ರೈತರು, ಕೃಷಿ ಕಾರ್ಮಿಕರಿಗೂ ಮೊಬೈಲ್ ಬ್ಯಾಂಕಿಂಗ್ ವಿಸ್ತರಣೆ
ಮೈಸೂರು

ರೈತರು, ಕೃಷಿ ಕಾರ್ಮಿಕರಿಗೂ ಮೊಬೈಲ್ ಬ್ಯಾಂಕಿಂಗ್ ವಿಸ್ತರಣೆ

September 8, 2018

ಬೆಂಗಳೂರು: ಸಣ್ಣ ವ್ಯಾಪಾರಿಗಳಿಗಷ್ಟೇ ಅಲ್ಲದೆ, ಮೊಬೈಲ್ ಬ್ಯಾಂಕಿಂಗ್ ಸೇವೆ ಯನ್ನು ರೈತರು ಹಾಗೂ ಕೃಷಿ ಕಾರ್ಮಿಕರಿಗೂ ನೀಡಲು ಸರ್ಕಾರ ಮುಂದಾಗಿದೆ.

ಗಣೇಶ ಚತುರ್ಥಿಗೆ ರಾಜ್ಯದ ಜನತೆಗೆ ಈ ಉಡುಗೊರೆ ದೊರೆಯಲಿದ್ದು, ಮೊದಲ ಹಂತದಲ್ಲಿ 150 ಕೇಂದ್ರಗಳಲ್ಲಿ ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕೃಷಿ ಕಾರ್ಮಿಕರು ಇದರ ಸೇವೆ ಪಡೆದುಕೊಳ್ಳಬಹುದು. ಇದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 50 ಕೋಟಿ ರೂ. ಮೀಸಲಿರಿಸಿದ್ದು, ಪ್ರಾರಂಭದಲ್ಲಿ 1000 ದಿಂದ 5000 ರೂ. ವರೆಗೆ ಸಣ್ಣ ಪ್ರಮಾಣದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಖಾಸಗಿ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ‘ಬಡವರ ಬಂಧು’ ಹೆಸರಿನಲ್ಲಿ ಅನುಷ್ಟಾನಗೊಳ್ಳಲಿದೆ. ತಮ್ಮ ಆಧಾರ್ ಕಾರ್ಡ್‍ನ್ನು ಮೊಬೈಲ್ ಬ್ಯಾಂಕ್‍ನಲ್ಲಿ ಒತ್ತೆ ಇಟ್ಟು ಸಣ್ಣ ಪ್ರಮಾಣದ ಬಡ್ಡಿಗೆ ಸಾಲ ಪಡೆಯಬಹುದು.

ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಸಾಲ ವಾಪಸಾತಿ ನಿಯಮದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ನಿಯಮಾವಳಿ ಗಳು ಸೆಪ್ಟೆಂಬರ್ 15ರಂದು ಪ್ರಕಟವಾಗಲಿದೆ. ಮೀಟರ್ ಬಡ್ಡಿಗೆ ಕಡಿವಾಣ ಹಾಕುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ, ಎಲ್ಲ ವರ್ಗದ ಸಣ್ಣ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಗ್ರಾಮೀಣ ಭಾಗದಲ್ಲಿ ರೈತರು ಕೆಲವೊಮ್ಮೆ ತಮ್ಮ ದೈನಂದಿನ ಬದುಕಿಗಾಗಿ ಗಿರವಿ ಅಂಗಡಿಗಳಲ್ಲಿ ಆಭರಣ ಅಡವಿಟ್ಟು ದುಬಾರಿ ಬಡ್ಡಿ ತೆತ್ತು, ಅಲ್ಪ ಪ್ರಮಾಣದ ಹಣ ಪಡೆಯುತ್ತಾರೆ. ಗ್ರಾಮೀಣ ಭಾಗದಲ್ಲಿ ಲೇವಾದೇವಿಗಾರರು ರೈತರ ಕಷ್ಟಗಳನ್ನೇ ಆಧಾರವಾಗಿಟ್ಟುಕೊಂಡು ರಕ್ತ ಹೀರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಕೇವಲ ನಗರ ಮಾರುಕಟ್ಟೆ, ಸಂತೆ ಪೇಟೆಗಳಷ್ಟೇ ಅಲ್ಲದೆ, ಹೋಬಳಿ ಮಟ್ಟದಲ್ಲಿ ಈ ಬ್ಯಾಂಕಿಂಗ್ ಸೇವೆ ತರಲು ಸರ್ಕಾರ ಹೊರಟಿದೆ.

Translate »