ನಮ್ಮ ದೇಶದ ಕಾನೂನು ಸರಿಯಿಲ್ಲ… ಕೊಲೆ ಮಾಡಿದವರು ಬೇಲ್ ತಗೊಂಡು ಬೇಗ ಆಚೆ ಬರ್ತಾರೆ…
ಮೈಸೂರು

ನಮ್ಮ ದೇಶದ ಕಾನೂನು ಸರಿಯಿಲ್ಲ… ಕೊಲೆ ಮಾಡಿದವರು ಬೇಲ್ ತಗೊಂಡು ಬೇಗ ಆಚೆ ಬರ್ತಾರೆ…

December 26, 2018

ಮದ್ದೂರು: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ. ಯಾಕಂದ್ರೆ ಕೊಲೆ ಮಾಡಿ ದವರು ಬೇಲ್ ತೆಗೆದುಕೊಂಡು ಆಚೆ ಬರ್ತಾರೆ. ಬಂದ ಬಳಿಕ ಮತ್ತೆ ಕೊಲೆ ಯಂತಹ ಕೃತ್ಯವೆಸಗುತ್ತಾರೆ. ಹಂತಕರಿಗೆ ಕಾನೂನಿನ ಭಯವೇ ಇಲ್ಲ. ಈ ರೀತಿಯ ವ್ಯವಸ್ಥೆ ನಮ್ಮ ಕಾನೂನಿನಲ್ಲಿದೆ. ಯಾಕೆಂದರೆ ಇದೊಂದೇ ಪ್ರಕರಣದಲ್ಲಲ್ಲ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಇಂಥ ದುಷ್ಕøತ್ಯಗಳು ನಡೆದಿರುವುದನ್ನು ನೋಡಿದ್ದೇನೆ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಅತ್ಯಂತ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಸಂಜೆ ಹತ್ಯೆಗೀಡಾದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರ ಮನೆಗೆ ಇಂದು ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಪ್ರಕಾಶ್ ಕೊಲೆಯ ಹಿಂದೆ ಇತ್ತೀಚೆಗಷ್ಟೇ ಬೇಲ್ ಮೇಲೆ ಬಂದವರ ಕೈವಾಡವಿದೆ ಎಂಬ ಮಾಹಿತಿ ಇದೆ. ನಮ್ಮ ಪಕ್ಷದ ಕಾರ್ಯಕರ್ತ ಅನ್ನೋದಕ್ಕಿಂತ ಪ್ರಕಾಶ್ ಜನಪರ ಕಾಳಜಿ ಯುಳ್ಳ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿ ಯನ್ನು ಕಳೆದುಕೊಂಡು ನನಗೆ ನೋವಾ ಗಿದೆ ಎಂದು ಹೇಳಿ ಮುಖ್ಯಮಂತ್ರಿಗಳು ಭಾವುಕರಾದರು. ಎರಡು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಜೋಡಿ ಹತ್ಯೆಯಾಗಿತ್ತು. ಆಗಲೂ ಮದ್ದೂರು
ಆಸ್ಪತ್ರೆಗೆ ನಾನು ಬಂದಿದ್ದೆ. ಆಗ ಪ್ರಕಾಶ್ ಕೊಲೆಯಾದ ವ್ಯಕ್ತಿಗಳ ಕುಟುಂಬದ ಪರ ನಿಂತಿದ್ದ. ಅದೇ ಕಾರಣಕ್ಕೆ ಇವತ್ತು ಪ್ರಕಾಶ್ ಕೊಲೆಯಾಗಲು ಕಾರಣ ಅನ್ನಿಸುತ್ತೆ. ಅವತ್ತು ಜೋಡಿ ಕೊಲೆ ಮಾಡಿದವರೇ ಇಂದು ಪ್ರಕಾಶ್ ಹತ್ಯೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ ಎಂದರು.

ಉದ್ವೇಗದಿಂದ ಹೇಳಿದ್ದೆ: ನಿನ್ನೆ ನಾನು ವಿಜಯಪುರದಲ್ಲಿದ್ದಾಗ ಪ್ರಕಾಶ್ ಸಾವಿನ ಸುದ್ದಿ ಕೇಳಿದಾಗ ಮನಸ್ಸಿಗೆ ಆಘಾತವಾಗಿ ಉದ್ವೇಗದಿಂದ, ಹಂತಕರ ಶೂಟೌಟ್ ಮಾಡಿ ಎಂದಿದ್ದೆ. ನಾನು ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ. ಸಾಮಾನ್ಯ ಪ್ರಜೆಯಾಗಿ ಆ ಮಾತು ಹೇಳಿದ್ದೆ. ಇನ್ನು ಬಿಜೆಪಿಯವ್ರು ನಮ್ಮ ಕಾರ್ಯಕರ್ತರು ಸತ್ತರೆ ಈ ಕಾಳಜಿ ಇರಲ್ಲ ಅಂತಾರೆ. ಆದ್ರೆ ನನಗೆ ಯಾರ ಹತ್ಯೆಯಾದಾಗಲೂ ಮನಸ್ಸು ತಡೆಯಲ್ಲ. ನನ್ನ ಆಡಳಿತದ ಅವಧಿಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ಪ್ರಕಾಶ್ ಹತ್ಯೆಯ ಮುನ್ಸೂಚನೆಯನ್ನ ಗ್ರಾಮಸ್ಥರು ಅಧಿಕಾರಿಗಳಿಗೆ ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ ಅನ್ನೋ ಮಾಹಿತಿ ಇದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚಿಸಿದ್ದೇನೆ. ಈ ಪ್ರಕರಣ ಸಂಬಂಧ ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. ಪ್ರಕಾಶ್ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನ ಆ ದೇವರು ನೀಡಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಸುರೇಶ್‍ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ನಿಖಿಲ್ ಕುಮಾರಸ್ವಾಮಿ, ಡಿ.ರಮೇಶ್ ಮತ್ತಿತರರು ಪ್ರಕಾಶ್ ಅವರ ಅಂತಿಮ ದರ್ಶನ ಪಡೆದರು.

