ಆಪರೇಷನ್ ಕಮಲ ಪ್ರತಿಯಾಗಿ ಆಪರೇಷನ್ ಕಾಂಗ್ರೆಸ್-ಜೆಡಿಎಸ್
ಮೈಸೂರು

ಆಪರೇಷನ್ ಕಮಲ ಪ್ರತಿಯಾಗಿ ಆಪರೇಷನ್ ಕಾಂಗ್ರೆಸ್-ಜೆಡಿಎಸ್

September 22, 2018

ಬೆಂಗಳೂರು:  ಆಪರೇ ಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಉರುಳಿಸಲು ಹೊರಟಿರುವ ಬಿಜೆಪಿಗೆ ಪಾಠ ಕಲಿಸಲು ಅಗತ್ಯ ಕಂಡು ಬಂದರೆ ಆಪರೇಷನ್ ಕಾಂಗ್ರೆಸ್-ಜೆಡಿಎಸ್ ಮೂಲಕ ಆ ಪಕ್ಷದ ಶಾಸಕರನ್ನು ಸೆಳೆಯಲು ಉಭಯ ಪಕ್ಷಗಳ ನಾಯಕರು ಇಂದಿಲ್ಲಿ ತೀರ್ಮಾನಿಸಿದ್ದಾರೆ.

ದಿನದಿಂದ ದಿನಕ್ಕೆ ಸರ್ಕಾರ ಉರುಳಿಸಲು ಸಂಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಕಾಂಗ್ರೆಸ್ ವರಿಷ್ಠರೇ ಮಧ್ಯಪ್ರವೇಶಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಲಹೆ ಮೇರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ತಮ್ಮ ಪಕ್ಷದ ಮುಖಂಡರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು.

ಮುಖ್ಯಮಂತ್ರಿಯವರೂ ತಮ್ಮ ಶೃಂಗೇರಿ ಪ್ರವಾಸವನ್ನು ನಾಳೆಗೆ ಮುಂದೂಡಿ, ಸಿದ್ದರಾಮಯ್ಯ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದಲ್ಲದೆ, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಕಾರ್ಯಗತ ಮಾಡಲು ತಾವು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿರತರಾದರು. ಸಂಪುಟ ವಿಸ್ತರಣೆ ಸೇರಿ ದಂತೆ ಯಾವುದೇ ರಾಜಕೀಯ ನೇಮಕಾತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಜೇನುಗೂಡಿಗೆ ಕಲ್ಲು ಹಾಕುವುದು ಬೇಡ. ವಿಧಾನಸಭೆ ಯಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಅಷ್ಟೇ ಅಲ್ಲ ನಾಮಕರಣ ಸದಸ್ಯರ ಬಗ್ಗೆಯೂ ಪ್ರಸ್ತಾಪ ಬೇಡ. ಯಡಿಯೂರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಗುಂಪು ದಾಳಿ ನಡೆಸಿದರ ಬಗ್ಗೆಯೂ ಅಪಸ್ವರ ಕೇಳಿ ಬಂದಿದ್ದಲ್ಲದೆ, ಇನ್ನು ಮುಂದೆ ಅಂತಹ ಕೆಲಸ ಮಾಡಬಾರದು ಎಂದು ಆ ಕಾರ್ಯಕರ್ತರಿಗೆ ಸೂಚಿಸುವುದು.

