ದಸರಾ ಗಜಪಡೆ ತಾಲೀಮು
ಮೈಸೂರು

ದಸರಾ ಗಜಪಡೆ ತಾಲೀಮು

September 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದು, ಅರಮನೆಯ ಅಂಗಳದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆ ಶುಕ್ರವಾರದಿಂದ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ಆರಂಭಿಸಿದೆ.

ವಿವಿಧ ಆನೆ ಶಿಬಿರಗಳಿಂದ ಮೊದಲ ತಂಡದಲ್ಲಿ ಸೆ.2ರಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳು ಸೆ.5ರಂದು ಅರ ಮನೆ ಅಂಗಳ ಪ್ರವೇಶಿಸಿದ್ದವು. ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ನಡೆಸಿ, ತರಬೇತಿ ನೀಡುವ ಅಗತ್ಯವಿರುವುದರಿಂದ ಇಂದು ಬೆಳಿಗ್ಗೆ ತಾಲೀಮು ನಡೆಸಲಾಯಿತು. ಬೆಳಿಗ್ಗೆ 7.15ಕ್ಕೆ ಅರ್ಜುನನ ನೇತೃತ್ವದಲ್ಲಿ ಅರಮನೆಯ ಬಲರಾಮ ದ್ವಾರದಿಂದ ಹೊರ ಬಂದ ಆರು ಆನೆಗಳು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಹಳೆ ಆರ್‍ಎಂಸಿ ವೃತ್ತ, ಹೈವೇ ವೃತ್ತದ ಮೂಲಕ 1.15 ಗಂಟೆಯಲ್ಲಿ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಿದವು.

ಇಂದು ತಾಲೀಮಿನ ಮೊದಲ ದಿನವಾದ ಹಿನ್ನೆಲೆಯಲ್ಲಿ ಅರ್ಜುನ ಸೇರಿದಂತೆ ಯಾವುದೇ ಆನೆಗೆ ಭಾರವನ್ನು ಹೊರಿಸಿರಲಿಲ್ಲ. ಇನ್ನು ಎರಡು ದಿನ ಬರೀ ಆನೆಗಳಿಗೆ ದಿನಕ್ಕೆ ಎರಡು ಬಾರಿ ತಾಲೀಮು ನಡೆಸಲಾಗುತ್ತದೆ. ನಂತರ ಅಂಬಾರಿ ಆನೆ ಅರ್ಜುನನಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಹಂತ ಹಂತ ವಾಗಿ ಭಾರವನ್ನು ಹೆಚ್ಚಿಸಿ ಅಂತಿಮವಾಗಿ ಮರದ ಅಂಬಾರಿಯೊಂದಿಗೆ 750 ಕೆಜಿ ತೂಕದ ಮರಳಿನ ಮೂಟೆ ಹೊರಿಸಿ ತರಬೇತಿ ನೀಡಲಾಗುತ್ತದೆ.

ನಮಿಸಿದರು: ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಅರ್ಜುನನ ನೇತೃತ್ವದಲ್ಲಿ ಚೈತ್ರ, ಗೋಪಿ, ವರಲಕ್ಷ್ಮೀ, ವಿಕ್ರಮ ಜೊತೆಗೆ ಇದೇ ಮೊದಲ ಬಾರಿಗೆ ಧನಂಜಯ ಹೆಜ್ಜೆ ಹಾಕಿ ಗಮನ ಸೆಳೆದವು. ಕೆ.ಆರ್.ವೃತ್ತದ ಬಳಿ ಸಯ್ಯಾಜಿ ರಾವ್ ರಸ್ತೆಗೆ ತಿರುವು ಪಡೆಯುತ್ತಿದ್ದಂತೆ ರಸ್ತೆ ಬದಿಯಲ್ಲಿ ಹೂವು, ಹಣ್ಣು ವ್ಯಾಪಾರ ಮಾಡು ತ್ತಿದ್ದ ವ್ಯಾಪಾರಿಗಳು ಎಲ್ಲಾ ಆನೆಗಳಿಗೂ ಹೂವು, ಹಣ್ಣು, ಕಬ್ಬು, ಬೆಲ್ಲ ನೀಡುವ ಮೂಲಕ ಕೈ ಮುಗಿದು ನಮಿಸಿದರು. ದಾರಿಯುದ್ದಕ್ಕೂ ವಾಹನ ಸವಾರರು ಒಳಗೊಂಡಂತೆ ಬಹುತೇಕರು ಮೊಬೈಲ್‍ಗಳಲ್ಲಿ ದಸರಾ ಆನೆಗಳ ಫೋಟೋ ಕ್ಲಿಕ್ಕಿಸಿದರು.

ಎರಡು ಕಡೆ ವಿಶ್ರಾಂತಿ: ಅರಮನೆ ಆವರಣದಿಂದ ಹೊರಬಂದ ಆನೆಗಳು ಹಳೆ ಆರ್‍ಎಂಸಿ ವೃತ್ತದ ಬಳಿ ಬಂದಾಗ 5 ನಿಮಿಷ ವಿಶ್ರಾಂತಿ ಪಡೆದವು. ಈ ವೇಳೆ ಮಾವುತರು ಮತ್ತು ಕಾವಾಡಿಗಳು ಸಹ ಚಹ ಸೇವಿಸಿ ವಿರಮಿಸಿದರು. ಇದೇ ವೇಳೆ ಆನೆಗಳಿಗೆ ಕಬ್ಬು ಹಾಗೂ ಕುಸುರೆಯನ್ನು ತಿನ್ನಿಸಲಾಯಿತು. ನಂತರ ತಾಲೀಮು ಮುಂದುವರೆಸಿದ ಆನೆಗಳು ಹೈವೇ ವೃತ್ತಕ್ಕೆ ಬಂದಾಗ ಮತ್ತೊಮ್ಮೆ ವಿಶ್ರಾಂತಿ ನೀಡಲಾಯಿತು. ಬಳಿಕ ಪಂಚಿನ ಕವಾಯತು ಮೈದಾನಕ್ಕೆ ಕರೆತರಲಾಯಿತು. ಮೈದಾನದಲ್ಲಿ ಮಾವುತರು ಮತ್ತು ಕಾವಾಡಿಗಳಿಗೆ ಉಪಹಾರ ನೀಡಲಾಯಿತು. ಅದೇ ಮಾರ್ಗದಲ್ಲಿ ಮತ್ತೆ ಆನೆಗಳನ್ನು ಅರಮನೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಆರ್‍ಎಫ್‍ಓ ಅನನ್ಯಕುಮಾರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ಸಹಾಯಕ ರಂಗರಾಜು, ಗಾರ್ಡ್ ಕುಮಾರ್, ಸಿಬ್ಬಂದಿ ಅಕ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ದಾರಿಯುದ್ದಕ್ಕೂ ಆನೆಗಳಿಗೆ ಪೊಲೀಸ್ ಭದ್ರತೆ ಒದಗಿಸಿ ವಾಹನಗಳು ಆನೆಗಳ ಸಮೀಪಕ್ಕೆ ಬರದಂತೆ ಕ್ರಮ ಕೈಗೊಳ್ಳಲಾಗಿತ್ತು.

Translate »