ಬೀದಿ ಬದಿ ವ್ಯಾಪಾರಿಗಳಿಗೆ  ಮೊಬೈಲ್ ಬ್ಯಾಂಕಿಂಗ್
ಮೈಸೂರು

ಬೀದಿ ಬದಿ ವ್ಯಾಪಾರಿಗಳಿಗೆ  ಮೊಬೈಲ್ ಬ್ಯಾಂಕಿಂಗ್

August 26, 2018

ಬೆಂಗಳೂರು: ಮೀಟರ್ ಬಡ್ಡಿಗೆ ಕಡಿವಾಣ ಹಾಕಿರುವ ಬೆನ್ನಲ್ಲೇ ದೈನಂದಿನ ಬದುಕಿಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಅನು ಕೂಲ ಮಾಡಿ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊಬೈಲ್ ಬ್ಯಾಂಕಿಂಗ್ ಆರಂಭಿಸುತ್ತಿದೆ.

ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಮಾದರಿಯಲ್ಲೇ ಅತೀ ಭದ್ರತೆಯಿಂದ ಕೂಡಿದ ವಾಹನಗಳ ಮೂಲಕ ದಿನನಿತ್ಯ ನಿಗದಿತ ಸ್ಥಳಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕ ಋಣಮುಕ್ತ ಅಧಿನಿಯಮ 2018 ಅನ್ನು ಜಾರಿಗೆ ತರುವುದರಿಂದ ವಾರ್ಷಿಕ 1,20,000 ರೂ. ಆದಾಯಕ್ಕಿಂತ ಕಡಿಮೆ ಇರುವ ರೈತ, ಕೃಷಿ ಕಾರ್ಮಿಕ ಮತ್ತು ಸಮಾಜದ ಕೆಳಸ್ತರದ ಆಸಕ್ತ ವ್ಯಕ್ತಿಗಳು ಖಾಸಗಿ ಲೇವಾದೇವಿದಾರರಿಂದ ಇನ್ನು ಮುಂದೆ ಮೀಟರ್ ಬಡ್ಡಿ ಮೇಲೆ ಸಾಲ ಪಡೆಯುವಂತಿಲ್ಲ. ಕಾಯಿದೆ ಅನುಷ್ಠಾನ ನಂತರ ಈ ಕೆಳಸ್ತರ ವ್ಯಕ್ತಿಗಳ ಸಾಲ ಮನ್ನಾ ಆಗಲಿದೆ, ಆದರೆ ಇವರುಗಳ ದೈನಂದಿನ ಜೀವನ ನಿರ್ವಹಣೆಗೆ ಮೀಟರ್ ಬಡ್ಡಿ ವಿಧಿಸುವವರ ಮನೆ ಮುಂದೆ ನಿಲ್ಲಬಾರದೆಂಬ ಉದ್ದೇಶದಿಂದ ಮೊಬೈಲ್ ಬ್ಯಾಂಕಿಂಗ್ ಆರಂಭಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ವರ್ಗದ ದೈನಂದಿನ ವಹಿವಾಟಿಗೆ ಆರ್ಥಿಕ ಸಹಾಯ ಮಾಡಲು ನಗರ ಪ್ರದೇಶಗಳಲ್ಲಿನ ಮಾರುಕಟ್ಟೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಂತೆಪೇಟೆ ಸ್ಥಳಗಳಲ್ಲಿ ಮೊಬೈಲ್ ವಾಹನ ಬ್ಯಾಂಕ್ ಮಾದರಿಯಲ್ಲೇ ಕಾರ್ಯ ನಿರ್ವಹಿಸಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಯೋಜನೆ ಅನುಷ್ಠಾನಕ್ಕೆ ಉನ್ನತ ಮಟ್ಟದ ಸಭೆ ನಡೆಸಿ, ನೂತನ ವ್ಯವಸ್ಥೆ ಜಾರಿಗೆ ತರಲಿದ್ದಾರೆ. ತಮಿಳುನಾಡಿನಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಕೇಳಲ್ಪಟ್ಟಿದ್ದು, ಅದಕ್ಕಿಂತ ಭಿನ್ನ ಮತ್ತು ಇನ್ನೂ ಸರಳ ರೀತಿಯಲ್ಲಿ ಈ ವರ್ಗಕ್ಕೆ ಸಾಲ ನೀಡಲು ಕುಮಾರಸ್ವಾಮಿ ಹೊರಟಿದ್ದಾರೆ.

ಮೊಬೈಲ್ ಬ್ಯಾಂಕಿಂಗ್ ಅನ್ನು ಸರ್ಕಾರ ನಡೆಸುವ ಬದಲು ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಇನ್ಫೋಸಿಸ್, ವಿಪ್ರೋದಂತಹ ಬೃಹತ್ ಸಂಸ್ಥೆಗಳಡಿ ಸೇವೆ ಸಲ್ಲಿಸುತ್ತಿರುವವರಿಗೆ ವಹಿಸುವ ಬಗ್ಗೆಯೂ ಮುಖ್ಯಮಂತ್ರಿ ಇಂದಿನ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ಇಂತಹ ವ್ಯವಸ್ಥೆಯನ್ನು ಸರ್ಕಾರ ನಡೆಸುವುದರಿಂದ ಲೋಪವಾದರೆ ಮೈತ್ರಿ ಸರ್ಕಾರಕ್ಕೆ ಕಳಂಕ ತರಲು ವಿರೋಧಿಗಳು ಬಳಸಿಕೊಳ್ಳಬಹುದು. ಇದರ ಬದಲು ಸಮಾಜದಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡು ಖ್ಯಾತಿ ಪಡೆದಿರುವ ಸಂಸ್ಥೆಗಳಿಗೆ ವಹಿಸಿಕೊಟ್ಟರೆ ಅವರೇ ಬಡವರಿಗಾಗಿ ಬಂಡವಾಳ ಹೂಡಿ ಬ್ಯಾಂಕ್ ನಡೆಸಬಹುದೆಂಬ ಚಿಂತನೆ ಮುಖ್ಯಮಂತ್ರಿ ಅವರದ್ದಾಗಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೇವಾದೇವಿ ಮತ್ತು ಲೇವಾದೇವಿಗಾರರು, ಕೃಷಿ ಋಣ ಪರಿಹಾರ ವಿಷಯ ಆಧಾರವಾಗಿಟ್ಟುಕೊಂಡು ನೂತನ ಕಾನೂನು ಜಾರಿಗೆ ತರಲು ಹೊರಟಿರುವ ಬೆನ್ನಲ್ಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಅನುಷ್ಠಾಗೊಳ್ಳಲಿದೆ. ಮುಖ್ಯಮಂತ್ರಿ ಅವರು ಗಣೇಶ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ರೈತರಲ್ಲದೆ ಉಳಿದ ಎಲ್ಲಾ ವರ್ಗಕ್ಕೂ ಕೊಡುಗೆ ನೀಡುವುದಾಗಿ ತಿಳಿಸಿದ್ದರು. ಮೀಟರ್ ಬಡ್ಡಿದಾರರಿಂದ ಸಾಲ ಪಡೆದ ಬಡಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ವರಮಹಾಲಕ್ಷ್ಮೀ ಹಬ್ಬದ ದಿನದಂದು ಹೊಸ ಕಾಯಿದೆ ತರುವ ಮೂಲಕ ಆ ವರ್ಗದವರ ಬದುಕನ್ನು ಮತ್ತಷ್ಟು ಹಸನು ಮಾಡಲು ಮುಂದಾಗಿದ್ದಾರೆ.

Translate »