ಬೆಂಗಳೂರು, ಫೆ.27-ಯಡಿಯೂರಪ್ಪ ನವರು ರಾಜಕೀಯ ಜೀವನದ ಪ್ರಾರಂಭ ದಲ್ಲಿ ಸೈಕಲ್ ತುಳಿದು ಕರ್ನಾಟಕದಲ್ಲಿ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಧೀಮಂತ ಹೋರಾಟ ಗಾರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಣಗಾನ ಮಾಡಿದರು.
ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್‍ನಲ್ಲಿ ಗುರುವಾರ ಸಂಜೆ ನಡೆದ ಸಮಾ ರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ಬೆಳ್ಳಿ ನೇಗಿಲು ನೀಡಿ 78ನೇ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸಿ, ಮಾತನಾಡಿದ ಅವರು, ಯಡಿಯೂರಪ್ಪ ಹುದ್ದೆಯಿಂದ ದೊಡ್ಡವರೆನ್ನಿಸಿಕೊಂಡಿಲ್ಲ. ಅವರು ಮಾಡಿದ ಕೆಲಸಗಳಿಂದ ದೊಡ್ಡವರೆ ನಿಸಿಕೊಂಡಿದ್ದಾರೆ. ಅವರೇನು ಶ್ರೀಮಂತ ಮನೆತನದಲ್ಲಿ ಜನಿಸಿದವರಲ್ಲ. ಪರಿಶ್ರಮ ದಿಂದ ಮೇಲೆ ಬಂದವರು. ಅವರಿಗಿರುವ ಕೆಲಸದ ಮೇಲಿನ ಶ್ರದ್ಧೆ ಅವರನ್ನು ಇಲ್ಲಿ ತಂದು ಕೂರಿಸಿದೆ ಎಂದು ಹೇಳಿದರು. ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದಲೇ ಅವರಿಗೆ ರೈತರ ಮೇಲಿನ ಪ್ರೀತಿ, ಗೌರವ ತಿಳಿಯುತ್ತದೆ. ರಾಜ್ಯದಲ್ಲಿ ಪಕ್ಷವನ್ನು ಬೆಳೆಸಿದ ಯಡಿಯೂರಪ್ಪ, ರೈತರು, ಶೋಷಿತರು ಹಾಗೂ ಬಡವರ ಪರ ಇರುವ ನಾಯಕ. ಅವರು ಹುಟು ಹೋರಾಟಗಾರರಾಗಿದ್ದು, ನಾನು ಅವರನ್ನು ಹೋರಾಟಗಾರರು ಎಂಬ ದೃಷ್ಟಿಯಿಂದಲೇ ನೋಡುತ್ತೇನೆ. ಅವರ ಮೇಲೆ ಆರೋಪ ಬಂದು ಸಿಎಂ ಸ್ಥಾನ ತ್ಯಾಗ ಮಾಡಬೇಕಾದ ಸನ್ನಿವೇಶದಲ್ಲಿ ಸ್ವಲ್ಪವೂ ಹಿಂಜರಿಯದೆ ತ್ಯಾಗ ಮಾಡಿದವರು ಅವರು. ಆರ್ಥಿಕ ಸಚಿವರಾಗಿ ಸಾಕಷ್ಟು ರೈತ ಪರ ಯೋಜನೆಗಳನ್ನು ಜಾರಿಗೆ ತಂದರು. ಶೇ.4ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಳಿಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವವರೆಗೂ ಆ ಯೋಜನೆ ಯಶಸ್ವಿಯಾಗಿ ಸಾಗಿತ್ತು. ಶೂನ್ಯ ಬಂಡವಾಳ ಕೃಷಿ ಕುರಿತು ಮೊದಲು ಚರ್ಚೆ ಮಾಡಿದ್ದೇ ಯಡಿಯೂರಪ್ಪ. ಅದರ ಪರಿಣಾಮವಾಗಿ ಕೇಂದ್ರ ಬಜೆಟ್‍ನಲ್ಲಿ ಶೂನ್ಯ ಬಂಡವಾಳ ಕೃಷಿ ಯೋಜನೆ ಸೇರ್ಪಡೆಯಾಯಿತು ಎಂದು ಅವರು ಹೇಳಿದರು. ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತಿ ಇರುವುದು ಸ್ವಸ್ಥ ರಾಜಕಾರಣದ ಸಂಕೇತ. ಇದು ನಿಜವಾದ ಪ್ರಜಾಪ್ರಭುತ್ವ. ಎಲ್ಲಾ ಪಕ್ಷದವರೂ ರಾಜಕೀಯವನ್ನು ಮೀರಿ ಮಾನವೀಯ ಸಂಬಂಧ ಗಳನ್ನು ಇಟ್ಟುಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಪ್ರಶಂಸಿಸಿದರು.