ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ
ಮೈಸೂರು

ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹರಿಂದ ಭೂ ಸ್ವಾಧೀನಕ್ಕೆ ರೈತರ ಮನವೊಲಿಕೆ ಯತ್ನ ಯಶಸ್ವಿ

September 22, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ನಾಗನಹಳ್ಳಿ ಬಳಿಯ ಸ್ಯಾಟಲೈಟ್ ರೈಲ್ವೇ ಟರ್ಮಿನಲ್ ಯೋಜನೆ ಸಾಕಾರಗೊಳ್ಳುವ ಕಾಲ ಸಮೀಪಿಸುತ್ತಿದೆ.

ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಭೂಮಿ ಬಿಟ್ಟುಕೊಡುವ ಬಗ್ಗೆ ರೈತರ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ.

ಇಂದು ನಾಗನಹಳ್ಳಿ ರೈಲು ನಿಲ್ದಾಣ ದಲ್ಲಿ ಸಭೆ ನಡೆಸಿ ಚರ್ಚಿಸಿದಾಗ, ತಮ್ಮ ಜಮೀನುಗಳಿಗೆ ಪ್ರಸಕ್ತ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿ ಗೊಬ್ಬರಿಗೆ ಅವರ ವಿದ್ಯಾರ್ಹತೆಗನುಗುಣ ವಾಗಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು ಹಾಗೂ ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯ ಒದಗಿಸಿ, ಸಮಗ್ರ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಮುಂದಿಟ್ಟು ರೈತರು ಸದರಿ ಯೋಜನೆಗೆ ಭೂಮಿ ಬಿಟ್ಟು ಕೊಡಲು ಸಮ್ಮತಿಸಿದರು. ಈ ಸಂದರ್ಭ ರೈತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಮೈಸೂರು ವಿಮಾನ ನಿಲ್ದಾಣ ದಿಂದ ಬೇರೆ ಬೇರೆ ಕಡೆಗೆ ಸಂಪರ್ಕ ಕಲ್ಪಿಸಲು ರನ್‍ವೇ ವಿಸ್ತರಣೆಗೆ ಅಗತ್ಯವಿರುವ ಭೂಮಿ ಒದಗಿಸಲು ಭೂ ಮಾಲೀಕರು ಸಮ್ಮತಿಸಿದ್ದು, ಇದೀಗ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಇದೀಗ ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಿಸಲು 400 ಎಕರೆ ಭೂಮಿ ಅಗತ್ಯವಿದೆ. ಇಲ್ಲಿ ಯೋಜನೆ ಬಂದರೆ ನಿಮ್ಮ ಗ್ರಾಮವೇ ಅಲ್ಲದೆ ಸುತ್ತಲಿನ ಪ್ರದೇಶ ಅಭಿವೃದ್ಧಿಗೊಂಡು ಉದ್ಯೋಗ ಸೃಷ್ಟಿಯಾಗ ಲಿದೆ. ನಿಮ್ಮ ಭೂಮಿಗೂ ಉತ್ತಮ ಪರಿ ಹಾರ ಸಿಗುತ್ತದಲ್ಲದೆ, ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡುತ್ತಾರೆ. ಆದ್ದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದು ಜಿ.ಟಿ. ದೇವೇಗೌಡರು ತಿಳಿಸಿದರು.

