ಕನ್ನಕ್ಕೆ ಕಡಿವಾಣ ಹಾಕಲು `ಅನ್ನಭಾಗ್ಯ’ಕ್ಕೆ ಬದಲಾವಣೆ
ಮೈಸೂರು

ಕನ್ನಕ್ಕೆ ಕಡಿವಾಣ ಹಾಕಲು `ಅನ್ನಭಾಗ್ಯ’ಕ್ಕೆ ಬದಲಾವಣೆ

February 28, 2020

ಬೆಂಗಳೂರು,ಫೆ.27(ಕೆಎಂಶಿ)-ಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ಜಾರಿ ಗೊಂಡ ಅನ್ನಭಾಗ್ಯ ಯೋಜನೆ ಸ್ವರೂಪ ಬದಲಾಯಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಪ್ರಸ್ತುತ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಯೂನಿಟ್‍ಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ, ಬೇಳೆ, ಉಪ್ಪು ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನೂ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಯೋಜನೆ ದೊಡ್ಡ ಪ್ರಮಾಣದಲ್ಲಿ ದುರುಪ ಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ಉಚಿತ ಅಕ್ಕಿ ನೀಡಿಕೆ ಪ್ರಮಾಣದಲ್ಲಿ ಮಾರ್ಪಾಡು ಮಾಡಿ, ಪ್ರತಿ ಕೆಜಿಗೆ ಸಾಂಕೇತಿಕ ದರ ನಿಗದಿಪಡಿಸಿ, ಈ ಆದಾಯವನ್ನು ಬೇರೆ ರೂಪದಲ್ಲಿ ಬಿಪಿಎಲ್ ಪಡಿತರದಾರರಿಗೇ ಅನುಕೂಲ ವಾಗು ವಂತೆ ಮಾಡುವ ಚಿಂತನೆ ಇದೆ. ಯೂನಿಟ್ ಅಕ್ಕಿ ಪ್ರಮಾಣ ಕಡಿತಗೊಳಿಸಿ, ಬದಲಿಗೆ ಪ್ರತಿ ಯೂನಿಟ್‍ಗೆ 2 ಕೆ.ಜಿ. ಗೋಧಿ ನೀಡಲು ತೀರ್ಮಾನಿಸಿದೆ. ಇದರ ಜೊತೆಗೆ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಇತರ ವಸ್ತುಗಳನ್ನು ಪಡಿತರ ಅಂಗಡಿಗಳಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹಣಕಾಸು ಇಲಾಖೆಯನ್ನೂ ಹೊಂದಿರುವ ಸಿಎಂ ಯಡಿಯೂರಪ್ಪ, ಮಾ.5ರಂದು 2020-21ನೇ ಸಾಲಿನ ಮುಂಗಡಪತ್ರ ಮಂಡಿಸ ಲಿದ್ದು, ಈ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆ ಬದಲಾದ ಸ್ವರೂಪ ಘೋಷಿಸಲಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಸೂಚ್ಯವಾಗಿ ಅನ್ನ ಭಾಗ್ಯ ಸ್ವರೂಪ ಬದಲಾವಣೆ ಸುಳಿವು ನೀಡಿದರು. ಮುಂಗಡ ಪತ್ರ ಮಂಡನೆವರೆಗೆ ಕಾದು ನೋಡಿ, ಯೋಜನೆಯಲ್ಲಿ ಬಹಳಷ್ಟು ಬದ ಲಾವಣೆ ಆಗಲಿದೆ. ಎಲ್ಲ ಅರ್ಹರಿಗೂ ಇದರ ಲಾಭ ದೊರೆಯಲಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಈ ಕೂಡಲೇ ಕಾರ್ಡ್‍ಗಳನ್ನು ಹಿಂತಿರುಗಿಸಬೇಕು, ಎರಡು ತಿಂಗಳಲ್ಲಿ ಕಾರ್ಡ್ ಹಿಂತಿರುಗಿಸದಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ. ಅನರ್ಹ ಬಿಪಿಎಲ್ ಪಡಿತರದಾರರು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ ಇಂತಹ ಒಂದು ಲಕ್ಷ ಕಾರ್ಡ್‍ಗಳನ್ನು ಹಿಂದೆ ಪಡೆಯ ಲಾಗಿದೆ ಮತ್ತು ಅವುಗಳನ್ನು ರದ್ದುಪಡಿಸಲಾಗಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಪ್ರತಿ ಕೆ.