ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ
ಮೈಸೂರು

ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ

August 26, 2018

ಮೈಸೂರು: ಆಗಸ್ಟ್ 28ರಂದು ಮಧ್ಯಾಹ್ನ 3.30 ಗಂಟೆಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2018ರ ಬರುವ ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ.

ದಸರಾ ಉನ್ನತ ಸಮಿತಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ, ಸಚಿವರಾದ ಸಾ.ರಾ.ಮಹೇಶ, ಎನ್.ಮಹೇಶ, ಡಿ.ಸಿ.ತಮ್ಮಣ್ಣ, ಸಂಸದರಾದ ಪ್ರತಾಪ್‍ಸಿಂಹ, ಆರ್.ಧ್ರುವನಾರಾಯಣ, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು. ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ, ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಸೇರಿದಂತೆ ಎಲ್ಲಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ದಸರಾ ಉನ್ನತ ಮಟ್ಟದ ಸಭೆಯಲ್ಲಿ ಹಾಜರಿರುವರು.

ಕೊಡಗಿನ ನೆರೆ ಹಾವಳಿಯಿಂದಾಗಿ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಜೀವ ಹಾನಿಯಾಗಿರುವ ಕಾರಣ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಬೇಕೋ ಅಥವಾ ಸಾಂಪ್ರದಾಯಿಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕೋ ಎಂಬುದರ ಬಗ್ಗೆ ಜನಪ್ರತಿನಿಧಿಗಳಿಂದ ಸಲಹೆ-ಸೂಚನೆ ಪಡೆಯಲಿರುವ ಮುಖ್ಯಮಂತ್ರಿಗಳು, ಅಂದೇ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಗಜಪಯಣ ದಿನಾಂಕ ನಿಗದಿ, ಆನೆಗಳಿಗೆ ತಾಲೀಮು ನಡೆಸುವ ಸಂಬಂಧವೂ ಉನ್ನತ ಸಭೆಯಲ್ಲಿ ನಿರ್ಧಾರವಾಗಲಿದೆ.

ಮೈಸೂರಲ್ಲಿ ಆಗಸ್ಟ್ 28ರಂದು ದಸರಾ ಉನ್ನತ ಮಟ್ಟದ ಸಭೆ ನಡೆಯುವ ಬಗ್ಗೆ ಇಂದು ಸಿಎಂ ಕಚೇರಿಯಿಂದ ಅಧಿಕೃತ ವೇಳಾಪಟ್ಟಿ ತಮಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಖ್ಯಮಂತ್ರಿ ಆ.28ರಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಪರಮ ಪೂಜ್ಯ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವದಲ್ಲಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾಗವಹಿಸುತ್ತಿದ್ದು, ಅಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹ ಪಾಲ್ಗೊಂಡು, ನಂತರ ಮೈಸೂರಿನಲ್ಲಿ ನಡೆಯುವ ಜೆಕೆ ಟೈರ್ಸ್ ಲಿಮಿಟೆಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಧ್ಯಾಹ್ನ 3.30 ಗಂಟೆಗೆ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಸುವರು ಎಂಬ ಪ್ರವಾಸ ಪಟ್ಟಿ ತಮಗೆ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆ ದಿನಾಂಕ ನಿಗದಿಯಾಗಿರುವುದರಿಂದ ಜಿಲ್ಲಾಧಿಕಾರಿಗಳು ಅಧೀನಾಧಿಕಾರಿಗಳಿಂದ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದು, ಪೂರ್ವ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಗಜಪಯಣಕ್ಕೆ ಆ.29ಕ್ಕೆ ಮುಹೂರ್ತ ಫಿಕ್ಸ್