ಫೋನ್ ಮೂಲಕ ಮನವೊಲಿಸಿದ ಸಿಎಂ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಬರುವವರೆಗೂ ಶವ ಕೊಂಡೊಯ್ಯುವುದಿಲ್ಲ ಎಂದು ಬೆಂಬಲಿಗರು ಪಟ್ಟು ಹಿಡಿದಿದ್ದ ವಿಷಯ ತಿಳಿದ ಸಿಎಂ ಕುಮಾರಸ್ವಾಮಿ, ಮೃತ ಪ್ರಕಾಶ್ ಅವರ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಶವ ಕೊಂಡೊಯ್ಯುವಂತೆ ಮನವೊಲಿಸಿದರು. ಬಳಿಕ ಮಧ್ಯಾಹ್ನ 3.10ರ ವೇಳೆಗೆ ಪ್ರಕಾಶ್ ಅವರ ಪಾರ್ಥೀವ ಶರೀರವನ್ನು ತೊಪ್ಪನಹಳ್ಳಿಗೆ ತರಲಾಯಿತು. ಇದಕ್ಕೂ ಮುನ್ನ 2 ಗಂಟೆಯ ವೇಳೆಗೆ ಹಾಲಿ ವಾಸವಿದ್ದ ಕೆ.ಹೊನ್ನಲಗೆರೆಯ ಅವರ ನಿವಾಸದಲ್ಲಿಯೂ ಪ್ರಕಾಶ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಪ್ರಕಾಶ್ ಅವರನ್ನು ಕಳೆದುಕೊಂಡ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದು ಕ್ಷಣ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪ್ರಕಾಶ್ ಅವರ ಮಗನನ್ನು ಬಿಗಿದಪ್ಪಿ ಭಾವುಕರಾದರು. ಅಂತಿಮ ದರ್ಶನದ ನಂತರ ತೊಪ್ಪನಹಳ್ಳಿ ಗ್ರಾಮದಲ್ಲಿ ಪ್ರಕಾಶ್ ಅಂತ್ಯಕ್ರಿಯೆ ನೆರವೇರಿತು. ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.

ಪ್ರಕಾಶ್ ಹತ್ಯೆ ಪ್ರಕರಣ: ನಾಲ್ವರ ಬಂಧನ

ಮಂಡ್ಯ: ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿ ಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ತೊಪ್ಪನಹಳ್ಳಿ ಗ್ರಾಮದ ಹೇಮಂತ್, ಸ್ವಾಮಿ, ಯೋಗೇಶ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳು. ನಿನ್ನೆ ಸಂಜೆ 4ರ ಸಮಯದಲ್ಲಿ ಮದ್ದೂರಿನ ಟಿಬಿ ಸರ್ಕಲ್ ಬಳಿ 8 ಜನರ ತಂಡ ಪ್ರಕಾಶ್‍ರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಪ್ರಕರಣ ಸಂಬಂಧ ಪ್ರಕಾಶ್ ಅವರ ಪುತ್ರ ಅಭಿಲಾಷ್, ತೊಪ್ಪನಹಳ್ಳಿ ಗ್ರಾಮದ ಯೋಗೀಶ್@ಪ್ರಸನ್ನ, ಹೇಮಂತ್, ಸ್ವಾಮಿ, ಮುತ್ತೇಶ್, ಶಿವರಾಜ್, ಯೋಗೇಶ್ ಸೇರಿದಂತೆ 8 ಮಂದಿ ವಿರುದ್ಧ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 143, 146, 148, 341, 307, 302, 120ಬಿ, 114 ಬಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿ
ನಿನ್ನೆ ಸಂಜೆಯೇ ಬಸ್‍ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಸ್ವಾಮಿಯನ್ನು ಬಂಧಿಸಿದ್ದರು. ರಾತ್ರಿ ಹೇಮಂತ್, ಯೋಗೇಶ್ ಹಾಗೂ ಶಿವರಾಜ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಅಧಿಕೃತವಾಗಿ ಆರೋಪಿಗಳ ಬಂಧನದ ವಿಷಯವನ್ನು ಸ್ಪಷ್ಟಪಡಿಸಿಲ್ಲ.

ಮಹತ್ವದ ಸುಳಿವು: ಪ್ರಕಾಶ್ ಹತ್ಯೆ ಬಗ್ಗೆ ಮಹತ್ವದ ಸುಳಿವು ದೊರೆತಿದ್ದು, ಸುಪಾರಿ ಕಿಲ್ಲರ್ಸ್ ತಂಡದಿಂದ ಪ್ರಕಾಶ್ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೈಕ್‍ನಲ್ಲಿ ಬಂದು ಡ್ರ್ಯಾಗನ್‍ನಿಂದ ಜೆಡಿಎಸ್ ಮುಖಂಡ ಪ್ರಕಾಶ್ ಕತ್ತು ಕುಯ್ದು ಹತ್ಯೆ ಮಾಡಲಾಗಿದ್ದು, ಬಳಿಕ ಆರೋಪಿಗಳು ಬೆಂಗಳೂರಿಗೆ ಬೈಕ್‍ನಲ್ಲಿ ಹೋದ ಬಗ್ಗೆ ಮಾಹಿತಿ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

Translate »