ಲಾಕ್‍ಡೌನ್: ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ಸಂಗ್ರಹ ಇಳಿಮುಖ
ಮೈಸೂರು

ಲಾಕ್‍ಡೌನ್: ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತ ಸಂಗ್ರಹ ಇಳಿಮುಖ

April 1, 2020

ಮೈಸೂರು, ಮಾ.31- ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರ ಪರಿಣಾಮ ಮೈಸೂರಿನ ಬ್ಲಡ್ ಬ್ಯಾಂಕ್‍ಗಳಲ್ಲಿ (ರಕ್ತನಿಧಿ ಕೇಂದ್ರಗಳಲ್ಲಿ) ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಜೀವಧಾರಾ ರಕ್ತನಿಧಿ ಬ್ಯಾಂಕ್ ಸೇರಿದಂತೆ ಮೈಸೂರಿನ ಬಹು ತೇಕ ಬ್ಲಡ್ ಬ್ಯಾಂಕ್‍ಗಳಲ್ಲಿದ್ದ ರಕ್ತದ ಸಂಗ್ರಹ ಖಾಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಲಾಕ್‍ಡೌನ್ ಜಾರಿಯಲ್ಲಿರುವುದರಿಂದ `ಮನೆಯಲ್ಲೇ ಇರಿ’ ಎಂಬ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಜನರು ಮನೆಯೊ ಳಗೇ ಉಳಿದಿದ್ದಾರೆ. ಹೀಗಾಗಿ ರಕ್ತದಾನಿ ಗಳು ಬ್ಲಡ್ ಬ್ಯಾಂಕ್‍ಗೆ ತೆರಳಿ ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಕ್ತದಾನ ಶಿಬಿರಗಳು ಆಗಾಗ್ಗೆ ನಡೆದು ದಾನಿಗಳಿಂದ ರಕ್ತ ಸಂಗ್ರಹವಾಗುತ್ತಿತ್ತು. ಈಗ ಲಾಕ್ ಡೌನ್ ಇರುವುದರಿಂದ ರಕ್ತದಾನ ಶಿಬಿರ ಗಳನ್ನೂ ನಡೆಸಲಾಗುತ್ತಿಲ್ಲ. ಬ್ಲಡ್ ಬ್ಯಾಂಕ್ ಗಳಲ್ಲಿ ಈ ಮೊದಲೇ ಸಂಗ್ರಹಿಸಿಟ್ಟಿದ್ದ ರಕ್ತದ ಯೂನಿಟ್‍ಗಳು ಖಾಲಿಯಾಗು ತ್ತಿವೆ. ಸದ್ಯ ಬ್ಲಡ್ ಬ್ಯಾಂಕ್‍ಗಳು ಕೆಲ ದಿನಗಳಲ್ಲೇ ಬರಿದಾಗಲಿವೆ. ಆಗ ವಿವಿಧ ಆಸ್ಪತ್ರೆಗಳಲ್ಲಿನ ಒಳರೋಗಿಗಳಿಗೆ ರಕ್ತದ ಕೊರತೆ ಎದುರಾಗಲಿದೆ.

ಬ್ಲಡ್ ಬ್ಯಾಂಕ್‍ಗಳಲ್ಲಿ ಸಂಗ್ರಹಿಸಿಡುವ ರಕ್ತದ ಯೂನಿಟ್ 41 ದಿನ ಬಳಕೆಗೆ ಯೋಗ್ಯ ವಾಗಿರುತ್ತವೆ. ಸದ್ಯ ರಕ್ತನಿಧಿ ಕೇಂದ್ರಗಳಲ್ಲಿ ದಾಸ್ತಾನಿರುವ ರಕ್ತದ ಯೂನಿಟ್ ಏಪ್ರಿಲ್ ಮಧ್ಯಭಾಗದವರೆಗಷ್ಟೇ ಬಳಸಲು ಸಾಧ್ಯ.

1 ಸಾವಿರ ಯುನಿಟ್ ಮಾತ್ರ: ಮೈಸೂ ರಿನ ಕೆ.ಆರ್.ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಕೇವಲ 1 ಸಾವಿರ ಯೂನಿಟ್ ಮಾತ್ರ ಇದೆ. ಏಪ್ರಿಲ್ ಮಾಸಾಂತ್ಯದೊಳಗೆ ಇದನ್ನು ಬಳಸಿಕೊಳ್ಳದಿದ್ದರೆ ಮುಂದೆ ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಮಂಜು ನಾಥ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಸಾಮಾನ್ಯವಾಗಿ ರಕ್ತದಾನಿಗಳು ಆಗಾಗ್ಗೆ ರಕ್ತ ನೀಡುತ್ತಿರುತ್ತಾರೆ. ಲಾಕ್‍ಡೌನ್‍ನಿಂ ದಾಗಿ ರಕ್ತ ನೀಡುವವರೇ ಇಲ್ಲದಂತಾ ಗಿದೆ. ಮಾ.10ರವರೆಗೆ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸಲಾಗಿತ್ತು. ಸದ್ಯ ಸಂಗ್ರಹ ದಲ್ಲಿರುವ ರಕ್ತದ ಯುನಿಟ್ ಏ.14ಕ್ಕೆ ಮುಗಿಯುತ್ತದೆ. ಮುಂದೇನು? ಎಂಬುದೇ ಚಿಂತೆಯಾಗಿದೆ ಎನ್ನುತ್ತಾರೆ.

