ಮೈಸೂರು ಆರ್‍ಟಿಓ ಪೂರ್ವ ಕಚೇರಿ  ಅಂತೂ ಸ್ವಂತ ಕಟ್ಟಡಕ್ಕೆ ಸ್ಥಳಾಂತರ
ಮೈಸೂರು

ಮೈಸೂರು ಆರ್‍ಟಿಓ ಪೂರ್ವ ಕಚೇರಿ ಅಂತೂ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

April 5, 2019

ಮೈಸೂರು: ಮೈಸೂರಿನ ರಿಂಗ್ ರಸ್ತೆ ನಾರಾಯಣ ಹೃದಯಾಲಯದ ಬಳಿ ಕಳೆದ 2 ವರ್ಷದ ಹಿಂದೆ 9.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಕೊನೆಗೂ ಮೈಸೂರು ಪ್ರಾದೇಶಿಕ ಸಾರಿಗೆ ಪೂರ್ವ ಕಚೇರಿ ಸ್ಥಳಾಂತರ ಗೊಂಡಿದೆ.

ಇದಕ್ಕೂ ಮುನ್ನ ಶಕ್ತಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ರಿಂಗ್ ರಸ್ತೆಗೆ ಹೊಂದಿಕೊಂಡಂತೆ 8 ಎಕರೆ 10 ಗುಂಟೆ ಭೂಮಿ ಮಂಜೂರು ಮಾಡಿದ್ದು, ಅದರಲ್ಲಿ ಪಾರಂಪರಿಕ ಶೈಲಿಯ ಎರಡು ಮಹಡಿಯ ಕಟ್ಟಡವನ್ನು ಸಾರಿಗೆ ಸಂಸ್ಥೆ ನಿರ್ಮಿಸಿತ್ತು. ಹೊಸ ಕಟ್ಟಡವನ್ನು 2017ರ ಜೂನ್ 3ರಂದು ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ ಪೀಠೋಪಕರಣ, ವಿದ್ಯುತ್ ಸಂಪರ್ಕವೂ ಸೇರಿದಂತೆ ಕಚೇರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ತಡ ವಾದ ಹಿನ್ನೆಲೆಯಲ್ಲಿ ಕಚೇರಿ ಸ್ಥಳಾಂತರಿಸಿರಲಿಲ್ಲ. ಕೊನೆಗೂ ಮೂಲ ಸೌಲಭ್ಯ ಕಲ್ಪಿಸಿರುವುದರಿಂದ ಏ.1ರಿಂದ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಲಾಗಿದೆ.

ಹೊಸ ಕಟ್ಟಡದಲ್ಲಿ 15 ವಿಶಾಲ ಕೊಠಡಿಗಳು, ನಿರೀ ಕ್ಷಣಾ ಸಭಾಂಗಣ, ಕೌಂಟರ್, ಖಜಾನೆ, ದಾಖಲೆಗಳ ಕೊಠಡಿಗಳಿದ್ದು, ಜನರೇಟರ್, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಚಾಲನಾ ಪರವಾನಗಿ, ವಾಹನಗಳ ನೋಂದಣಿಗೆ ಬರುವವರಿಗೆ ಎಲ್ಲಾ ಸೌಲಭ್ಯಗಳು ಹೊಸ ಕಟ್ಟಡದಲ್ಲಿವೆ. ಈ ಕಚೇರಿ ವ್ಯಾಪ್ತಿಗೆ ಬರುವ ಕಡತಗಳÀನ್ನು ಹೊಸ ಕಟ್ಟಡಕ್ಕೆ ತಂದಿಡಲಾಗಿದ್ದು, ಜೋಡಿಸುವುದಕ್ಕೆ ತಿಂಗಳ ಸಮಯ ಬೇಕಾಗುತ್ತದೆ. ಇದಕ್ಕಾಗಿ 2 ಕೊಠಡಿಗಳನ್ನು ಮೀಸಲಿಡಲಾಗಿದೆ. ಹೊಸ ಕಟ್ಟಡದಲ್ಲಿ ಕಚೇರಿ ಆರಂಭವಾಗುತ್ತಿದ್ದಂತೆಯೇ ಇದರ ಆಜುಬಾಜಲ್ಲಿ ಕಾಫಿ-ಟೀ, ಉಪಹಾರ ಮಳಿಗೆ, ಸ್ಟ್ಯಾಂಪ್ ಪೇಪರ್, ಮಧÀ್ಯವರ್ತಿಗಳ ಮಳಿಗೆ ಕಾರ್ಯಾರಂಭ ಮಾಡಿವೆ. ಆದರೆ ಜೆರಾಕ್ಸ್ ಮಳಿಗೆ ಇಲ್ಲ. ಸಾರ್ವಜನಿಕರು ಜೆರಾಕ್ಸ್ ಮಾಡಿಸಲು ಸುಮಾರು ಎರಡು ಕಿ.ಮೀ. ಹೋಗಬೇಕಾಗಿದೆ.

