ಲಾಕ್‍ಡೌನ್; ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ
ಚಾಮರಾಜನಗರ

ಲಾಕ್‍ಡೌನ್; ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ

April 2, 2020

ಚಾಮರಾಜನಗರ, ಏ.1(ಎಸ್‍ಎಸ್)-ಭಾರತವೇ ಲಾಕ್‍ಡೌನ್ ಆಗಿರುವ ಕಾರಣ ಜಿಲ್ಲೆಯಲ್ಲಿ ಆಹಾರ ಪದಾರ್ಥ ಗಳ ಬೆಲೆ ಗಗನಕ್ಕೇರಿದೆ. ಇದು ಜನ ಸಾಮಾನ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಕೊರೊನಾ ವೈರಸ್ (ಕೋವಿಡ್-19) ಹರಡುವುದನ್ನು ತಪ್ಪಿಸಲು ಮಾರ್ಚ್ 25ರಿಂದ 21 ದಿನಗಳ ಕಾಲ ಇಡೀ ಭಾರತವನ್ನು ಲಾಕ್‍ಡೌನ್ ಘೋಷಿಸ ಲಾಗಿದೆ. ಜಿಲ್ಲೆಯಲ್ಲಿ ಆಹಾರ ಪದಾರ್ಥ ಗಳನ್ನು (ದಿನಸಿ ಅಂಗಡಿ) ಮಾರಾಟ ಮಾಡಲು ಬೆಳಿಗ್ಗೆ 6ರಿಂದ 10 ಗಂಟೆ, ಸಂಜೆ 5 ರಿಂದ 7 ಗಂಟೆ ವೇಳೆಯನ್ನು ನಿಗದಿಗೊಳಿಸಿದೆ. ಆದರೆ ಅಂಗಡಿಗಳಿಗೆ ಪದಾರ್ಥಗಳು ಸಮರ್ಪಕವಾಗಿ ಸರಬ ರಾಜು ಆಗುತ್ತಿಲ್ಲ. ನಾವು ಕೇಳಿದಷ್ಟು ಪದಾರ್ಥಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಹಾಗಾಗಿ ಪದಾರ್ಥ ಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದನ್ನು ಮಾಲೀಕರು ಒಪ್ಪಿಕೊಳ್ಳುತ್ತಾರೆ.

25 ಕೆ.ಜಿ. ಅಕ್ಕಿ ಮೂಟೆಗೆ 50 ರೂ. ಹೆಚ್ಚಳವಾಗಿದೆ. ಅಂದರೆ 1 ಕೆ.ಜಿ. ಅಕ್ಕಿಗೆ 2 ರೂ. ಹೆಚ್ಚಳವಾಗಿದೆ. ತೊಗರಿಬೇಳೆ 100 ರೂ.ನಿಂದ 120 ರೂ.ಗೆ, ಹುರಿಕಡಲೆ 70 ರೂ.ನಿಂದ 90 ರೂ.ಗೆ, ಹೆಸರುಕಾಳು 100 ರೂ.ನಿಂದ 130 ರೂ.ಗೆ, ಕಡ್ಲೆಬೀಜ 120 ರೂ.ನಿಂದ 160 ರೂ.ಗೆ, ಸಕ್ಕರೆ 38 ರೂ.ನಿಂದ 44 ರೂ.ಗೆ, ಒಳ್ಳೆಣ್ಣೆ 98 ರೂ.ನಿಂದ 110 ರೂ.ಗೆ, ಈರುಳ್ಳಿ 30 ರೂ.ನಿಂದ 40 ರೂ.ಗೆ, ಬೆಲ್ಲ ಒಂದು ಪಿಂಡಿಗೆ 220 ರೂ.ನಿಂದ 280 ರೂ.ಗೆ ಏರಿಸಲಾಗಿದೆ. ಇದು ಉದಾಹರಣೆಗೆ ಮಾತ್ರ. ಬಹುತೇಕ ಪದಾರ್ಥಗಳ ಬೆಲೆ ಏರಿಕೆ ಆಗಿವೆ. ಇದರಿಂದ ತಮಗೆ ತೊಂದರೆ ಆಗಿದೆ ಎಂದು ಗ್ರಾಹಕ ಪ್ರದೀಪ್ `ಮೈಸೂರು ಮಿತ್ರ’ನೊಂ ದಿಗೆ ತನ್ನ ಅಳಲನ್ನು ತೋಡಿಕೊಂಡರು.

ಜನಸಾಮಾನ್ಯರು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳು ಅಂಗಡಿ ಮಾಲೀಕ ರಿಗೆ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕು. ಈ ಮೂಲಕ ಪದಾರ್ಥ ಗಳ ದರ ಹೆಚ್ಚಳ ಆಗುವುದನ್ನು ತಡೆಗಟ್ಟ ಬೇಕು. ಲಾಕ್‍ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿರುವ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Translate »