ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಿ ಸಿದ್ದರಾಮಯ್ಯ ಶುಭ ಹಾರೈಕೆ
ಮೈಸೂರು

ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಿ ಸಿದ್ದರಾಮಯ್ಯ ಶುಭ ಹಾರೈಕೆ

February 28, 2020

ಬೆಂಗಳೂರು, ಫೆ.27-ಮಾನವೀಯ ಸಂಬಂ ಧಕ್ಕೆ ರಾಜಕಾರಣ ಅಡ್ಡಿಯಾಗಬಾರದು ಎಂದು ನಂಬಿರುವವನು ನಾನು. ಸಿಎಂ ಯಡಿಯೂರಪ್ಪ 77 ವಸಂತ ಪೂರೈಸಿ 78ನೇ ವಸಂತಕ್ಕೆ ಕಾಲಿ ಡುತ್ತಿದ್ದಾರೆ. ಅವರಿಗೆ ಹೃದಯಪೂರ್ವಕವಾಗಿ ಶುಭ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದರು. ಅರಮನೆ ಮೈದಾನದಲ್ಲಿ ನಡೆದ ಅಭಿ ನಂದನಾ ಸಮಾರಂಭದಲ್ಲಿ `ಕಾಫಿ ಟೇಬಲ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಬರುವಂತೆ ಯಡಿ ಯೂರಪ್ಪ ಅವರ ಅಭಿಮಾನಿಗಳು ನನಗೂ ಆಹ್ವಾನ ನೀಡಿದ್ದರು. ನಾವು ಎಷ್ಟೇ ದೀರ್ಘ ಕಾಲ ರಾಜಕಾರಣದಲ್ಲಿದ್ದರೂ, ಪರಸ್ಪರ ವಿರೋಧಿಸುತ್ತಿದ್ದರೂ ಮನುಷ್ಯ ಸಂಬಂಧಗಳನ್ನು ನಿರಾಕರಿಸಬಾರದು. ನಾವು ಮೂಲಭೂತವಾಗಿ ಮನುಷ್ಯರು. ನಮ್ಮ ಸಿದ್ಧಾಂತಗಳು, ವಿಚಾರಗಳು ಬೇರೆ ಬೇರೆ ಇರಬಹುದು. ಅಂತಿಮ ವಾಗಿ ಪ್ರಭುಗಳಾಗಿರುವ ಪ್ರಜೆಗಳೇ ನಮಗೆ ತೀರ್ಪುಗಾರರು ಎಂದು ಹೇಳಿದರು.

ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ. ಎಷ್ಟು ಕ್ರಿಯಾಶೀಲವಾಗಿ ಬದುಕಿದ ಎಂಬುದೇ ಮುಖ್ಯವಾದುದು. ಯಡಿಯೂರಪ್ಪನವರು ನೇರವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬರಲಿಲ್ಲ. ನಾನು ಮತ್ತು ಅವರು 1983ರಲ್ಲಿ ವಿಧಾನಸಭೆಗೆ ಕಾಲಿಟ್ಟೆವು. ನನಗಿಂತ ಐದು ವರ್ಷ ಮುಂಚೆ ಅವರು ಸಿಎಂ ಆದರು. ನಾನೂ ಕೂಡ ಒಂದು ಬಾರಿ ಸಿಎಂ ಆದೆ. ಆದರೆ ಯಡಿಯೂರಪ್ಪನವರು ನಾಲ್ಕು ಸಲ ಸಿಎಂ ಆದರು ಎಂದು ರಾಜಕೀಯ ಹಾದಿ ಸ್ಮರಿಸಿದರು. ಯಡಿಯೂರಪ್ಪ ಹೋರಾಟದಿಂದ ಬಂದವರು. ಹೋರಾಟದ ಹಾದಿಯಲ್ಲಿ ಬಂದವರಿಗೆ ಮಾತ್ರ ಜನರ ಬದುಕು ಅರ್ಥವಾಗುತ್ತದೆ. ರಾಜಕೀಯ ನಮ್ಮನ್ನು ಕೈಬೀಸಿ ಕರೆಯಲ್ಲ. ನಮ್ಮ ಹೋರಾಟವೇ ನಮಗೆ ಎಲ್ಲವನ್ನೂ ಕೊಡುತ್ತದೆ. ಹಾಗೇ ಯಡಿಯೂರಪ್ಪನವರಿಗೂ ಕೊಟ್ಟಿದೆ ಎಂದು ಹಾಡಿ ಹೊಗಳಿದರು.

Translate »