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳ ಲಿರುವ 12 ಆನೆಗಳಲ್ಲಿ 6 ಆನೆಗಳ ಮೊದಲ ತಂಡ ಆ.29ಕ್ಕೆ ಮೈಸೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಹುಣಸೂರು ತಾಲೂಕಿನ ವೀರನಹೊಸಳ್ಳಿ ಬಳಿ ಯಿರುವ ನಾಗಾಪುರ ಹಾಡಿಯಲ್ಲಿ ಗಜ ಪಡೆಯ ನಾಯಕ ಅರ್ಜುನ ನೇತೃತ್ವದ ಮೊದಲ ತಂಡದ ಆನೆಗಳಿಗೆ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಜಂಬೂ ಸವಾರಿಯಲ್ಲಿ ಆನೆಗಳದ್ದೇ ಪ್ರಮುಖ ಆಕರ್ಷಣೆ. ವಿವಿಧ ಆನೆ ಶಿಬಿರಗಳಿಂದ ಮೊದಲ ತಂಡದಲ್ಲಿ 6 ಆನೆಗಳನ್ನು ಕರೆತರಲು ಆ.23ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಭಾರೀ ಹಾನಿಯಾಗಿ ರುವ ಹಿನ್ನೆಲೆಯಲ್ಲಿ ಉನ್ನತ ಸಮಿತಿ ಸಭೆ ನಡೆದಿರಲಿಲ್ಲ. ಇದರಿಂದ ಆ.23ರಂದು ನಿಗದಿಯಾಗಿದ್ದ ಗಜಪಯಣ ಮುಂದೂಡಲಾಗಿತ್ತು. ಈ ನಡುವೆ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ, ತಾಲೀಮು ನಡೆಸುವ ಅಗತ್ಯವಿರುವುದನ್ನು ಅರಿತ ಸರ್ಕಾರ, ಆ.28ರಂದು ಉನ್ನತ ಸಮಿತಿ ಸಭೆ ನಡೆಸಿ ಗಜಪಯಣಕ್ಕೆ ಹಸಿರು ನಿಶಾನೆ ತೋರಿಸಲು ನಿರ್ಧರಿಸಿದೆ.

ನಾಗಾಪುರ ಹಾಡಿ ಬಳಿಯಿರುವ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಆ.29ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಗಜಪಡೆ ಮೊದಲ ತಂಡಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಅಕ್ಟೋಬರ್ 10ರಿಂದ 19ರವರೆಗೆ ದಸರಾ ಉತ್ಸವ ನಡೆಯಲಿದೆ. ಅ.19ರಂದು ನಡೆಯುವ ಜಂಬೂಸವಾರಿ ಮೆರವಣಿಯಲ್ಲಿ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತು ಸಾಗಿದರೆ, 12 ಆನೆಗಳು ಹೆಜ್ಜೆ ಹಾಕಲಿವೆ. ಈ ಹಿನ್ನೆಲೆಯಲ್ಲಿ ದಸರಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ತಯಾರಿ ಮಾಡುವುದಕ್ಕಾಗಿ ಆ.29ರಂದು ಆರು ಆನೆಗಳನ್ನು ಕರೆ ತರಲಾಗುತ್ತಿದೆ. ನಾಗರಹೊಳೆ ಅಭಯಾರಣ್ಯದ ವೀರನಹೊಸಳ್ಳಿ ಸಮೀಪದ ನಾಗಾಪುರ ಹಾಡಿ ಬಳಿ ಆದಿವಾಸಿಗಳ ಸಾಂಪ್ರದಾಯಿಕ ನೃತ್ಯ ಹಾಗೂ ಶಾಲಾ ಮಕ್ಕಳಿಂದ ಸರಳ ಕಾರ್ಯಕ್ರಮ ನಡೆಸಿ ಆನೆಗಳನ್ನು ಬೀಳ್ಕೊಡಬೇಕೆಂದು ಸ್ಥಳೀಯ ಅಧಿಕಾರಿಗಳು ಚಿಂತಿಸಿದ್ದಾರೆ. ಇವೆಲ್ಲವೂ ಇನ್ನೆರಡು ದಿನದಲ್ಲಿ ಅಂತಿಮಗೊಳ್ಳಲಿದೆ. ಪ್ರತಿ ವರ್ಷದಂತೆ ಗಜಪಡೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು, ಒಂದೆರಡು ದಿನದ ನಂತರ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆ ಕರೆತರಲಾಗುತ್ತಿತ್ತು. ಆದರೆ ಈ ಬಾರಿ ಸಮಯದ ಕೊರತೆ ಇರುವುದರಿಂದ ಕಾಡಿನಿಂದ ನೇರವಾಗಿ ಅರಮನೆಗೆ ಕರೆತರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Translate »