ಧೈರ್ಯಗೆಡಬೇಡಿ, ಸರ್ಕಾರ ನಿಮ್ಮೊಂದಿಗಿದೆ
ಮೈಸೂರು

ಧೈರ್ಯಗೆಡಬೇಡಿ, ಸರ್ಕಾರ ನಿಮ್ಮೊಂದಿಗಿದೆ

December 26, 2018

ಚಾಮರಾಜನಗರ:  ಸರ್ಕಾರ ನಿಮ್ಮೊಂದಿಗಿದೆ. ಯಾರೂ ಧೈರ್ಯ ಗೆಡಬೇಡಿ. ನಿಮ್ಮ ನೆರವಿಗೆ ಸರ್ಕಾರ ಬದ್ಧ ವಾಗಿದೆ ಎಂದು ಸುಳವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಾಂತ್ವನ ಹೇಳಿದರು.

ಜಿಲ್ಲೆಯ ಹನೂರು ತಾಲೂಕಿನ ಸುಳ ವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನ ದಲ್ಲಿ ವಿಷ ಪ್ರಸಾದ ಸೇವನೆಯಿಂದ ಅಸು ನೀಗಿದ ಹಾಗೂ ಅಸ್ವಸ್ಥರ ಕುಟುಂಬ ಸದಸ್ಯ ರನ್ನು ಇಂದು ಸಂಜೆ ಬಿದರಹಳ್ಳಿಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ಸಕಲ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು. ಯಾರೊಬ್ಬರೂ ಆತಂಕ ಪಡುವುದು ಬೇಡ, ಧೈರ್ಯ ವಾಗಿರಿ. ನಿಮ್ಮನ್ನು ಉಳಿಸಿಕೊಳ್ಳುತ್ತೇವೆ. ಸರ್ಕಾರ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ಧೈರ್ಯ ತುಂಬಿದರು.

ಮದ್ದೂರಿ ನಿಂದ ಹೆಲಿಕಾಪ್ಟರ್ ಮೂಲಕ ಸಂಜೆ 4.30ಕ್ಕೆ ಬಿದರಹಳ್ಳಿಯಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‍ಗೆ ಮುಖ್ಯಮಂತ್ರಿಗಳು ಆಗಮಿಸಿದರು. ನಂತರ ನೇರವಾಗಿ ಒಂದೆಡೆ ಸೇರಿದ್ದ ದುರಂತ ದಲ್ಲಿ ಅಸುನೀಗಿದ ಹಾಗೂ ಅಸ್ವಸ್ಥರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಸುಮಾರು 25 ನಿಮಿಷಗಳ ಕಾಲ ಸಂತ್ರಸ್ತರ ಅಳಲು ಆಲಿಸಿದರು. ನಂತರ ಸಂತ್ರಸ್ತರನ್ನು ಉದ್ದೇ ಶಿಸಿ ಮಾತನಾಡಿದ ಹೆಚ್.ಡಿ.ಕುಮಾರ ಸ್ವಾಮಿ, ಸುಳವಾಡಿಯಲ್ಲಿ ನಡೆದ ವಿಷ ಪ್ರಸಾದ ಘಟನೆ ಅಮಾನವೀಯವಾ ದದ್ದು, ಈ ದುರಂತ ನಡೆಯಬಾರದಿತ್ತು ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಈ ದುರಂತದಲ್ಲಿ ಮೃತಪಟ್ಟ 17 ಮಂದಿಯ ಕುಟುಂಬಗಳಿಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ನಂತೆ ಈಗಾಗಲೇ 85 ಲಕ್ಷ ರೂ. ಪರಿಹಾರ ನೀಡಲಾಗಿದೆ. ತೋಟಗಾರಿಕಾ ಇಲಾಖೆಯಿಂದ ಭೂಮಿ ಇರುವವರಿಗೆ ಒಟ್ಟಾರೆ 35 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಉಪಕರಣ ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಫಲಾನುಭವಿಗಳು 2ರಿಂದ 3 ಲಕ್ಷ ರೂ. ನೀಡಬೇಕಾಗಿತ್ತು. ಇದನ್ನೂ ಬೇರೆ ಮೂಲ ಗಳಿಂದ ಭರಿಸಲು ಕ್ರಮಕೈಗೊಳ್ಳಲಾಗಿದೆ.

ಭೂಮಿ ಇಲ್ಲದ ಪರಿಶಿಷ್ಟ ಜನಾಂಗದವರಿಗೆ ಭೂ ಒಡೆತನ ಯೋಜನೆಯಡಿ ಭೂಮಿ ಕೊಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅಭಯ ನೀಡಿದರು. ಸಂತ್ರಸ್ತ 3 ಕುಟುಂಬಗಳಿಗೆ ಟ್ಯಾಕ್ಸಿ ನೀಡಲು, ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುಕೂಲ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಹಿಂದು ಳಿದ ವರ್ಗಗಳ ಇಲಾಖೆಯಿಂದ 1 ಲಕ್ಷ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2 ಲಕ್ಷ ರೂ. ಸಾಲ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಅನುಕೂಲ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂತ್ರಸ್ತರ ಪೈಕಿ 30 ಜನರಿಗೆ ನಿವೇಶನ ಇದೆ. 58 ಜನರಿಗೆ ನಿವೇಶನ ಇಲ್ಲ. ಇವರಿಗೆಲ್ಲಾ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ನಿರ್ಮಿಸಿಕೊಡಲಾಗುವುದು. ಎಲ್ಲಾ ಸಂತ್ರಸ್ತರಿಗೂ 6 ತಿಂಗಳವರೆಗೆ ಅಗತ್ಯ ಪಡಿತರ ಪದಾರ್ಥಗಳನ್ನು ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು. ನೀವು ಮತ್ತು ನಿಮ್ಮ ಕುಟುಂಬ ನೆಮ್ಮದಿಯಿಂದ ಬಾಳಬೇಕು. ನೀವು ಧೈರ್ಯವಾಗಿರಿ. ಯಾವುದೇ ಆತಂಕ ಪಡಬೇಡಿ. ನಿಮ್ಮ ಜೀವನಕ್ಕೆ ದಾರಿ ತೋರಿಸಲಾಗುವುದು. ಸರ್ಕಾರ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ಸಿಎಂ ಸಂತೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಸಾರಾ ಮಹೇಶ್, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಂಸದ ಹೆಚ್.ವಿಶ್ವನಾಥ್, ಜಿಪಂ ಅಧ್ಯಕ್ಷ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಓ ಜಿ.ಕೆ.ಹರೀಶ್‍ಕುಮಾರ್, ಜೆಡಿಎಸ್ ಮುಖಂಡ ಪ್ರೊ.ರಂಗಪ್ಪ, ಮಾರ್ಟಳ್ಳಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿಬಾಯಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Translate »