ಮುಖ್ಯಮಂತ್ರಿಯವರು ಕೂಡ ತಮ್ಮ ಹುದ್ದೆಗೆ ತಕ್ಕಂತೆ ಸೌಮ್ಯವಾಗಿ ವರ್ತಿಸಬೇಕು ಮತ್ತು ಹೇಳಿಕೆ ನೀಡಬೇಕು. ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಬಿಜೆಪಿಯವರು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಅದಕ್ಕೆ ನಾವು ಪ್ರಚೋದನೆಗೆ ಒಳಗಾಗುವುದು ಬೇಡ. ಸೌಮ್ಯತೆಯಿಂದಲೇ ಉತ್ತರಿಸೋಣ. ನಮ್ಮನ್ನು ಕೆಣಕಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನವೂ ಆಗಬಹುದು ಎಂದು ಸಿದ್ದರಾಮಯ್ಯ, ಮುಖ್ಯಮಂತ್ರಿ ಮತ್ತು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಒಂದೆಡೆ ಕಾಂಗ್ರೆಸ್, ಜೆಡಿಎಸ್ ಆಪರೇಷನ್ ಮಾಡುವುದರ ಜೊತೆಗೆ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ. ಇದು ಸಂವಿಧಾನಬಾಹಿರ. ನೀವು ನಮ್ಮ ಸದಸ್ಯರಿಗೆ ರಕ್ಷಣೆ ನೀಡಬೇಕೆಂದು ಜೆಡಿಎಸ್‍ನಿಂದ ಪತ್ರ ಬರೆಸಲು ಸಭೆ ತೀರ್ಮಾನಿಸಿದೆ. ಸಂವಿಧಾನಬದ್ಧ ಸರ್ಕಾರವೊಂದನ್ನು ಉರುಳಿಸಲು ಬಿಜೆಪಿ, ಶಾಸಕರ ಖರೀದಿಗೆ ಮುಂದಾಗಿದೆ. ಇದಕ್ಕೆ ಕೆಲವು ಭೂಗತ ದೊರೆಗಳು ಕೈಜೋಡಿಸಿದ್ದಾರೆ ಎಂದು ಕೆಲವು ದಾಖಲೆಗಳನ್ನು ನೀಡಲಿದೆ.

ಒಂದು ವೇಳೆ ನಮ್ಮ ಪತ್ರಕ್ಕೆ ಸಾಕ್ಷಿ ಬೇಕೆಂದರೆ ಅದಕ್ಕೆ ಪೂರಕವಾಗುವ ಎಲ್ಲಾ ದಾಖಲೆಗಳನ್ನು ನೀಡುವುದಾಗಿಯೂ ಸಭಾಧ್ಯಕ್ಷರಿಗೆ ತಿಳಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಉಭಯ ಪಕ್ಷಗಳ ಶಾಸಕರನ್ನು ಸೆಳೆಯಲು ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಭೆಯ ಗಮನಕ್ಕೆ ತಂದಿದ್ದಾರೆ.

ಆಮಿಷಕ್ಕೆ ಒಳಗಾಗಿರುವ ಕೆಲವು ಶಾಸಕರ ಮಾಹಿತಿ ಅಲ್ಲದೆ ಇನ್ನೂ ಕೆಲವು ಶಾಸಕರನ್ನು ಯಡಿಯೂರಪ್ಪ ಸಂಪರ್ಕಿಸಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿಯವರೇ ಸಭೆ ಮುಂದಿಟ್ಟಿದ್ದಾರೆ. ಕೆಲವರು ಈಗಾಗಲೇ ಮುಂಗಡ ಪಡೆದಿದ್ದಾರೆ. ಮತ್ತೆ ಕೆಲವರು ಮುಂಗಡಕ್ಕೆ ಕೈ ಚಾಚಬಹುದು. ನಾನು ಆದಷ್ಟು ಇವರನ್ನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ನಮ್ಮ ಪಕ್ಷದಿಂದ ಇಬ್ಬರು ಸದಸ್ಯರನ್ನು ಬಿಜೆಪಿ ಗಂಭೀರವಾಗಿ ಸೆಳೆಯಲು ಪ್ರಯತ್ನಿಸಿದೆ. ಅದರಲ್ಲಿ ಒಬ್ಬರು ಚಿಕ್ಕಬಳ್ಳಾಪುರ ಮತ್ತು ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ. ನಿಮ್ಮಲ್ಲೇ ಹೆಚ್ಚಿನ ಸದಸ್ಯರು ಯಡಿಯೂರಪ್ಪನವರ ಜೊತೆ ಸಂಪರ್ಕದಲ್ಲಿದ್ದಾರೆ. ಅವರನ್ನು ಹಿಡಿದಿಡುವ ಕೆಲಸ ನಿಮ್ಮದು. ಸರ್ಕಾರ ಮಟ್ಟದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಆದರೆ ಮೈತ್ರಿ ಸರ್ಕಾರವಾಗಿರುವುದರಿಂದ ನನಗೂ ಇತಿಮಿತಿಗಳಿವೆ. ನನಗೆ ದೊರೆತಿರುವ ಎಲ್ಲಾ ಮಾಹಿತಿಯನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದು ಮುಖ್ಯಮಂತ್ರಿಯವರು ಹೇಳುತ್ತಿದ್ದಂತೆ ಸಿದ್ದರಾಮಯ್ಯ ನಮ್ಮಲ್ಲಿ ಅತೃಪ್ತರನ್ನು ಕರೆಸಿ ಈಗಿನಿಂದಲೇ ಮಾತನಾಡೋಣ.

