ಮಂಡ್ಯ, ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಮಾರಾಟಕ್ಕೆ ಸರ್ಕಾರ ಸಿದ್ಧತೆ
ಮೈಸೂರು

ಮಂಡ್ಯ, ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಮಾರಾಟಕ್ಕೆ ಸರ್ಕಾರ ಸಿದ್ಧತೆ

February 28, 2020

ಬೆಂಗಳೂರು, ಫೆ.27(ಕೆಎಂಶಿ)- ಬ್ರಿಟಿಷರ ಕಾಲದಲ್ಲಿ ಆರಂಭ ಗೊಂಡ ಮಂಡ್ಯದ ಪ್ರತಿಷ್ಠಿತ ಮೈಶುಗರ್ ಸೇರಿದಂತೆ ಎರಡು ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರ ಮಡಿಲಿಗೆ ಹಾಕಲು ಸರ್ಕಾರ ಮುಂದಾಗಿದೆ.

ಸರ್ಕಾರಿ ಮತ್ತು ಸಹಕಾರಿ ಒಡೆ ತನದಲ್ಲಿರುವ ಮಂಡ್ಯದ ಮೈಶು ಗರ್, ಪಾಂಡವಪುರ ಕಾರ್ಖಾನೆ ಗಳನ್ನು ಸಹಭಾಗಿತ್ವದಡಿ ಖಾಸಗಿ ಯರಿಗೆ ಮಾರಾಟ ಮಾಡಲು ಸಿದ್ಧತೆ ನಡೆದಿದೆ. ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಸುದ್ದಿಗಾರರಿಗೆ ಈ ಕಾರ್ಖಾನೆಗಳ ಮಾರಾಟದ ಬಗ್ಗೆ ಮಾಹಿತಿ ನೀಡಿ, ಇವುಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ-ಪಿಪಿಪಿ ಆಧಾರದ ಮೇಲೆ ಮಾರಾಟ ಮಾಡಲು ಸಂಪುಟ ನಿರ್ಧರಿಸಿದೆ ಎಂದರು.

ರೈತರು ಕಬ್ಬು ಸರಬರಾಜು ಮಾಡಲು ಅನುಕೂಲವಾಗುವ ಉದ್ದೇಶದಿಂದ ಬರುವ ಜೂನ್ ಒಳಗೆ ಮೂರು ಕಾರ್ಖಾನೆ ಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಲಾಗುವುದು. ಇದಕ್ಕೂ ಮೊದಲು ಅಲ್ಲಿನ ಕಾರ್ಮಿಕರು, ರೈತರು ಮತ್ತು ಜನ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ-ಪಿಪಿಪಿ ಆಧಾರದ ಮೇಲೆ ಕಾರ್ಖಾನೆಗಳನ್ನು ಮಾರಾಟ ಮಾಡುವುದಾಗಿ ಸಚಿವರು ಹೇಳುತ್ತಿರುವರಾದರೂ, ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಇದೀಗ ಸ್ಥಳೀಯರ ಜೊತೆ ಮಾತುಕತೆ
ನಡೆಸುವುದಾಗಿಯೂ ತಿಳಿಸಿದ್ದಾರೆ. ಮಂಡ್ಯ ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೆ ರಾಜ್ಯ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ 450 ಕೋಟಿ ರೂ. ವೆಚ್ಚ ಮಾಡಿದ್ದರೂ, ಕಬ್ಬು ಅರೆ ಯುವ ಕಾರ್ಯ ಮಾತ್ರ ಆರಂಭವಾಗಿಲ್ಲ. ಕಾರ್ಖಾನೆಗಿಂತ ಅದರ ವ್ಯಾಪ್ತಿಯ 107 ಎಕರೆ ಕೋಟ್ಯಾಂತರ ರೂ. ಬೆಲೆಬಾಳುವ ಭೂಮಿ ಮೇಲೆ ಕಣ್ಣು ಬಿದ್ದಿದೆ, ಅಲ್ಲದೆ, ಮೈಶುಗರ್ ಕಂಪನಿಗೆ ಬೆಂಗಳೂರು ಸೇರಿದಂತೆ ಮಂಡ್ಯ ಸುತ್ತಮುತ್ತ ಆಸ್ತಿಗಳಿವೆ.

ಕಾರ್ಖಾನೆ ಆಡಳಿತ ಮಂಡಳಿ ಚುಕ್ಕಾಣಿ ಹಿಡಿದವರು ಮತ್ತು ಅಧಿಕಾರಿಗಳ ಭ್ರಷ್ಟತೆ ಕಾರಣದಿಂದ ಸಕ್ಕರೆ ನಾಡಿಗೆ ಕಳಂಕ ಬಂದಿದೆ. ನಗರ ಕೇಂದ್ರ ಭಾಗದಲ್ಲಿ ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಈ ಕಾರ್ಖಾನೆಯನ್ನು ರಾಜ್ಯದ ಕೆಲವು ಪ್ರತಿಷ್ಠಿತ ರಾಜಕಾರಣಿಗಳ ಆಪ್ತರು ಸಹಭಾಗಿತ್ವದ ಹೆಸರಿನಲ್ಲಿ ಖರೀದಿಸಲು ಮುಂದಾಗಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳಲು ಸಿದ್ಧತೆ ನಡೆದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೆಬ್ಬಾರ್‍ಗಿಂತ ಮುನ್ನ ಸಕ್ಕರೆ ಖಾತೆ ನಿರ್ವಹಣೆ ಮಾಡಿದ ಸಚಿವ ಸಿ.ಟಿ.ರವಿ ಅವರೇ ಕಾರ್ಖಾನೆಗಳನ್ನು ಮಾರಾಟ ಮಾಡಲು ಕಡತ ಸಿದ್ಧಪಡಿಸಿ, ಸಂಪುಟದ ಅನುಮತಿ ಪಡೆದಿದ್ದರು. ಆದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರವಿ ಅವರ ಖಾತೆ ಬದಲಾವಣೆಯಾಗಿದೆ. ಸಕ್ಕರೆ ಮತ್ತು ಕಬ್ಬಿನ ಖಾತೆ ಬಗ್ಗೆ ಏನೂ ಅರಿಯದ ಕರಾವಳಿ ಸಚಿವ ಹೆಬ್ಬಾರ್, ಕಾರ್ಖಾನೆಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಕೊಪ್ಪ ಖಾಸಗಿ ಕಾರ್ಖಾನೆಯೂ ಸಹಕಾರಿ ಕಾರ್ಖಾನೆ ಎಂದುಕೊಂಡಿ ರುವ ಸಚಿವರು, ಇದನ್ನೂ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಈ ಕಾರ್ಖಾನೆ ಪ್ರಸ್ತುತ ಖಾಸಗಿ ಒಡೆತನದಲ್ಲೇ ಇದ್ದು, ಕಬ್ಬು ಅರೆಯುವ ಕಾರ್ಯವನ್ನೂ ಮಾಡುತ್ತಿದೆ.

Translate »