ಜಿ.ಗೆ 28 ರೂಪಾಯಿ ನೀಡಿ ಖರೀದಿಸಲಾಗುತ್ತಿದೆ. ಆದರೆ ಬಿಪಿಎಲ್ ಪಡಿತರದಾರರು ಪ್ರತಿ ಕೆ.ಜಿ. ಅಕ್ಕಿಯನ್ನು ಕೇವಲ 10ರಿಂದ 12 ರೂಪಾಯಿಗೆ ಮಾರಾಟ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಮಾರಿಕೊಳ್ಳಬೇಡಿ, ಹಾಗೆಯೇ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರು ಕಾರ್ಡ್‍ಗಳನ್ನು ಹಿಂತಿರುಗಿಸಿ ಎಂದು ಮನವಿ ಮಾಡಿದರು. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವ ಅನರ್ಹರಿಂದ ಈಗಾಗಲೇ 96 ಲಕ್ಷ ರೂಪಾಯಿ ವರೆಗೆ ದಂಡ ವಸೂಲಿ ಮಾಡಲಾಗಿದೆ, ಮತ್ತೊಮ್ಮೆ ಕೊನೆ ಅವಕಾಶ ನೀಡುತ್ತಿದ್ದೇವೆ, ಅನರ್ಹ ಪಡಿತರದಾರರು ಕಾರ್ಡ್‍ಗಳನ್ನು ಹಿಂತಿರುಗಿಸಿ. 2 ತಿಂಗಳ ಗಡುವಿನ ಅವಧಿ ಮುಗಿದ ನಂತರ ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಚೀಟಿ ಹೊಂದಿರುವವರ ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಿ ಪಡೆಯುತ್ತಿ ರುವವರು ಅನರ್ಹರೆಂಬುದು ಗೊತ್ತಾದರೆ ಅಂತಹವರು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯಲು ಆರಂಭಿಸಿದ ದಿನದಿಂದ ಇದುವರೆಗೆ ಪಡೆದ ಆಹಾರ ಪದಾರ್ಥಗಳ ಇಂದಿನ ಮಾರುಕಟ್ಟೆ ದರವನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ 19,000 ಪಡಿತರ ಅಂಗಡಿಗಳಿದ್ದು, ಇವುಗಳನ್ನು ಆಹಾರ ಧಾನ್ಯಗಳ ಕಮೀಷನ್ ಆಧಾರದಲ್ಲಿ ನಡೆಸಲು ಆಗುವುದಿಲ್ಲ. ಆದ್ದರಿಂದ ಮೈಸೂರು ಸ್ಯಾಂಡಲ್ ಸೋಪ್‍ನಂತಹ ವಸ್ತುಗಳನ್ನೂ ಮಾರಾಟಕ್ಕೆ ಇಡಲಾಗುವುದು. ಇದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಪರ್ಯಾಯ ಆದಾಯ ಮೂಲ ಒದಗಿಸಿದಂತೆ ಆಗುತ್ತದೆ ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಕಾಲದಲ್ಲಿ ಆರಂಭವಾದ ಮೈಸೂರು ಸ್ಯಾಂಡಲ್‍ಸೋಪ್‍ಗೆ ಮಾರುಕಟ್ಟೆ ಒದಗಿಸಿದಂ ತಾಗುತ್ತದೆ. ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ವರ್ತಕರು ನೋಂದಣಿ ಮಾಡಿಸಿದ್ದು ಕಳೆದ ವರ್ಷ ಒಟ್ಟು 40 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಮುಂದಿನ ವರ್ಷ ಈ ಪ್ರಮಾಣ 44 ಕೋಟಿ ರೂಪಾಯಿಗೆ ಏರುವ ನಿರೀಕ್ಷೆ ಇದೆ ಎಂದರು.

Translate »