ಚಾಮರಾಜನಗರ, ಏ.1(ಎಸ್‍ಎಸ್)-ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ 12 ಮಂದಿ ಭಾಗವಹಿಸಿದ್ದರು.
ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರಿಗೆ ಬುಧವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದರು.
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ಮಾರ್ಚ್ 13ರಿಂದ 15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ನಾಲ್ಕು ಮಂದಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಮೊದಲಿಗೆ ದೊರೆಯಿತು. ಇವರಲ್ಲಿ ಮೂವರನ್ನು ಪತ್ತೆ ಹಚ್ಚಿ ನಗರದ ಕೋವಿಡ್-19 ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇದರಲ್ಲಿ ಇಬ್ಬರು ಕೊಳ್ಳೇ ಗಾಲದವರು. ಮತ್ತಿಬ್ಬರು ಚಾಮರಾಜನಗರದವರು ಎಂದರು.
ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ತೀವ್ರ ವಿಚಾರಣೆ ನಡೆಸಿದಾಗ ನಮ್ಮೊಂದಿಗೆ ಇನ್ನೂ 9 ಮಂದಿ (ಒಟ್ಟು 12 ಮಂದಿ) ಬಂದಿದ್ದರು ಎಂಬ ಮಾಹಿತಿ ದೊರೆಯಿತು. ಈ ಪೈಕಿ ಒಬ್ಬರು ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ದೊರೆತಿದೆ. ಎಲ್ಲರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿ ಇದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.