ಅನೈತಿಕ ಚಟುವಟಿಕೆಗೆ ಕಡಿವಾಣ: ಆರ್‍ಟಿಓ ಕಚೇರಿ ಕಟ್ಟಡ, ಇ-ಟ್ರ್ಯಾಕ್ ಕಳೆದ 2 ವರ್ಷದಿಂದ ಪಾಳು ಬಿದ್ದಿತ್ತು. ಜನ ಸಂಚಾರ ವಿರಳವಾಗಿತ್ತು. ಸುತ್ತಮುತ್ತಲಿ ರುವ ಖಾಲಿ ಜಾಗದಲ್ಲಿ ಅನೈತಿಕ ಚಟುವಟಿಕೆ ನಡೆಯು ತ್ತಿದ್ದವು. ಮೂರು ವರ್ಷದ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರೊಬ್ಬರನ್ನು ಇಲ್ಲಿ ಹತ್ಯೆ ಮಾಡಲಾಗಿತ್ತು. ಇದೀಗ ಆರ್‍ಟಿಓ ಕಚೇರಿ ಆರಂಭವಾಗಿರುವುದರಿಂದ ಸಹಜವಾಗಿಯೇ ಅನೈತಿಕ ಚಟುವಟಿಕೆಗೆ ಕಡಿವಾಣ ಬೀಳಲಿದೆ.

ಬಾಡಿಗೆ ಕಟ್ಟಡದಲ್ಲಿ: ಮೂರು ವರ್ಷಗಳಿಂದ ಬಾಡಿಗೆ ಕಟ್ಟಡಕ್ಕೆ ತಿಂಗಳಿಗೆ 75 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣ ವಾಗಿ 22ತಿಂಗಳು ಕಳೆದರೂ ಕಚೇರಿ ಸ್ಥಳಾಂತರ ಮಾಡದೇ ಇರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಟ್ರಾಕ್‍ನಲ್ಲಿ ಪರಿಶೀಲನೆ: ಕಟ್ಟಡ ನಿರ್ಮಾಣ ವೇಳೆ ಇಲ್ಲಿ ಇ-ಟ್ರ್ಯಾಕ್ ನಿರ್ಮಿಸಲಾಗಿದೆ. ಆದರೆ ಸ್ಕ್ಯಾನರ್ ಸೇರಿದಂತೆ ವಿವಿಧ ಉಪಕರಣಗಳನ್ನು ಅಳವಡಿಸದೇ ಇರುವುದರಿಂದ ಸದ್ಯಕ್ಕೆ ಟ್ರಾಕ್ ಬಳಸಲು ಸಾಧ್ಯವಿಲ್ಲ. ಕಂಪ್ಯೂಟರೀಕರಣ ಇ-ಟ್ರ್ಯಾಕ್‍ನಲ್ಲಿ ನಾಲ್ಕು ಹಾಗೂ ಆರು ಚಕ್ರಗಳ ವಾಹನಗಳ ಚಾಲಕರ ಚಾಲನಾ ಪರೀಕ್ಷೆಯನ್ನು ನಡೆಸಿ ಡ್ರೈವಿಂಗ್ ಲೈಸೆನ್ಸ್ ನೀಡಲು ಇಲಾಖೆ ಉದ್ದೇಶಿಸಿದೆ.

ಇ-ಟ್ರ್ಯಾಕ್ ವಿಶೇಷ: ಚಾಲನಾ ಕೌಶಲ್ಯ ಕಲಿಸುವುದ ಕ್ಕಾಗಿ ಇ-ಟ್ರ್ಯಾಕ್ ವ್ಯವಸ್ಥೆ ಸಹಕಾರಿಯಾಗಲಿದೆ. ಇದ ರಲ್ಲಿ `8’ ಮಾದರಿಯ ಟ್ರ್ಯಾಕ್, ಇಳಿಜಾರು, ದಿಣ್ಣೆ, ಸೇತುವೆ, ಹೇರ್‍ಪಿನ್ ಬೆಂಡ್, ಕಡಿದಾದ ತಿರುವು ಸೇರಿದಂತೆ ವಿವಿಧ ಟ್ರ್ಯಾಕ್‍ಗಳನ್ನು ನಿರ್ಮಾಣ ಮಾಡಲಾ ಗಿದೆ. ಇ-ಟ್ರ್ಯಾಕ್‍ನ ಎರಡೂ ಬದಿ ಸ್ಕ್ಯಾನರ್, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಚಾಲನಾ ಟೆಸ್ಟ್ ವೇಳೆ ವಾಹನ ಸ್ಕ್ಯಾನರ್‍ಗೆ ತಗುಲಿದರೆ ಆ ಚಾಲಕನನ್ನು ಅನುತ್ತೀರ್ಣಗೊಳಿಸಲಾಗುತ್ತದೆ. ಇದರಿಂದ ಪರಿಣಿತ ರಿಗಷ್ಟೇ ಡ್ರೈವಿಂಗ್ ಲೈಸೆನ್ಸ್ ಸಿಗುವುದರಿಂದ ಅಪಘಾತ ಗಳ ಸಂಖ್ಯೆ ಇಳಿಮುಖವಾಗಲಿದೆ. ಇ-ಟ್ರ್ಯಾಕ್ ಅನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿವೃದ್ಧಿಪಡಿಸಿದೆ. ಬೆಂಗಳೂರು, ಶಿವಮೊಗ್ಗ, ಹಾಸನದಲ್ಲಿಯೂ ಇ-ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿದೆ.

Translate »