ಚಿತ್ರೀಕರಣ ಮುಗಿಸಿದ ಮೈಸೂರು `ಪ್ರೀಮಿಯರ್ ಸ್ಟುಡಿಯೋ’
ಮೈಸೂರು

ಚಿತ್ರೀಕರಣ ಮುಗಿಸಿದ ಮೈಸೂರು `ಪ್ರೀಮಿಯರ್ ಸ್ಟುಡಿಯೋ’

September 22, 2018

ಮೈಸೂರು: ಭಾರತ ಚಿತ್ರೋದ್ಯಮದಲ್ಲಿ ಹೆಗ್ಗುರುತಾಗಿದ್ದ ಮೈಸೂರಿನ ಪ್ರಿಮಿಯರ್ ಸ್ಟುಡಿಯೋ ಇದೀಗ ಇತಿಹಾಸ ಪುಟ ಸೇರಿದೆ.

ವಿವಿಧ ಕಾರಣಗಳಿಂದ 2 ದಶಕಗಳ ಹಿಂದೆಯೇ ಸ್ಥಗಿತಗೊಂಡಿದ್ದ ಸ್ಟುಡಿಯೋ ಕಟ್ಟಡವನ್ನು ವರ್ಷದಿಂದ ಹಂತ ಹಂತವಾಗಿ ಕೆಡವಲಾಗಿದ್ದು, ಇದೀಗ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಪಕ್ಕದಲ್ಲೇ ಇರುವ ಗ್ರೀನ್ ಹೋಟೆಲ್ (ಹಿಂದಿನ ಚಿತ್ತರಂಜನ್ ಮಹಲ್) ಸೇರಿದಂತೆ ಹಲವು ಕಟ್ಟಡಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಸ್ಟುಡಿಯೋ ಭಾಗವನ್ನು ಮಾತ್ರ ನೆಲಸಮಗೊಳಿಸಲಾಗಿದೆ.

ಮೈಸೂರಿನ ವಿನೋಬಾ ರಸ್ತೆ, ಜಯಲಕ್ಷ್ಮೀಪುರಂನಲ್ಲಿರುವ ಪ್ರಿಮಿಯರ್ ಸ್ಟುಡಿಯೋವನ್ನು ಎಂ.ಎನ್.ಬಸವರಾಜಯ್ಯ ಅವರು 1957ರಲ್ಲಿ ಸ್ಥಾಪಿಸಿದ್ದರು. ನಂತರ 1964ರ ಸುಮಾರಿನಲ್ಲಿ ಕಾರ್ಯಾರಂಭಗೊಂಡ ಪ್ರಿಮಿಯರ್ ಸ್ಟುಡಿಯೋ, ಭಾರತದ ಚಿತ್ರೋದ್ಯಮದಲ್ಲಿ ‘ಕಿಂಗ್ ಆಫ್ ಸ್ಟುಡಿಯೋಸ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಹಿಂದಿ, ಕೊಂಕಣಿ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳು ಇಲ್ಲಿ ನಿರ್ಮಾಣವಾಗಿವೆ. ಅಲ್ಲದೆ ಇಂಗ್ಲಿಷ್ ಹಾಗೂ ಇಟಾಲಿಯನ್ ಭಾಷೆಯ ಕೆಲ ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಭಾರತ ಚಿತ್ರರಂಗದ ದಿಗ್ಗಜರೆನಿಸಿ ಕೊಂಡಿದ್ದ ಶಂಕರ್ ಸಿಂಗ್, ಬಿ.ಆರ್.ಪಂತುಲು, ವೈ.ಆರ್.ಸ್ವಾಮಿ, ಆರ್.ನಾಗೇಂದ್ರರಾವ್, ಪುಟ್ಟಣ್ಣ ಕಣಗಾಲ್, ಮಣಿರತ್ನಂ, ಬಾಲಾಚಂದರ್ ಸೇರಿದಂತೆ ಹಲವಾರುಜನಪ್ರಿಯ ನಿರ್ದೆಶಕರು ಪ್ರಿಮಿಯರ್ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಿಸಿದ್ದಾರೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ದನ್, ಅಂಬರೀಷ್, ಶಿವರಾಜ್‍ಕುಮಾರ್, ರಜನಿಕಾಂತ್, ಅಮಿತಾಬಚ್ಚನ್, ಕಮಲಹಾಸನ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾ, ಎಂ.ಜಿ.ರಾಮಚಂದ್ರನ್(ಎಂಜಿಆರ್), ಶಿವಾಜಿ ಗಣೇಶನ್, ಧರ್ಮೇಂದ್ರ ಇನ್ನಿತರ ಹೆಸರಾಂತ ನಟ, ನಟಿಯರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸುಮಾರು 800ಕ್ಕೂ ಹೆಚ್ಚು ಸಿನಿಮಾ ನಿರ್ಮಾಣವಾಗಿರುವ ಪ್ರಿಮಿಯರ್ ಸ್ಟುಡಿಯೋ ಸಾಂಸ್ಕೃತಿಕ ನಗರಿ ಮೈಸೂರಿಗೆ ಚಿತ್ರೋದ್ಯಮವನ್ನು ಬೆಸೆದಿತ್ತು. ಇದರೊಂದಿಗೆ ಪ್ರವಾಸೋದ್ಯಮಕ್ಕೂ ಪರೋಕ್ಷ ಕೊಡುಗೆ ನೀಡಿತ್ತು. ನೂರಾರು ತಂತ್ರಜ್ಞರು ಹಾಗೂ ಸಹ ಕಲಾವಿದರಿಗೆ ಜೀವನಕ್ಕೆ ದಾರಿದೀಪವಾಗಿತ್ತು.

