ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು
ಮೈಸೂರು

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು

September 22, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ಕೊಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಬಿಜೆಪಿ ದೂರು ನೀಡಿದೆ.

ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸದಸ್ಯರಾದ ಮಾಡಾಳು ವಿರೂಪಾಕ್ಷಪ್ಪ, ಸಿ.ಎಂ. ಉದಾಸಿ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ತೇಜಸ್ವಿನಿ ರಮೇಶ್‍ಗೌಡ ಮತ್ತಿತರನ್ನೊಳಗೊಂಡ ನಿಯೋಗವು ಡಿಜಿಪಿಗೆ ದೂರು ನೀಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯವರೇ ಪ್ರಚೋದನಾ ಕಾರಿ ಹೇಳಿಕೆ ನೀಡಿ ಜನರನ್ನು ದಂಗೆ ಏಳುವಂತೆ ಕರೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ. ಕುಮಾರಸ್ವಾಮಿ ಅವರು ನಿನ್ನೆ ಮಾತನಾಡಿರುವ ಆಡಿಯೋ ಕ್ಲಿಪಿಂಗ್ಸ್ ಹಾಗೂ ನಂತರ ನಡೆದಿರುವ ಬೆಳವಣಿಗೆಗಳನ್ನು ಸಹ ನೀಡಿದೆ.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯದ ಇತಿಹಾಸದಲ್ಲಿ ಈವರೆಗೂ ಯಾವುದೇ ಮುಖ್ಯಮಂತ್ರಿಗಳು ಜನರನ್ನು ಎತ್ತಿಕಟ್ಟುವಂತಹ ಹೀನ ಕೃತ್ಯಕ್ಕೆ ಇಳಿದಿರಲಿಲ್ಲ. ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕುಮಾರಸ್ವಾಮಿ ಅವರು ಜನರನ್ನು ಪ್ರಚೋದನೆಗೊಳಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕುಮಾರಸ್ವಾಮಿ ಅವರ ಹೇಳಿಕೆಯಿಂದಲೇ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್‍ವೈ ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರು ಅಲ್ಲಿ ಇಲ್ಲದಿದ್ದರೆ ಯಡಿಯೂರಪ್ಪನವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಪ್ರಚೋದನಕಾರಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರ ವಿರುದ್ದ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಅದಕ್ಕೆ ಕುಮಾರಸ್ವಾಮಿ ಅವರೇ ಹೊಣೆ ಎಂದರು. ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್-ಜೆಡಿಎಸ್‍ನಲ್ಲಿ ಉಂಟಾಗಿರುವ ಗೊಂದಲವನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮುಖ್ಯಮಂತ್ರಿಗಳಿಂದ ನಡೆದಿದೆ. ದೋಸ್ತಿ ಸರ್ಕಾರದಲ್ಲಿರುವ ಭಿನ್ನಮತವನ್ನು ನಮ್ಮ ಪಕ್ಷದ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದೆ. ಸರ್ಕಾರ ಬಿದ್ದು ಹೋಗಬಹುದೆಂಬ ಭೀತಿಯಿಂದಾಗಿ ಮುಖ್ಯಮಂತ್ರಿಗಳೇ ಜನರನ್ನು ದಂಗೆ ಏಳಲು ಕರೆ ಕೊಡುತ್ತಾರೆ ಎಂದರೆ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿಯವರು ಯಾವ ಹಂತಕ್ಕಾದರೂ ಇಳಿಯಬಹುದು.

Translate »