ನೀವು ಹೇಳಿದಂತೆ ದೊಡ್ಡ ಪ್ರಮಾಣದಲ್ಲಿ ಏನೂ ಆಗಿಲ್ಲ ಎಂದ ಅವರು, ಕೆಲವು ಹೆಸರುಗಳನ್ನು ಪ್ರಸ್ತಾಪಿಸಿ, ಅವರನ್ನು ನಾನು ರೆಡಿ ಮಾಡುತ್ತೇನೆ. ನಿಮ್ಮವರನ್ನು ಹಿಡಿದಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ದೊಡ್ಡ ಸಂಖ್ಯೆ ಮುಟ್ಟಲು ಅವರಿಂದ ಸಾಧ್ಯವಿಲ್ಲ. ಆದರೂ ಪರಿಸ್ಥಿತಿ ಎದುರಿಸಲು ನಾವೂ ಸಿದ್ಧರಾಗೋಣ. ನಾವೇ ಮೊದಲು ಆಪರೇಷನ್ ಮಾಡಿದರೆ, ಕುದುರೆ ವ್ಯಾಪಾರ ಎಂದು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬಹುದು. ಇದನ್ನು ವರಿಷ್ಠರು ನನ್ನ ಗಮನಕ್ಕೆ ತಂದಿದ್ದಾರೆ.

ನಾವು ಸಿದ್ದತೆ ಮಾಡೋಣ. ಆದರೆ ಮೊದಲ ಕಾರ್ಯಾಚರಣೆ ನಮ್ಮಿಂದ ಆಗಬಾರದು ಎಂದು ಸಿದ್ದರಾಮಯ್ಯ ಮತ್ತು ಡಾ. ಪರಮೇಶ್ವರ್, ಮುಖ್ಯಮಂತ್ರಿ ಯವರು ಹಾಗೂ ಡಿ.ಕೆ. ಶಿವಕುಮಾರ್‍ಗೆ ಕಿವಿಮಾತು ಹೇಳಿದ್ದಾರೆ.

ಸರ್ಕಾರವನ್ನು ಭದ್ರವಾಗಿಟ್ಟುಕೊಳ್ಳಲು ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಲು ಆಗಿಂದಾಗ್ಗೆ ಸಭೆ ಸೇರೋಣ. ಬಿಜೆಪಿಯವರಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಅವರ ಪ್ರಚೋದನೆಗೆ ನಾವು ಒಳಗಾಗುವುದು ಬೇಡ. ಸಾರ್ವಜನಿಕವಾಗಿ ಯಾವುದೇ ಹೇಳಿಕೆ ಬೇಡ. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗೋಣ ಎಂಬ ತೀರ್ಮಾನಕ್ಕೆ ಸಭೆ ಬಂದಿದೆ. ನಮ್ಮ ಕುಟುಂಬದ ವಿರುದ್ಧ ಯಡಿಯೂರಪ್ಪನವರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯಕ್ಕೆ ಆಸ್ಪದ ಮಾಡಿಕೊಡುತ್ತಿದೆ. ಅವರು ಅಷ್ಟು ಕಟುವಾಗಿ ಹೇಳಿಕೆ ನೀಡುವಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ಕಳೆದ ಮೂರು ತಿಂಗಳಿಂದ ಅವರು ಮಾಡಿರುವ ಎಲ್ಲಾ ಆರೋಪಗಳನ್ನು ಸಹಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಸಭೆ ಗಮನಕ್ಕೆ ತಂದಿದ್ದಾರೆ. ಅವರೇ ದೊಡ್ಡ ಭ್ರಷ್ಟ. ಗಾಜಿನ ಮನೆಯಲ್ಲಿ ಕುಳಿತು ಅಧಿಕಾರಕ್ಕಾಗಿ ನಮ್ಮ ಮೇಲೆ ಕಲ್ಲು ಹೊಡೆದರೆ, ಅದರ ಪರಿಸ್ಥಿತಿ ಏನೆಂದು ಅವರ ಅರಿವಿಗೆ ಬಂದಿಲ್ಲ.