ನಾಗನಹಳ್ಳಿಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆತಂದು ದಾಖಲೆ ಗಳನ್ನಿಟ್ಟುಕೊಂಡು ಕಂದಾಯ ಅದಾಲತ್ ನಡೆಸಿ ರೈತರ ಭೂಮಿಗೆ ಸಂಬಂಧಪಟ್ಟ ಖಾತೆ-ಕಂದಾಯ ಇತ್ಯಾದಿಗಳನ್ನು ಮಾಡಿ ಕೊಟ್ಟು ಪರಿಹಾರ ಪಡೆದುಕೊಳ್ಳಲು ಸಹಾಯ ವಾಗುವಂತೆ ಅಗತ್ಯ ದಾಖಲಾತಿಗಳನ್ನು ಸ್ಥಳದಲ್ಲೇ ನೀಡುವಂತೆಯೂ ಸಚಿವರು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸೂಚನೆ ನೀಡಿದರು. ಅದಕ್ಕೂ ಮೊದಲು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲು, ರಸ್ತೆ, ವಿಮಾನ ಸಂಚಾರ ಅಭಿವೃದ್ಧಿಗೆ ಒತ್ತು ನೀಡಿದೆ. ಇದರಿಂದ ಉದ್ಯೋಗ ಸೃಷ್ಟಿ ಜೊತೆಗೆ ನಗರಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿದ್ದ ಶ್ರೀರಂಗಪಟ್ಟಣ ಬಳಿಯ ಟಿಪ್ಪು ಶಸ್ತ್ರಗಾರವನ್ನು 13 ಕೋಟಿ ರೂ. ವೆಚ್ಚದಲ್ಲಿ ಸ್ಥಳಾಂತರಿಸಿ ಯೋಜನೆ ಪೂರ್ಣಗೊಳಿಸಲಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ವಿಮಾನ ಸಂಪರ್ಕ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈ ಭಾಗದ ಶಾಸಕ ಜಿ.ಟಿ.ದೇವೇಗೌಡರ ಸಹಕಾರದಿಂದ ಈಗ ರನ್‍ವೇ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಸುಗಮವಾಗಿದೆ ಎಂದು ಅವರು ನುಡಿದರು. ಇದೀಗ ನಾಗನಹಳ್ಳಿ ಬಳಿ 400 ಎಕರೆ ಪ್ರದೇಶದಲ್ಲಿ 789 ಕೋಟಿ ರೂ. ವೆಚ್ಚದ ಸ್ಯಾಟಲೈಟ್ ರೈಲ್ವೇ ಟರ್ಮಿನಲ್ ನಿರ್ಮಿಸಲು ಸರ್ವೆ ಕಾರ್ಯ ಆರಂಭವಾಗಿದ್ದು, ಲಕ್ಷ್ಮೀಪುರದಿಂದ ಸಿದ್ದಲಿಂಗಪುರದವರೆಗೆ ನಾಗನಹಳ್ಳಿ ರೈಲು ನಿಲ್ದಾಣದ ಪಶ್ಚಿಮ ಭಾಗದ 2 ಕಿ.ಮೀ. ಉದ್ದ ಹಾಗೂ 600 ಮೀಟರ್ ಅಗಲದ ಭೂಮಿ ಅಗತ್ಯವಿದೆ ಎಂದು ಪ್ರತಾಪ್ ಸಿಂಹ ವಿವರಿಸಿದರು.

ನೀವು ನೀಡಿದ ಭೂಮಿಗೆ ಧಾರಾಳವಾಗಿ ಪರಿಹಾರ ನೀಡಿ ಎಂದು ಹೇಳಿದ್ದೇವೆ. ರೈತರ ಕುಟುಂಬದ ಒಬ್ಬರಿಗೆ ಉದ್ಯೋಗಾವಕಾಶ ಕೊಡಿಸಲು ತಾವು ರೈಲ್ವೆ ಸಚಿವ ಪಿಯೂಷ್ ಗೋಯಲ್‍ರೊಂದಿಗೆ ಮಾತನಾಡಿ ಒಪ್ಪಿಸುತ್ತೇನೆ. ಭೂಮಿ ನೀಡುವುದರಿಂದ ಇಲ್ಲಿ ಒಳ್ಳೆಯ ಯೋಜನೆ ಬಂದು ಸುತ್ತಮುತ್ತಲ ಪ್ರದೇಶವೂ ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಶೇ.82ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಅಕ್ಟೋಬರ್‌ನಲ್ಲಿ 7,000 ಕೋಟಿ ರೂ. ವೆಚ್ಚ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಇಬ್ಬರು ನಾಯಕರೂ ನಿಮಗೆ ಅನುಕೂಲವಾಗುತ್ತದೆ ಎಂದು ಹೇಳಿ ತಮ್ಮ ಬೇಡಿಕೆಗಳಿಗೂ ಪೂರಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ನೆರೆದಿದ್ದ ಭೂ ಮಾಲೀಕರು ಭೂಮಿ ಬಿಟ್ಟುಕೊಟ್ಟು ಯೋಜನೆ ಅನುಷ್ಠಾನಗೊಳಿಸಲು ಸಮ್ಮತಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪ ವಿಭಾಗಾಧಿಕಾರಿ ಶಿವೇಗೌಡ, ತಹಸೀಲ್ದಾರ್ ಟಿ.ರಮೇಶ ಬಾಬು, ಎಡಿಆರ್‍ಎಂ ಅಜಯ್ ಸಿನ್ಹಾ, ಜಿಲ್ಲಾ ಪಂಚಾಯ್ತಿ ಸದಸ್ಯ ದಿನೇಶ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಎಂ.ಜಗದೀಶಗೌಡ, ನಾಗನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ, ಸದಸ್ಯ ಧರಣಿ, ಮಾಜಿ ಅಧ್ಯಕ್ಷ ಸಿ.ಟಿ.ಮರಿಯಪ್ಪ ಸೇರಿದಂತೆ ಹಲವರು ಈ ಸಂದರ್ಭ ಹಾಜರಿದ್ದರು.