ಅಗ್ನಿ ದುರಂತ: ಬಾಲಿವುಡ್‍ನ ಸಂಜಯ್‍ಖಾನ್ ನಿರ್ಮಾಣದ `ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಟೆಲಿ ಸೀರಿಯಲ್ ಚಿತ್ರೀಕರಣ ಸಂದರ್ಭ(1989)ದಲ್ಲಿ ಪ್ರಿಮಿಯರ್ ಸ್ಟುಡಿಯೋದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ, ಕಲಾವಿದರು, ತಂತ್ರಜ್ಞರು ಸೇರಿದಂತೆ ಸುಮಾರು 52 ಮಂದಿ ಬಲಿಯಾದರು. ಸಂಜಯ್‍ಖಾನ್ ಸುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರಾದರೂ, ಈ ಘಟನೆಯಿಂದ ಅಪಾರ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದರು.

ಇತ್ತ ಸ್ಟುಡಿಯೋ ಮಾಲೀಕರಾದ ಬಸವರಾಜಯ್ಯ ಅವರೂ ನಷ್ಟಕ್ಕೆ ತುತ್ತಾದರು. ಕಾಲಕಳೆದಂತೆ ಚಿತ್ರೋದ್ಯಮದಲ್ಲಾದ ಬದಲಾವಣೆ ಪ್ರಿಮಿಯರ್ ಸ್ಟುಡಿಯೋವನ್ನು ಮತ್ತಷ್ಟು ನಷ್ಟಕ್ಕೆ ದೂಡಿತು. ಯಾವುದೇ ಆದಾಯವಿಲ್ಲದ ಕಾರಣಕ್ಕೆ 2 ದಶಕಗಳ ಹಿಂದೆಯೇ ಸ್ಟುಡಿಯೋ ಮುಚ್ಚಲಾಯಿತು.

ಮೈಸೂರಿನ ಹಿರಿಮೆಯಾಗಿದ್ದ ಸ್ಟುಡಿಯೋ ಮುಚ್ಚದಂತೆ ಸ್ಥಳೀಯರು ಪ್ರತಿಭಟಿಸಿದ್ದರಿಂದ 5 ವರ್ಷಗಳ ಕಾಲ ನಷ್ಟದಲ್ಲೇ ಸ್ಡುಡಿಯೋ ಮುಂದುವರೆಸಲಾಗಿತ್ತು. ಆದರೆ ಬೆರಳೆಣಿಕೆ ಸಿನಿಮಾಗಳು ಮಾತ್ರ ಚಿತ್ರೀಕರಣವಾಗುತ್ತಿದ್ದವು. ಸಂಸ್ಥಾಪಕ ಎಂ.ಎನ್.ಬಸವರಾಜಯ್ಯ ಅವರು ಕಾಲವಾದ ನಂತರದಲ್ಲಿ ಸ್ಟುಡಿಯೋ ನಿರ್ವಹಣೆ ಸವಾಲಾಗಿದ್ದರ ಪರಿಣಾಮ ಅವರ ಕುಟುಂಬದವರು ಬಾಗಿಲು ಮುಚ್ಚಿದ್ದರು.

20 ವರ್ಷದ ಹಿಂದೆಯೇ ಸ್ಟುಡಿಯೋ ಮುಚ್ಚಲಾಗಿತ್ತು. ಹಳೆಯದಾದ ಕಟ್ಟಡವನ್ನು ಕೆಡವಲಾಗಿದೆ. ಪ್ರಸ್ತುತ ಸ್ಟುಡಿಯೋ ಎಷ್ಟು ಅವಶ್ಯಕ? ಎಂಬ ಪ್ರಶ್ನೆ ಮೂಡುತ್ತದೆ. ಚಿತ್ರ ನಿರ್ಮಾಪಕರು ಒಳಾಂಗಣ ಚಿತ್ರೀಕರಣ ಮಾಡುತ್ತಿಲ್ಲ. ವಿದೇಶಗಳಿಗೆ ತೆರಳಿ ಹೊರಾಂಗಣ ಚಿತ್ರೀಕರಣದಲ್ಲೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲೂ ಸಿನಿಮಾ ಚಿತ್ರೀಕರಣಕ್ಕಿಂತ ಧಾರಾವಾಹಿಗಳು ಹೆಚ್ಚಾಗಿ ಚಿತ್ರೀಕರಣ ವಾಗುತ್ತಿವೆ. ಸಿನಿಮಾ ಮಂದಿರಗಳೂ ಸಂಕಷ್ಟಕ್ಕೀಡಾಗಿವೆ. ಹೀಗಿರುವಾಗ ನಿರ್ವಹಣೆ ತುಂಬಾ ಕಷ್ಟ. ಪಾಲಿಕೆಗೆ ವಾರ್ಷಿಕ 25 ಲಕ್ಷ ರೂ. ಪ್ರಾಪರ್ಟಿ ಟ್ಯಾಕ್ಸ್ ಕಟ್ಟಬೇಕಿತ್ತು. ಸ್ಟುಡಿಯೋದಿಂದ ಯಾವುದೇ ಆದಾಯವಿರಲಿಲ್ಲ. ಆರ್ಥಿಕ ಸಂಕಷ್ಟ ಎದುರಾಗಿತ್ತು. ಹಾಗಾಗಿ ಈಗಾಗಲೇ ಮುಚ್ಚಿದ್ದ ಸ್ಟುಡಿಯೋ ಕಟ್ಟಡವನ್ನು ಕೆಡವಲಾಗಿದೆ. ಕುಟುಂಬದವರು ಸೇರಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. – ನಾಗಕುಮಾರ್, ಬಸವರಾಜಯ್ಯ ಪುತ್ರ

 

Translate »