ಕಡೆಗೂ ಇರ್ವಿನ್ ರಸ್ತೆ ಅಗಲೀಕರಣ  ಕಾಮಗಾರಿ ಆರಂಭ
ಮೈಸೂರು

ಕಡೆಗೂ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭ

December 26, 2018

ಮೈಸೂರು: ವಾಹನ ದಟ್ಟಣೆಯಿಂದ ಕೂಡಿದ ಮೈಸೂರಿನ ಹೃದಯ ಭಾಗದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಯನ್ನು ನಗರ ಪಾಲಿಕೆ ಕಡೆಗೂ ಆರಂಭಿಸಿದೆ. ನೆಹರು ಸರ್ಕಲ್ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಶಾಸಕ ಎಲ್. ನಾಗೇಂದ್ರ ಅವರು ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಪಾಲಿಕೆಯು ಮಾಲೀಕರಿಂದ ಖರೀದಿ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಮಹಮದ್ ಶಫಿ, ಕಾರ್ಪೊರೇಟರ್‍ಗಳಾದ ಸತೀಶ, ಎಂ.ಡಿ.ನಾಗರಾಜ್, ಮಾಜಿ ಕಾರ್ಪೊರೇಟರ್‍ಗಳಾದ ಕೆ.ಟಿ.ಚೆಲುವೇಗೌಡ, ಎಂ.ಶಿವಣ್ಣ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು. ನೆಹರು ಸರ್ಕಲ್ (ಹಳೇ ಪೋಸ್ಟ್ ಆಫೀಸ್)ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್‍ವರೆಗೆ ಒಟ್ಟು 850 ಮೀಟರ್ ಉದ್ದದ ಇರ್ವಿನ್ ರಸ್ತೆಯನ್ನು 4 ಪಥದ ರಸ್ತೆಯಾಗಿ 18 ಮೀಟರ್ ಅಗಲಕ್ಕೆ ವಿಸ್ತರಿಸಿ ಜೋಡಿ ರಸ್ತೆಯಾಗಿ ಅಭಿವೃದ್ಧಿಪಡಿಸುವ 4.50 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಯನ್ನು ಮೈಸೂರು ಮಹಾನಗರ ಪಾಲಿಕೆಯು ಕೈಗೆತ್ತಿಕೊಂಡಿದ್ದು, 2019ರ ಏಪ್ರಿಲ್ ಮಾಹೆಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ. ಇರ್ವಿನ್ ರಸ್ತೆಯ ಇಕ್ಕೆಲಗಳಲ್ಲಿ ಮಸೀದಿ, ಕಾಳಮ್ಮ ದೇವಸ್ಥಾನ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ಕೇಂದ್ರ ಗ್ರಂಥಾಲಯ, ಕಾವೇರಿ ಎಂಪೋರಿಯಂ, ಶಾಪಿಂಗ್ ಕಾಂಪ್ಲೆಕ್ಸ್, ಹೋಟೆಲ್, ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಸೇರಿದಂತೆ ಒಟ್ಟು 84 ಆಸ್ತಿಗಳನ್ನು (ಕಟ್ಟಡಗಳು) ರಸ್ತೆ ಅಗಲೀಕರಣಕ್ಕಾಗಿ ಗುರುತಿಸಿರುವ ಭಾಗವನ್ನು ತೆರವುಗೊಳಿಸುವ ಕಾರ್ಯ ಇಂದು ಆರಂಭವಾಗಿದೆ. ಕಟ್ಟಡಗಳ ಮಾಲೀಕರಿಗೆ ಚದರಡಿಗೆ 13,072 ರೂ.ನಂತೆ 25,823.94 ಚದರಡಿ ವಿಸ್ತೀರ್ಣಕ್ಕೆ ಪರಿಹಾರದ ಮೊತ್ತವಾಗಿ ಪಾಲಿಕೆಯು ಒಟ್ಟು 37 ಕೋಟಿ ರೂ. ಗಳನ್ನು ನೀಡುತ್ತಿದೆ. ಪಾಲಿಕೆ ವಲಯ 6ರ ಅಸಿಸ್ಟೆಂಟ್ ಕಮೀಷ್ನರ್ ವೀಣಾ ಅವರು ಪರಿಹಾರದ ಚೆಕ್ ವಿತರಿಸಿ ಮಾಲೀಕರಿಂದ ಆಸ್ತಿಯನ್ನು ಉಪನೋಂದಣಾಧಿ ಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈ ರಸ್ತೆಯ 84 ಆಸ್ತಿಗಳ ಪೈಕಿ ಈಗಾಗಲೇ 3 ಅನ್ನು ಖರೀದಿಸಿ ನೋಂದಣಿ ಮಾಡಿಕೊಂಡಿರುವುದರಿಂದ ನಂದಿನಿ ಹೋಟೆಲ್ ಮತ್ತು ಪಕ್ಕದ ಹಳೇ ಕಟ್ಟಡವನ್ನು ಇಂದು ನೆಲಸಮಗೊಳಿಸಲಾಯಿತು.
ಎಲ್ಲಾ ಆಸ್ತಿಗಳ ಮಾಲೀಕರು ರಸ್ತೆಗಾಗಿ ಕಟ್ಟಡದ ಭಾಗವನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದು, ಇಸಿ, ಖಾತಾಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದವರಿಗೆ ಪರಿಹಾರದ ಚೆಕ್ ವಿತರಿಸಿ ನೋಂದಣಿ ಮಾಡಿಕೊಳ್ಳುತ್ತಿದ್ದಂತೆಯೇ ಒಂದೊಂದೇ ಕಟ್ಟಡದ ಭಾಗವನ್ನು ತೆರವುಗೊಳಿಸಲಾಗುವುದು ಎಂದು ವಲಯಾಧಿಕಾರಿ ವೀಣಾ ‘ಮೈಸೂರು ಮಿತ್ರ’ ನಿಗೆ ತಿಳಿಸಿದರು.

