ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ
ಮೈಸೂರು

ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ

December 26, 2018

ಹುಣಸೂರು: ರಾಜ್ಯದಲ್ಲಿ ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹತ್ಯೆಯನ್ನು ಖಂಡಿಸಿ ಗ್ರಾಮ ಲೆಕ್ಕಾಧಿಕಾರಿಗಳು ಒಂದು ದಿನದ ಸಾಂಕೇತಿಕ ರಜೆ ಚಳವಳಿ ನಡೆಸಿ ಉಪ ವಿಭಾಗಾಧಿಕಾರಿ ಕೆ.ನಿತೀಶ್ ಅವರಿಗೆ ಮನವಿ ಸಲ್ಲಿಸಿದರು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿ ಗಳಿಗೆ ಜೀವ ಭಯ ಹುಟ್ಟಿಸುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿದ್ದು, ಈ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದು ಕೊಳ್ಳುವ ಮೂಲಕ ದಂಧೆಕೋರರನ್ನು ಹತ್ತಿಕ್ಕಬೇಕು ಎಂದು ಒತ್ತಾಯಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಅಕ್ರಮ ಮರಳು ದಂಧೆಕೋರರನ್ನು ಪರಿಶೀಲಿಸಲು ಮುಂದಾದ ಸಾಹೇಬ್ ಪಾಟೀಲ್ ಅವರ ಮೇಲೆ ಟಿಪ್ಪರ್ ಹತ್ತಿಸಿ ಹತ್ಯೆ ಮಾಡಿರುವುದು ಇಡೀ ಕಂದಾಯ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ಹತ್ಯೆ ಗೀಡಾದ ಪ್ರಾಮಾಣಿಕ ಅಧಿಕಾರಿ ಸಾಹೇಬ್ ಪಾಟೀಲ್ ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕಂದಾಯ ಇಲಾಖೆ ನೌಕರರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ನೈತಿಕ ಧೈರ್ಯ ತುಂಬಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಸಂಘದ ಅಧ್ಯಕ್ಷ ದೇವರಾಜ್ ಮತ್ತು ಸದಸ್ಯರು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಪ್ರಭಾಕರ್, ಲೋಕೇಶ್, ಗುರುರಾಜ್ ಮತ್ತಿತರರಿದ್ದರು.

Translate »