ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ
ಮೈಸೂರು

ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ

September 8, 2018

ಮೈಸೂರು: ಸಂಚಾರ ದಟ್ಟಣೆ ತಪ್ಪಿಸಲೆಂದು ಮೈಸೂರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್‍ನಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಫ್ಲೈ ಓವರ್ ಕಾಮಗಾರಿ ದಸರೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮೈಸೂರು-ಕೊಡಗು-ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹಿನಕಲ್ ಬಳಿಯ ಹೊರ ವರ್ತುಲ ರಸ್ತೆ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ಗ್ರೇಡ್ ಸೆಪರೇಟರ್ (ಮೇಲ್ಸೇತುವೆ) ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.60, ರಾಜ್ಯ ಸರ್ಕಾರದ ಶೇ.20 ಹಾಗೂ ಮುಡಾ ಶೇ.20ರಷ್ಟು ಅನುದಾನದೊಂದಿಗೆ 15.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನ ಗೊಳಿಸಲು ಮುಡಾದಿಂದ ಕಾಮಗಾರಿಯನ್ನು 2016ರ ಏಪ್ರಿಲ್ 27ರಂದು ಆರಂಭಿಸಲಾಗಿತ್ತು. ಬೆಂಗಳೂರು ಮೂಲದ ಪಿಜೆಬಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯು ಕಾಮಗಾರಿ ನಡೆಸುತ್ತಿದ್ದು, ವ್ಯಾಕ್ಸ್ ಕನ್ಸಲ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆನ್ಸಿಯು ಯೋಜ ನೆಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಮುಡಾ ನರ್ಮ್ (ಉತ್ತರ) ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಎನ್.ಸತೀಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಫ್ಲೈ ಓವರ್ ಕಾಮಗಾರಿ ರಾತ್ರಿ-ಹಗಲು ಭರದಿಂದ ನಡೆಯುತ್ತಿದ್ದು, ದಸರೆಯೊಳಗಾಗಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಉದ್ದೇಶವಿದೆ ಎಂದ ಅವರು, ನೀರು ಸರಬರಾಜು, ವಿದ್ಯುತ್ ಸಂಪರ್ಕದ ಮಾರ್ಗಗಳನ್ನುಸ್ಥಳಾಂತರಿಸುವ ಕೆಲಸದಿಂದಾಗಿ ಆರಂಭದಲ್ಲಿ ಸುಮಾರು 8 ತಿಂಗಳು ವಿಳಂಬವಾಯಿತು ಎಂದರು. ರ‍್ಯಾಂಪ್ ಸೇರಿ 510 ಮೀಟರ್ ಉದ್ದ, 17.20 ಮೀ. ಅಗಲ, 7.50 ಮೀ. ಮೇನ್ ಕ್ಯಾರಿಯೇಜ್ ವೇ, ಎರಡೂ ಬದಿ 6 ಮೀ. ಅಗಲದ ಸೇವಾ ರಸ್ತೆ, ಎರಡೂ ಬದಿ 2 ಮೀ. ಅಗಲದ ಪಾದಚಾರಿ ರಸ್ತೆ, 1.20 ಮೀ. ವಿಭಜಕ, 4 ಲೇನ್ ಫ್ಲೈ ಓವರ್‍ನೊಂದಿಗೆ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಮೈಸೂರಿನ ಪ್ರಥಮ ಯೋಜನೆಯಾಗಿದೆ ಎಂದು ಸತೀಶ್ ತಿಳಿಸಿದರು.

ಒಂದು ವೇಳೆ ಫ್ಲೈ ಓವರ್‍ನಲ್ಲಿ ಸಂಚಾರ ಮುಕ್ತಗೊಂಡಲ್ಲಿ ಮೈಸೂರು-ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗೆ ಹೋಗುವ ಮತ್ತು ಬರುವ ವಾಹನಗಳು ಹಿನಕಲ್ ಜಂಕ್ಷನ್‍ನಲ್ಲಿ ಸಿಗ್ನಲ್‍ಗಾಗಿ ಕಾಯುವ ಅಗತ್ಯವಿಲ್ಲ. ರಿಂಗ್ ರಸ್ತೆ ಮತ್ತು ಹುಣಸೂರು ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಳ್ಳಲಿದೆ.

ಈ ಹಿಂದೆ 4 ಪ್ರಮುಖ ಜಂಕ್ಷನ್‍ಗಳಲ್ಲಿ ಗ್ರೇಡ್ ಸೆಪರೇಟರ್‍ಗಳನ್ನು ನಿರ್ಮಿಸಲು ಮುಡಾ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಕೆಆರ್‌ಎಸ್‌ ರಸ್ತೆಯ ರಾಯಲ್ ಇನ್‍ಜಂಕ್ಷನ್, ಬೆಂಗಳೂರು-ಮೈಸೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಹಾಗೂ ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಾಲೇಜು ಜಂಕ್ಷನ್‍ಗಳ ಯೋಜನೆಯನ್ನು ಕೈಬಿಡಲಾಗಿದೆ.

Translate »