ನಿಮ್ಮ ಪಕ್ಷದಿಂದ ಹೋಗಿರುವವರು ಮತ್ತು ಕೆಲವು ಗೂಂಡಾಗಳು ಅವರ ಮನಸ್ಥಿತಿಯನ್ನು ಕೆಡಿಸಿ, ನನ್ನ ಮತ್ತು ಶಿವಕುಮಾರ್ ವಿರುದ್ಧ ಕೇಂದ್ರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂಬ ಮಾಹಿತಿ ನೀಡಿದರು. ಯಡಿಯೂರಪ್ಪ ನವರು ಅವರ ಮಾತಿಗೆ ಮಣಿದು ಕೇಂದ್ರದ ಮೇಲೆ ಒತ್ತಡ ತಂದು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುವ ಕೆಲಸವೂ ನಡೆದಿದೆ ಎಂದು ವಿವರಿಸಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ತುರ್ತುಸಭೆಯಲ್ಲಿ ಮುಖ್ಯಮಂತ್ರಿ ಅವರಲ್ಲದೆ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಸಿದ್ದರಾಮಯ್ಯ ನಿನ್ನೆ ರಾತ್ರಿ ಕೂಡ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಜೊತೆ ಕಾವೇರಿ ನಿವಾಸದಲ್ಲೇ ಸಮಾಲೋಚನೆ ನಡೆಸಿದ್ದರು.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಎಚ್ಚರಿಕೆಯಿಂದಿರಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಉಳಿವು ನಮಗೆ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ವೈಯಕ್ತಿಕ ಕಾರಣಗಳು ಸರ್ಕಾರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ನಿನ್ನೆ ತಡರಾತ್ರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಸಭೆ ನಡೆಸಿದ ಅವರು, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪಿಎಲ್‍ಡಿ ಬ್ಯಾಂಕ್ ಚುನಾವಣೆಯಿಂದ ಹೊತ್ತಿಕೊಂಡ ಕಿಡಿ ಇಂದು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲವಾಗಿ ನಿಂತಿದ್ದರಿಂದ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಘರ್ಷಕ್ಕೆ ಕಾರಣವಾಯಿತು ಎಂಬ ಅಭಿಪ್ರಾಯಗಳಿವೆ. ಇದನ್ನು ನೆಪವಾಗಿಟ್ಟುಕೊಂಡು ಜಾರಕಿಹೊಳಿ ಸಹೋದರರು ಸರ್ಕಾರವನ್ನು ಅಸ್ಥಿರಗೊಳಿಸುವ ಮಟ್ಟಕ್ಕೂ ರಾಜಕಾರಣ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಹಲವಾರು ಬೆಳವಣಿಗೆಗಳು ನಡೆದಿವೆ. ಹಾಗಾಗಿ ಯಾರು, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಎಚ್ಚರಿಕೆಯ ಹೆಜ್ಜೆ ಇಡೋಣ. ನಿಮಗೆ ರಾಮನಗರ ಮತ್ತು ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಇದೆ. ಈ ಎರಡೂ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಕೊಡಿ. ಖಾತೆಯನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಿ. ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಈಗಷ್ಟೇ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದೇನೆ. ನನಗೂ ಸದ್ಯದ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ನಾನು ನನ್ನ ಪಾಡಿಗೆ ಇದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

Translate »