯ್ಯಾಜಿ ರಾವ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದ ಪುಟ್ಟಮ್ಮ ಅವರಿಗೆ ಎದುರಾದ ಮಹಿಳೆ, ಆಸ್ಪತ್ರೆಯಲ್ಲಿರುವ ಮಗನ ಚಿಕಿತ್ಸೆಗೆ ಹಣ ಬೇಕೆಂದು, ತನ್ನಲ್ಲಿದ್ದ ನಕಲಿ ಚಿನ್ನಾಭರಣ ಮಾರಲು ಮುಂದಾಗು ತ್ತಾಳೆ. ಅದೇ ವೇಳೆಗೆ ವಂಚಕಿಯ ಸಹಚರ ಅಲ್ಲಿಗೆ ಬಂದು ಚಿನ್ನಾಭರಣ ವನ್ನು ಪರೀಕ್ಷಿಸಿ, ಇದು ಅಸಲಿ ಚಿನ್ನಾ ಭರಣ ನಾನೇ ಕೊಳ್ಳುತ್ತೇನೆ ಎಂದು ನಾಟಕವಾಡಿ, ಹಣ ತರಲೆಂದು ತೆರಳು ತ್ತಾನೆ. ಆಗ ಆ ವಂಚಕಿ ಈ ಆಭರಣ 5 ಲಕ್ಷ ರೂ. ಬೆಲೆ ಬಾಳುತ್ತದೆ. ನನಗೆ ಮಾರಲು ಇಷ್ಟವಿಲ್ಲ. ನಿಮಗಾದರೂ ಉಪಯೋಗಕ್ಕೆ ಬರಲಿ. ಇದಷ್ಟನ್ನೂ ನೀವೇ ಇಟ್ಟುಕೊಂಡು ನನಗೆ ನಿಮ್ಮ ಬಳಿಯಿರುವ ಸಣ್ಣ ಪುಟ್ಟ ವಡವೆ ಗಳನ್ನು ಕೊಡಿ ಸಾಕು ಎನ್ನುತ್ತಾಳೆ. ಇದನ್ನು ನಂಬಿದ ಪುಟ್ಟಮ್ಮ, ತಮ್ಮ ಅಸಲಿ ಚಿನ್ನಾಭರಣ ನೀಡಿ, ನಕಲಿ ಆಭ ರಣ ಪಡೆದು, ಮೋಸ ಹೋಗುತ್ತಾರೆ.
ಹೀಗೆ ವೃದ್ಧ ಮಹಿಳೆಯರು, ಗ್ರಾಮಾಂತರ ಪ್ರದೇಶದಿಂದ ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ವಿವಿಧ ಸೋಗಿನಲ್ಲಿ ವಂಚಿಸುತ್ತಿರುವ ಜಾಲವನ್ನು ಪತ್ತೆ ಹಚ್ಚಿ, ಕಠಿಣ ಕಾನೂನು ಕ್ರಮ ಜರುಗಿಸದಿದ್ದರೆ, ಇನ್ನೂ ಅದೆಷ್ಟು ಮಂದಿ ಬಲಿಯಾಗುತ್ತಾರೋ ತಿಳಿಯದು.

Translate »