ರಸ್ತೆಯ ಎರಡೂ ಬದಿಯಲ್ಲಿ ಕಾಂಕ್ರಿಟ್ ಬಾಕ್ಸ್ ಡ್ರೇನ್, ಮಧ್ಯ ಮೀಡಿಯನ್, ಬೀದಿ ದೀಪ ಅಳವಡಿಸಿ 18 ಮೀಟರ್ ಅಗಲಕ್ಕೆ 4 ಪಥದ ರಸ್ತೆ ನಿರ್ಮಿಸಲು ಪಾಲಿಕೆಯು 4.50 ಕೋಟಿ ರೂ. ಖರ್ಚು ಮಾಡುತ್ತಿದ್ದು, ಕಟ್ಟಡಗಳನ್ನು ತೆರವುಗೊಳಿಸಲು 33,22,000 ರೂ.ಗಳನ್ನು ನಿಗದಿಗೊಳಿಸಲಾಗಿದೆ ಎಂದು ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜು ತಿಳಿಸಿದ್ದಾರೆ. ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡರು, ಗ್ರಾಮಾಂತರ ಬಸ್ ನಿಲ್ದಾಣ, ಕೆ.ಆರ್.ಆಸ್ಪತ್ರೆ. ರೈಲ್ವೇ ಸ್ಟೇಷನ್, ಚೆಲುವಾಂಬ ಆಸ್ಪತ್ರೆಗಳಿರು ವುದರಿಂದ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ಈ ಹಿಂದೆಯೇ ಈ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಯೋಜನೆ ಇತ್ತು. ಆದರೆ ಹಲವು ಕಾರಣಗಳಿಂದ ವಿಳಂಬವಾಗಿತ್ತು. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗಲೆಂದು ಈಗ ಒಟ್ಟು 43 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಆರ್.ಸುರೇಶ್, ಇಂಜಿನಿಯರ್‍ಗಳಾದ ಮೋಹನ್, ಕವಿತ, ಚಂದ್ರಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಲಷ್ಕರ್ ಮತ್ತು ಮಂಡಿ ಠಾಣೆಗೆ ಪೊಲೀಸರು ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿದರೆ, ಎನ್.ಆರ್.ಸಂಚಾರ ಠಾಣೆ ಪೊಲೀಸರು ಕಟ್ಟಡ ತೆರವುಗೊಳಿಸುವ ವೇಳೆ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಕೆಲಸಕ್ಕೆ ಅನುವು ಮಾಡಿಕೊಟ್ಟರು.

Translate »