ಮೈಸೂರು

ಮೈಸೂರು ಮಹಾನಗರ ಪಾಲಿಕೆ ಚುನಾವಣೆ; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

August 25, 2018

ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ, 24ಘಿ7 ಶುದ್ಧ ಕುಡಿಯುವ ನೀರು ಪೂರೈಕೆ ಭರವಸೆ
* ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಗರ ಬಸ್ ನಿಲ್ದಾಣ ಸ್ಥಳಾಂತರ
* ಬನ್ನಿಮಂಟಪ ಬಸ್ ಡಿಪೋಗೆ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರ
* ದಸರಾ ರೀತಿ ಶಾಶ್ವತ ದೀಪಾಲಂಕಾರಕ್ಕೆ ಯೋಜನೆ

ಮೈಸೂರು: ಮೈಸೂರು ಮಹಾ ನಗರಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಲೇಬೇಕು ಎಂಬ ಗುರಿಯೊಂದಿಗೆ ಅಖಾಡಕ್ಕಿಳಿದಿರುವ ಕಾಂಗ್ರೆಸ್, ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಮೈಸೂರಿನ ಅಭಿವೃದ್ಧಿ ಕುರಿತಂತೆ ಅನೇಕ ಭರವಸೆಗಳನ್ನು ನೀಡಿದೆ.

ನಗರ ನೈರ್ಮಲ್ಯ, ಕುಡಿಯುವ ನೀರು ಸರಬರಾಜು, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಚಿಕಿತ್ಸೆ ಇನ್ನಿತರ ಪ್ರಮುಖ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ಘನತ್ಯಾಜ್ಯದಿಂದ ಮಿನಿ ವಿದ್ಯುತ್ ಘಟಕ ಸ್ಥಾಪನೆ, ಒಳಚರಂಡಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳ ಸ್ಥಾಪನೆ ಹಾಗೂ ನೀರಿನ ಸದ್ಬಳಕೆ. ಜನಸಂಖ್ಯೆ ಆಧಾರಿತ ಪೌರ ಕಾರ್ಮಿಕರ ನೇಮಕಾತಿ, ಮೈಸೂರು ನಗರವನ್ನು ದೇಶದ ಅತ್ಯಂತ ಶುಚಿ ನಗರವಾಗಿ ಮಾರ್ಪಡಿಸುವ ಯೋಜನೆ ರೂಪಿಸುವುದು.

  • ನಗರಕ್ಕೆ 24ಘಿ7 ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕುಡಿಯುವ ನೀರಿನ ಯೋಜನೆ. ಹಳೇ ಉಂಡವಾಡಿ ಗ್ರಾಮದಲ್ಲಿ ಕೆಆರ್‍ಎಸ್ ಜಲಾಶಯದ ಮಧ್ಯಭಾಗದಿಂದ ನೀರನ್ನು ಪಡೆದು ಶುದ್ಧೀಕರಿಸಿ ನಗರದ  ವಿವಿಧ ಬಡಾವಣೆಗಳಿಗೆ ಸರಬರಾಜು ಮಾಡುವುದು.
  •  ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಸುಧಾರಿಸಲು ವಿವಿಧ ಆಯ್ದ ಪ್ರದೇಶಗಳಲ್ಲಿ ಬಹು ಮಹಡಿ ನಿಲುಗಡೆ ಕಟ್ಟಡಗಳ ನಿರ್ಮಾಣ. ಹೊರ ವರ್ತುಲ ರಸ್ತೆ ನಿರ್ಮಾಣ, ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಗರಪಾಲಿಕೆ ಪರವಾಗಿ ವ್ಯವಸ್ಥಿತ ಹಾಗೂ ಪರಿಣಾಮಕಾರಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಭಾಗವಹಿಸುವಿಕೆ.
  •  ಹಾಲಿ ಇರುವ ಸದಸ್ಯರ ಜೊತೆಗೆ ಮತ್ತೊಬ್ಬ ಸದಸ್ಯರನ್ನು ಹಾಗೂ ಉಪ ಮೇಯರ್‍ರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಲು ಸರ್ಕಾರಕ್ಕೆ ಮನವಿ ಮಾಡುವುದು.
  • ಚಾಮುಂಡಿಬೆಟ್ಟವನ್ನು ಕೇಂದ್ರ ಭಾಗವನ್ನಾಗಿಸಿ ಮೆಟ್ರೋ ಅಥವಾ ಮಾನೊ ರೈಲ್ವೆಗೆ ಜಾಗ ಮೀಸಲಾತಿಗೆ ಪ್ರಾಧಿಕಾರÉ್ಕ ಒತ್ತಾಯ ತರುವುದು.
  • ಪಾಲಿಕೆ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ. ರಕ್ತ ಪರೀಕ್ಷೆ, ಮಿನಿ ಪೆಥಾಲಜಿಕಲ್ ಲ್ಯಾಬ್ ನಿರ್ವಹಣೆ, ಮೂತ್ರಪಿಂಡ ಕಾಯಿಲೆ ಇರುವವರಿಗೆ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ.
  •  ಸರ್ಕಾರದ ನೆರವಿನಲ್ಲಿ ಪಾಲಿಕೆಗೆ ಸೇರಿದ ಲ್ಯಾನ್ಸ್‍ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ವಾಣಿ ವಿಲಾಸ ಹಾಗೂ ಮಂಡಿ ಮಾರುಕಟ್ಟೆಗಳ ನವೀಕರಣ, ಪಾರಂಪರಿಕ ಕಟ್ಟಡಗಳ ವಿನ್ಯಾಸದಂತೆ ಇವುಗಳ ನಿರ್ಮಾಣ.
  • ಮೈಸೂರು ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ವರ್ಗಾಯಿಸಿ, ಗ್ರಾಮಾಂತರ ಬಸ್ ನಿಲ್ದಾಣವನ್ನು ಬನ್ನಿಮಂಟಪದಲ್ಲಿರುವ ಹಾಲಿ ಬಸ್ ಡಿಪೋಗೆ ವರ್ಗಾಯಿಸುವುದು.
  •  ನಗರದ ವಾಯು ಮಾಲಿನ್ಯ ನಿಯಂತ್ರಿಸಲು ವ್ಯಾಪಕವಾಗಿ ಮರ ಗಿಡಗಳನ್ನು ವಿವಿಧ ಬಡಾವಣೆಗಳಲ್ಲಿ ನೆಡುವುದು. ನಗರಪಾಲಿಕೆಗೆ ಸೇರಿದ ಖಾಲಿ ಜಾಗವನ್ನು ಅರಣ್ಯ ಇಲಾಖೆಯಿಂದ ಮಿನಿ ಅರಣ್ಯೀಕರಣಗೊಳಿಸುವುದು.
  •  ಮೈಸೂರು ನಗರಕ್ಕ ಬರುವ ಪ್ರವಾಸಿಗರನ್ನು ಆಕರ್ಷಿಸಲು ದಸರಾ ರೀತಿಯ ದೀಪಾಲಂಕಾರವನ್ನು ಶಾಶ್ವತವಾಗಿ ಅಳವಡಿಸಲು ಯೋಜನೆ ರೂಪಿಸುವುದು.

Translate »