ಜಿಟಿಡಿ ವಿಜಯ ‘ಪ್ರತಾಪ’

ಮೈಸೂರು: ಕಳೆದ ವಿಧಾನಸಭಾ ಚುನಾವಣಾ ಸಮರದಲ್ಲಿ ಸೆಣಸಿ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೇ ಮಣಿಸಿದ ಜಿ.ಟಿ.ದೇವೇಗೌಡರ ಸಾಮಥ್ರ್ಯದ ಬಗ್ಗೆ ಸಂಸದ ಪ್ರತಾಪ್ ಸಿಂಹ ಕೊಂಡಾಡಿದ್ದಾರೆ.

ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ಯೋಜನೆಗೆ ಭೂ ಸ್ವಾಧೀನ ಸಂಬಂಧ ರೈತರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರತಾಪ್ ಸಿಂಹ ಅವರು, ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಟಿ.ದೇವೇಗೌಡರ ಚತುರತೆ, ಜನ ಮನ್ನಣೆ ಮತ್ತು ಸಾಮಥ್ರ್ಯವನ್ನು ಕೊಂಡಾಡಿದರು.

ನಮ್ಮ ನಿಮ್ಮೆಲ್ಲರ ಪ್ರೀತಿಯ ನಾಯಕರು, ಉನ್ನತ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕ ರಾದ ಜಿ.ಟಿ. ದೇವೇಗೌಡರು ಇತ್ತೀಚೆಗೆ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಉತ್ತರ ಕರ್ನಾಟಕದಲ್ಲಿ ಒಂದು ಮಾತ್ ಹೇಳ್ತಾರೆ, “ಹೊಡೆಯೋದೊಡುದ್ರೆ ಹುಲಿ ಹೊಡೀಬೇಕು, ಕತ್ತಿ ಹೊಡಿಬಾರ್ದು”. ಕಳೆದ ಚುನಾವಣೆಯಲ್ಲಿ ರಾಜಕೀಯವಾಗಿ ಪ್ರಬಲರೂ, ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನೇ ಮಣಿಸುವ ಮೂಲಕ ತಮ್ಮ ಸಾಮಥ್ರ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಹೇಳುವ ಮೂಲಕ ನೆರೆದಿದ್ದ ಸಭಿಕರನ್ನು ನಗೆಗಡಲಲ್ಲಿ ಮುಳುಗುವಂತೆ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿ ಮೂಲಕ ವಿಶೇಷ ರೀತಿ ಜನ ಮನ್ನಣೆ ಗಳಿಸಿರುವ ಜಿ.ಟಿ.ದೇವೇಗೌಡರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಇದೆ ಎಂದು ಪ್ರತಾಪ್ ಸಿಂಹ ನುಡಿದರು.

Translate »