ಮೈಸೂರಿನ ಮತ್ತೊಂದು ಪ್ರಮುಖ ಬ್ಲಡ್ ಬ್ಯಾಂಕ್ `ಜೀವಧಾರಾ’ದಲ್ಲಿಯೂ ರಕ್ತದ ದಾಸ್ತಾನು ಮುಗಿಯುತ್ತಾ ಬಂದಿದೆ. ಈಗ 22 ಯೂನಿಟ್ ಮಾತ್ರ ಇವೆ. ಪ್ರಸ್ತುತ ಪರಿಸ್ಥಿತಿಗೇನೋ ಇದು ಸಾಕಾಗುತ್ತದೆ. ಮುಂದಿನ ದಿನಗಳ ಬಗ್ಗೆ ಹೇಳಲಾಗದು ಎಂದು ಅಲ್ಲಿನ ಮುಖ್ಯಸ್ಥ ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

ಯಾವುದೇ ಗುಂಪಿನ ರಕ್ತವನ್ನಾದರೂ ಸಂಗ್ರಹಿಸಿಡುತ್ತೇವೆ. ಆದರೆ ಬದಲಿ ರಕ್ತ ಕೊಡಲು ಜನ ಮುಂದೆ ಬರುತ್ತಿಲ್ಲ. ರಕ್ತ ನೀಡಲು ಯಾರಾದರೂ ಮುಂದೆ ಬಂದರೆ ನಾವೇ ಜವಾಬ್ದಾರಿ ತೆಗೆದುಕೊಂಡು ರಕ್ತದಾನಿ ಗಳನ್ನು ಆಂಬುಲೆನ್ಸ್ ಮೂಲಕ ಅವರ ಮನೆಯಿಂದ ನಮ್ಮ ಕೇಂದ್ರಕ್ಕೆ ಕರೆತರುತ್ತೇವೆ. ರಕ್ತ ಸಂಗ್ರಹಿಸಿಕೊಂಡ ಬಳಿಕ ಅವರನ್ನು ಮತ್ತೆ ಮನೆಗೆ ಬಿಟ್ಟು ಬರುವ ವ್ಯವಸ್ಥೆ ಮಾಡುತ್ತೇವೆ. ರಕ್ತದಾನಿಗಳಿಗೆ ನಮ್ಮ ಕೇಂದ್ರದಲ್ಲಿ ಸೇಬು, ಜ್ಯೂಸ್ ಮತ್ತಿತರ ಶಕ್ತಿವರ್ಧಕ ಪೇಯಗಳನ್ನು ನೀಡಿ, ಪ್ರಮಾಣ ಪತ್ರ ಸಹ ವಿತರಿಸುತ್ತೇವೆ. ಅವರ ಹೆಸ ರನ್ನು ರಕ್ತದಾನಿಗಳ ಪಟ್ಟಿಗೆ ಸೇರಿಸುತ್ತೇವೆ. ಮುಂದೆ ರಕ್ತದ ಅಗತ್ಯ ಬಿದ್ದಾಗ ಅವರನ್ನು ಕರೆಸಿಕೊಂಡು ರಕ್ತ ಸಂಗ್ರಹಿಸಿಕೊಳ್ಳುತ್ತೇವೆ ಎಂದು ವಿವರಿಸಿದರು.

ಸಂತ ಜೋಸೆಫ್ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗಾಗಿ ಕೇವಲ 7 ಯೂನಿಟ್ ರಕ್ತ ದಾಸ್ತಾನಿದೆ. ತುರ್ತು ಸಂದರ್ಭದಲ್ಲಿ ಒಳರೋಗಿಗಳಿಗೆ ಬೇಕಾಗುತ್ತದೆಂಬ ಕಾರಣಕ್ಕೆ ಕಾಯ್ದಿರಿಸಿದ್ದೇವೆ. ಈಗ ರಕ್ತ ದಾನಿಗಳೇ ಮುಂದೆ ಬರುತ್ತಿಲ್ಲ. ಬಂದರೂ ಸದ್ಯ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ದಾನಿಗಳಿಂದ ರಕ್ತ ಸಂಗ್ರಹಕ್ಕೆ ಮುಂದಾಗು ತ್ತಿಲ್ಲ. ಲಾಕ್‍ಡೌನ್ ಮುಗಿದು ಅನುಮತಿ ಬರುವವರೆಗೂ ಸುರಕ್ಷತೆ ದೃಷ್ಟಿಯಿಂದ ರಕ್ತ ಸಂಗ್ರಹಿಸುವುದಿಲ್ಲ ಎಂದು ಆಸ್ಪತ್ರೆಯ ರಕ್ತನಿಧಿ ಪ್ರಭಾರಿ ಇಬ್ರಾಹಿಂ ತಿಳಿಸಿದರು.

