Uncategorized, ಮೈಸೂರು

ಗ್ಯಾಂಗ್ ರೇಪ್ ಪ್ರಕರಣ: ಮೂವರ ಸೆರೆ, ಐವರ ಪತ್ತೆಗೆ ಮುಂದುವರೆದ ಶೋಧ

June 1, 2019

ಮೈಸೂರು: ಮೈಸೂರಿನ ಹೊರ ವಲಯದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಕಡೆಗೂ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ನಗರದ ನಿವಾಸಿ ಗಳೆನ್ನಲಾದ ಕಾರ್ತಿಕ್‍ಕುಮಾರ(25), ಜೀವನ್(25) ಹಾಗೂ ಸೂರ್ಯ ಕುಮಾರ್(23) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇನ್ನೂ ಐವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕೆ.ಆರ್. ಉಪ ವಿಭಾಗದ ಎಸಿಪಿ ಜಿ.ಟಿ.ನಾಯಕ್ ಅವರು ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿ ಕುವೆಂಪು ನಗರ ಠಾಣೆ ಇನ್‍ಸ್ಪೆಕ್ಟರ್ ರಾಜು, ಸಬ್‍ಇನ್‍ಸ್ಪೆಕ್ಟ್‍ಗಳಾದ ಅರುಣ್ ಮತ್ತು ರಘು ಅವರನ್ನೊಳಗೊಂಡ ಮೂರು ತಂಡಗಳ ರಚಿಸಲಾಗಿತ್ತು.

ಸುಳಿವಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು ಗುರುವಾರ ಮೂವರನ್ನು ಬಂಧಿಸಿ, ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ 8 ದಿನಗಳವರೆಗೆ ಆರೋಪಿ ಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇನ್ನೂ ಐವರು ಭಾಗಿಗಳಾಗಿದ್ದಾರೆಂಬ ಸುಳಿವು ದೊರೆತಿದ್ದು ತಲೆಮರೆಸಿಕೊಂಡಿರುವ ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದಾರೆನ್ನ ಲಾದ ಕಾರು, ಬೈಕ್‍ಗಳು, ಹಾಕಿ ಸ್ಟಿಕ್, ದೊಣ್ಣೆಗಳನ್ನು ವಶಪಡಿಸಿಕೊಳ್ಳಬೇಕಾಗಿರು ವುದರಿಂದ ವಶಕ್ಕೆ ಪಡೆದಿರುವ ಮೂವರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮೇ 9ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಮೈಸೂರಿನ ಹೊರವಲಯದ ಲಿಂಗಾಂಬುದಿ ಪಾಳ್ಯದ ಮಾರಮ್ಮ ದೇವಸ್ಥಾನದ ಹಿಂಭಾಗ ಶಿವಸಿದ್ದು ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರೊಂದಿ ಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ 8 ಮಂದಿ ಪರಾರಿಯಾಗಿದ್ದರು.

ಸಂತ್ರಸ್ತ ಮಹಿಳೆ ದೂರಿನನ್ವಯ ಜಯಪುರ ಠಾಣೆ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಿಕೊಂಡಿದ್ದರಾದರೂ, ವ್ಯಾಪ್ತಿ ಗೊಂದಲದಿಂದಾಗಿ ನ್ಯಾಯಾ ಲಯದ ಆದೇಶದಂತೆ ಮೇ 10ರಂದು ಪ್ರಕರಣದ ತನಿಖೆಯನ್ನು ಕುವೆಂಪು ನಗರ ಠಾಣೆಗೆ ವರ್ಗಾಯಿಸಲಾಗಿತ್ತು. ಮೈಸೂರು ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಹಾಗೂ ಡಿಸಿಪಿ ಎಂ.ಮುತ್ತುರಾಜ್ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ ಮೂರು ತಂಡಗಳನ್ನು ರಚಿಸಿದ್ದರು.

Translate »