ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು
ಮೈಸೂರು

ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು

September 8, 2018

ಬೆಂಗಳೂರು: ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಮತ್ತೆ ಅತಂತ್ರ ಸ್ಥಿತಿ ತಲುಪಿರುವ ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆಗಳ ಅಧಿಕಾರ ಚುಕ್ಕಾಣಿಯನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟು ಕೊಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ.

ಮೈಸೂರು, ತುಮಕೂರು ಎರಡು ಮಹಾ ನಗರ ಪಾಲಿಕೆಗಳು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಅತಂತ್ರ ಸ್ಥಿತಿಯಲ್ಲಿವೆ. ಈ ಎರಡು ನಗರ ಪಾಲಿಕೆ ಸೇರಿದಂತೆ 24 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾ ಣಿಕೆ ಮಾಡಿಕೊಂಡರೆ ಅಧಿಕಾರ ಹಿಡಿಯಬಹುದು. ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಅವರು ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಿನ್ನೆ ರಾತ್ರಿ ನಡೆದ ಸಂಪುಟ ಸಭೆ ನಂತರ ಅಧಿಕಾರಿ ಗಳು ಮತ್ತು ಸಚಿವರನ್ನು ಹೊರಗೆ ಕಳುಹಿಸಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರೊಂದಿಗೆ ಈ ಸಂಬಂಧ ಚರ್ಚೆ ಮಾಡಿದ್ದಾರೆ. ನಗರ ಪಾಲಿಕೆ ಹೊರತುಪಡಿಸಿ ಉಳಿದ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ನಿಮಗೆ ಅಧಿಕಾರ ನೀಡುತ್ತೇವೆ, ಆದರೆ ನಮಗೆ ಈ ಎರಡು ಸಂಸ್ಥೆಗಳ ಅಧಿಕಾರ ನೀಡಬೇಕು.

ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ನಾಲ್ಕು ವರ್ಷಗಳಿಂದ ಬೇಷರತ್ ಬೆಂಬಲ ನೀಡಿದ್ದೇವೆ. ಅದನ್ನೇ ಮುಂದಿನ ಬಾರಿಯೂ ಮುಂದುವರಿಸುತ್ತೇವೆ. ನಿಮಗೆ ಇಂತಹ ದೊಡ್ಡ ಪಾಲಿಕೆಯನ್ನೇ ಬಿಟ್ಟುಕೊಟ್ಟಿದ್ದೇವೆ, ನಮಗೆ ಎರಡನೇ ಹಂತದ ಪಾಲಿಕೆಗಳ ಅಧಿಕಾರ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.

ಅಷ್ಟೇ ಅಲ್ಲ, ಅಂಕಿ-ಸಂಖ್ಯೆ ಆಧಾರದ ಮೇಲೂ ಎರಡೂ ಪಾಲಿಕೆಗಳಲ್ಲೂ ಕಾಂಗ್ರೆಸ್ ಗಿಂತ ನಾವು ಹೆಚ್ಚು ಸಂಖ್ಯಾಬಲ ಹೊಂದಿದ್ದೇವೆ. ಮೈಸೂರಿನ 65 ವಾರ್ಡ್‍ಗಳ ಪೈಕಿ ನಾವು 18 ಸ್ಥಾನ ಪಡೆದು 3ನೇ ಸ್ಥಾನದಲ್ಲಿದ್ದರೂ, ನಮಗೆ ನಮ್ಮ ಮೈತ್ರಿ ಪಕ್ಷ ಬಿಎಸ್‍ಪಿ ಒಂದು ಹಾಗೂ ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನು ಗಣನೆಗೆ ತೆಗೆದುಕೊಂಡರೆ ನಾವು ನಿಮಗಿಂತ ಹೆಚ್ಚು ಸ್ಥಾನ ಹೊಂದಿದ್ದೇವೆ. ಈಗಾಗಲೇ ಮೀಸಲಾತಿ ಪ್ರಕಟಿಸಿರುವಂತೆ ಎರಡೂ ಪಾಲಿಕೆಗಳಲ್ಲೂ ಆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ನಮ್ಮ ಪಕ್ಷದಿಂದ ಆಯ್ಕೆಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡಿದ್ದಾರೆ.

ತುಮಕೂರು ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ತಮ್ಮ ಜಿಲ್ಲೆಯೇ ಆದರೂ ಉದಾರ ನೀತಿ ತೋರಿದ್ದಾರೆ. ಮೈಸೂರಿನ ವಿಚಾರದಲ್ಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಮಾಲೋಚಿಸಿ, ತಮ್ಮ ನಿಲುವು ವ್ಯಕ್ತಪಡಿಸಬಹುದು. ಸಿದ್ದರಾಮಯ್ಯ ಅಧಿಕಾರ ಹಂಚಿಕೆ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿ. ಆದರೆ, ಜೆಡಿಎಸ್ ಮಾತ್ರ ಈ ಪ್ರತಿಷ್ಠಿತ ಪಾಲಿಕೆಯ ಅಧಿಕಾರ ಹಿಡಿಯುವ ಸ್ಪಷ್ಟ ನಿಲುವು ಹೊಂದಿದೆ. ಕಳೆದ ಅವಧಿಯಲ್ಲಿ ಈ ಪಾಲಿಕೆಗೆ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ, ಆ ಸಮಯದಲ್ಲಿ ಜೆಡಿಎಸ್, ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿತ್ತು. ಆದರೆ ಈ ಬಾರಿ ರಾಜಕೀಯ ಸ್ಥಿತಿ ಬದಲಾವಣೆ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಮೈತ್ರಿಯನ್ನೇ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಬೇಕಿದೆ.

Translate »