ಬಿಎಸ್‍ವೈಗೆ ಶುಭಾಶಯ ಸುರಿಮಳೆ
ಮೈಸೂರು

ಬಿಎಸ್‍ವೈಗೆ ಶುಭಾಶಯ ಸುರಿಮಳೆ

February 28, 2020

ಬೆಂಗಳೂರು: ರಾಜ್ಯ ರಾಜಕಾರಣ ಗುರುವಾರ ಹೊಸ ರಾಜಕೀಯ ಬಾಂಧವ್ಯಕ್ಕೆ ನಾಂದಿಯಾಯಿತು. ರಾಜಕಾರಣ ಕೇವಲ ಅಧಿಕಾರ ಹಿಡಿಯಲು ನಡೆಯುವ ಪ್ರಕ್ರಿಯೆ ಯಷ್ಟೆ. ಚುನಾವಣೆ, ಸ್ಪರ್ಧೆ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಬರೀ ರಾಜಕೀಯಕ್ಕೆ ಸೀಮಿತ. ಅದಕ್ಕೂ ಮೀರಿದ್ದು ಮಾನವೀಯ ಸಂಬಂಧ ಗಳು, ಸಾಮರಸ್ಯ, ಬಾಂಧವ್ಯ, ಪ್ರೀತಿ- ವಿಶ್ವಾಸ, ಸಹಬಾಳ್ವೆ. ಇವೆಲ್ಲವೂ ಮಾನವೀಯ ಸಂಬಂಧ ಗಳ ಬಳುವಳಿ ಎಂಬುದಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‍ನಲ್ಲಿ ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ 78ನೇ ಹುಟ್ಟುಹಬ್ಬದ ಅಭಿ ನಂದನಾ ಸಮಾರಂಭ. ವಿಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿದ್ದ ರಾಜಕೀಯ ಧುರೀ ಣರು ತಮ್ಮ ದಿಕ್ಕು-ದೆಸೆಗಳನ್ನು ಮರೆತು ಒಂದಾಗಿ ಮಾನವೀಯ ಮುಖದ ಸಾಕ್ಷಾತ್ ಸಂಬಂಧವನ್ನು ಸಾರಿದರು. ಈ ಸಮಾ ರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಂಸದ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಿಶೇಷವೆಂದರೆ ಯಡಿಯೂರಪ್ಪನವರ ರಾಜಕೀಯ ವಿರೋಧಿ ಎಂದೇ ಬಿಂಬಿತವಾಗಿರುವ ವಿಪಕ್ಷ ನಾಯಕರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರು `ಕಾಫಿ ಟೇಬಲ್’ ಪುಸ್ತಕವನ್ನು ಬಿಡುಗಡೆ ಮಾಡಿ ಯಡಿಯೂರಪ್ಪ ಅವರನ್ನು ಅಭಿನಂದಿ ಸಿದರೆ, ಪಕ್ಷದೊಳಗೇ ಯಡಿಯೂರಪ್ಪನವರಿಗೆ ಎದುರಾಳಿ ಎಂದು ಮಾಧ್ಯಮಗಳಲ್ಲಿ ಬಿಂಬಿತರಾಗಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಯಡಿಯೂರಪ್ಪನವರ ಒಡನಾಡಿಗಳು ಬರೆದಿರುವ ಲೇಖನಗಳನ್ನೊಳಗೊಂಡ `ದಣಿವರಿಯದ ಧೀಮಂತ’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.

ಹಸಿರುಶಾಲು, ಬೆಳ್ಳಿ ನೇಗಿಲು: ಕೇಂದ್ರ ರಕ್ಷಣಾ ಸಚಿವ ರಾಜಾನಾಥ್ ಸಿಂಗ್ ಅವರು ಯಡಿಯೂರಪ್ಪನವರಿಗೆ ಪ್ರಿಯವಾದ ಹಸಿರು ಶಾಲು ಹೊದಿಸಿ, ಬೆಳ್ಳಿ ನೇಗಿಲು ನೀಡಿ ಅಭಿನಂದಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆಯೇ ಯಡಿಯೂರಪ್ಪ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರೆದು ಆತ್ಮೀಯವಾಗಿ ವೇದಿಕೆಯತ್ತ ಕರೆದೊಯ್ದರು. ವೇದಿಕೆವರೆಗೂ ಯಡಿಯೂರಪ್ಪ ಅಭಿಮಾನಿಗಳು ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸಿದ್ದರಾಮಯ್ಯ ವೇದಿಕೆ ಬಳಿಗೆ ಆಗಮಿಸುತ್ತಿದ್ದಂತೆಯೇ ಅಲ್ಲಿಗೆ ಬಂದ ಯಡಿಯೂರಪ್ಪ ಅವರು ವಿಪಕ್ಷ ನಾಯಕನನ್ನು ಆತ್ಮೀಯವಾಗಿ ಬರಮಾಡಿಕೊಂಡು ವೇದಿಕೆಗೆ ಕರೆದೊಯ್ದು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. ಆಗ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ ಮತ್ತು ಸಚಿವ ಸಿ.ಟಿ.ರವಿ ಸಾಥ್ ನೀಡಿದರು. ವೇದಿಕೆ ಮೇಲೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ವೈರತ್ವ ಮರೆತು ನಗು ನಗುತ್ತಾ ವಿಚಾರ ವಿನಿಮಯ ದಲ್ಲಿ ತೊಡಗಿದ್ದ ದೃಶ್ಯ ಅವರ ಮಾನವೀಯ ಸಂಬಂಧಕ್ಕೆ ಸಾಕ್ಷಿಯಂತಿತ್ತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ಸಿದ್ದರಾಮಯ್ಯ ಅವರ ಹೆಸರನ್ನು ಕರೆಯುತ್ತಿದ್ದಂತೆಯೇ ಕರಘೋಷ ಮುಗಿಲು ಮುಟ್ಟಿತು. ಇದರ ಮಧ್ಯೆ `ಹೌದೋ ಹುಲಿಯಾ’ ಘೋಷಣೆಯಂತೂ ನೆರೆದವರಲ್ಲಿ ಉತ್ಸಾಹ-ಉಲ್ಲಾಸ ಇಮ್ಮಡಿಗೊಳಿಸಿತು.

Translate »