`ರಕ್ತದ ಅಭಾವಕ್ಕೆ ಅವಕಾಶ ನೀಡುವುದಿಲ್ಲ’
ಯಾವ ಕಾರಣಕ್ಕೂ ನಮ್ಮ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಅಭಾವಕ್ಕೆ ಅವಕಾಶ ನೀಡುವುದಿಲ್ಲ. ಮೊದಲು ನಿತ್ಯ 40-50 ಯೂನಿಟ್ ರಕ್ತ ಸಂಗ್ರಹಿಸುತ್ತಿದ್ದೆವು. ಈಗ 12ರಿಂದ 14 ಜನರಷ್ಟೇ ರಕ್ತ ಕೊಟ್ಟು ಹೋಗುತ್ತಾರೆ. ಭಾನುವಾರ 4 ಮಂದಿ ಮಾತ್ರ ರಕ್ತ ಕೊಟ್ಟರು. ಬ್ಲಡ್ ಬ್ಯಾಂಕ್‍ಗೆ ರಕ್ತ ಸಂಗ್ರಹಿಸುವುದೇ ನಮ್ಮ ಕೆಲಸವಾಗಿರುವುದರಿಂದ ರಕ್ತದ ಅಭಾವಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಬಳಿ ರಕ್ತದಾನಿಗಳ ದೊಡ್ಡ ಪಟ್ಟಿಯೇ ಇದೆ. ನಿಮಗೆ ಅನುಕೂಲ ಆದಾಗ ಬಂದು ರಕ್ತ ನೀಡುವಂತೆ ಅವರಿಗೆಲ್ಲಾ ಮಾಹಿತಿ ನೀಡುತ್ತೇವೆ. `ತಿಂಡಿ ತಿಂದು ಬನ್ನಿ, ಜ್ವರ ಇದ್ದರೆ ಬರಬೇಡಿ’ ಎಂದು ನಾವೇ ಅವರಿಗೆ ಸೂಚನೆ ನೀಡುತ್ತೇವೆ ಎಂದು ಕೆ.ಆರ್.ಆಸ್ಪತ್ರೆ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ.ಬಿ.ಎಸ್.ಮಂಜುನಾಥ್ ಹೇಳಿದರು.

ರಕ್ತದಾನಿಗಳು ಯಾವುದೇ ಸಂದರ್ಭದಲ್ಲಿಯೂ ರಕ್ತ ನೀಡಬಹುದು. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದ ರಕ್ತದಾನಿಗಳು ಯಾವುದೇ ಅಳುಕಿಲ್ಲದೆ ರಕ್ತ ನೀಡಲು ಬರಬಹುದು. ರಕ್ತದಾನಿಗಳಿಗೆ ಪೊಲೀಸರು ಅಡ್ಡಿಪಡಿಸಲಾರರು. -ಡಾ.ಬಿ.ಎಸ್.ಮಂಜುನಾಥ್, ಮುಖ್ಯಸ್ಥ, ಬ್ಲಡ್ ಬ್ಯಾಂಕ್, ಕೆ.ಆರ್.ಆಸ್ಪತ್ರೆ

65ನೇ ವಯಸ್ಸಿನವರೆಗೂ ರಕ್ತ ಕೊಡಬಹುದು. ಒಮ್ಮೆ ರಕ್ತ ನೀಡಿದರೆ ಮುಂದಿನ 90 ದಿನಗಳವರೆಗೆ ಮತ್ತೆ ರಕ್ತ ನೀಡಲಾಗದು.     ಪ್ರತಿ ರಕ್ತದಾನಿಯಿಂದ 350 ಎಂಎಲ್ ರಕ್ತವನ್ನಷ್ಟೇ ಸಂಗ್ರಹಿಸಲಾಗುತ್ತದೆ. 350 ಮಿ.ಲೀ. ರಕ್ತವನ್ನು ಒಂದು ಯೂನಿಟ್ ಎನ್ನಲಾಗುತ್ತದೆ. –  ಗಿರೀಶ್, ಜೀವಧಾರ ರಕ್ತನಿಧಿ ಕೇಂದ್ರ

ರಾಜಕುಮಾರ್ ಭಾವಸಾರ್

Translate »