ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ
ಮೈಸೂರು

ತಾಯಿ, ಮಕ್ಕಳಿಬ್ಬರ ಮೃತದೇಹ ಪತ್ತೆ

September 22, 2018

ಮೈಸೂರು: ಕೆಆರ್‌ಎಸ್‌ ಬಳಿ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹಗಳು ಇಂದು ಬೆಳಿಗ್ಗೆ ಬೆಳಗೊಳ ಸಮೀಪ ನಾಲೆಯಲ್ಲಿ ಪತ್ತೆಯಾಗಿವೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ, ಹಾಲಿನ ವ್ಯಾಪಾರಿ ಕುಮಾರ್ ಎಂಬುವರ ಪತ್ನಿ ಶ್ರೀಮತಿ ಕಮಲ(45), ಮಕ್ಕಳಾದ ವೈಷ್ಣವಿ (17) ಹಾಗೂ ವರ್ಷಾ(14) ಎಂಬುವರೇ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದವರು.

ತಮ್ಮ ಮನೆ ಬಳಿ ಪ್ರತಿಷ್ಠಾಪಿಸಿದ್ದ ಗಣಪತಿ ಪೂಜೆಗೆಂದು ಹೋಗಿ ದ್ದಾಗ ವೈಷ್ಣವಿ ಮತ್ತು ವರ್ಷಾ ಅಲ್ಲಿದ್ದಕೆಲ ಯುವಕರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರೆನ್ನಲಾಗಿದೆ. ಈ ವಿಷಯ ತಿಳಿದ ತಂದೆ ಕುಮಾರ್, ಮಕ್ಕಳಿಗೆ ಬೈದು ನಾಳೆಯಿಂದ ಕಾಲೇಜಿಗೂ ಹೋಗಕೂಡದು ಎಂದು ತಾಕೀತು ಮಾಡಿದ್ದರಿಂದ ಮನೆಯಲ್ಲಿ ತೀವ್ರ ಜಗಳವಾಗಿತ್ತು ಎಂದು ತಿಳಿದು ಬಂದಿದೆ.

ಅದರಿಂದ ಮನ ನೊಂದ ಪತ್ನಿ ಕಮಲ ಅವರು ಗುರುವಾರ ರಾತ್ರಿ ಮನೆಯಿಂದ ಇಬ್ಬರು ಮಕ್ಕಳನ್ನು ಕರೆದುಕೊಂಡು ಕೆಆರ್‌ಎಸ್‌ಗೆ ಹೋಗುವ ಬಸ್ ಹತ್ತಿದ್ದರು. ಅದನ್ನು ಗಮನಿಸಿದ ನೆರೆಹೊರೆಯವರು ಆ ವಿಷಯವನ್ನು ಕುಮಾರ್‍ಗೆ ತಿಳಿಸಿದ್ದರು.

ತಕ್ಷಣ ಮತ್ತೊಂದು ಬಸ್ಸಿನಲ್ಲಿ ಕುಮಾರ್ ಕೆಆರ್‌ಎಸ್‌ ತಲುಪುತ್ತಿದ್ದಂತೆ ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವರುಣಾ ನಾಲೆಗೆ ಹಾರಿದ್ದಾರೆಂಬ ಮಾಹಿತಿ ತಿಳಿದಿದೆ. ತಕ್ಷಣ ಅಲ್ಲಿನ ಪೊಲೀಸ್ ಠಾಣೆಗೆ ತೆರಳಿದ ಕುಮಾರ್ ನಾಲೆಗೆ ಹಾರಿದವರು ತನ್ನ ಪತ್ನಿ ಕಮಲ, ಪುತ್ರಿಯರಾದ ವೈಷ್ಣವಿ ಮತ್ತು ವರ್ಷಾ ಎಂದು ತಿಳಿಸಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ಕೆಆರ್‌ಎಸ್‌ ಠಾಣೆ ಸಬ್ ಇನ್ಸ್‍ಪೆಕ್ಟರ್ ಬ್ಯಾಟರಾಯಪ್ಪ ಹಾಗೂ ಸಿಬ್ಬಂದಿ, ನದಿಯಲ್ಲಿ ಹುಡುಕಾಡಿದರೂ, ಮೃತ ದೇಹಗಳು ಪತ್ತೆಯಾಗಿರಲಿಲ್ಲ. ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಕೊಚ್ಚಿ ಹೋಗಿರಬಹುದೆಂದು ಹೇಳಿದ್ದರು.

ಇಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದಾಗ ಮೂವರ ಮೃತದೇಹಗಳೂ ಬೆಳಗೊಳ ಸಮೀಪ ವರುಣಾ ನಾಲೆಯಲ್ಲಿ ಪತ್ತೆಯಾದವು. ಪ್ರಕರಣ ದಾಖಲಿಸಿ ಕೊಂಡಿರುವ ಕೆಆರ್‌ಎಸ್‌ ಠಾಣೆ ಪೊಲೀಸರು, ಬೆಳಗೊಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Translate »