ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…
ಮೈಸೂರು

ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…

August 26, 2018

ಮೈಸೂರು: ಕೊಡಗಿನಲ್ಲಿ ತಿಂಗಳು ಗಟ್ಟಲೆ ಸುರಿದ ಮಳೆ, ಅದರಿಂದ ಉಂಟಾದ ಪ್ರವಾಹ, ಇದರಿಂದ ಕುಸಿದು ಬಿದ್ದ ಸಾವಿರಾರು ಎಕರೆ ಬೆಟ್ಟ-ಗುಡ್ಡ, ಸಾವಿರಾರು ಮಂದಿಯ ಸ್ವಾಭಿಮಾನದ ಬದುಕನ್ನು ನುಚ್ಚು ನೂರು ಮಾಡಿದೆ. ಕಷ್ಟ ಎಂದವರಿಗೆ ಕೈ ಎತ್ತಿ ಕೊಡುತ್ತಿದ್ದವರು ಮುಂದಿನ ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಕ್ಷರಶಃ ಬೀದಿಗೆ ಬಿದ್ದಿರುವ ತುಂಬು ಕುಟುಂಬವೊಂದರ ದುಸ್ಥಿತಿ ನೋಡಿದರೆ ಕಲ್ಲು ಹೃದಯಿಗಳಲ್ಲೂ ಮರುಕ ಮಡುಗಟ್ಟುತ್ತದೆ.

ಮಡಿಕೇರಿ ಸಮೀಪದ ಮಕ್ಕಂದೂರು ಬಳಿಯ ಮೇಘತಾಳು ಗ್ರಾಮದ ತಂಬುಕುತ್ತಿರ ಕುಟುಂಬ, ನೆರೆ ಹಾವಳಿ ಗಂಡಾಂತರದಿಂದ ಪಾರಾಗಿದ್ದರೂ, ಇವರ ನೆಮ್ಮದಿಯ ಬದುಕು ನೆರೆಯಲ್ಲೇ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಜೀವ ಉಳಿದರೂ ಜೀವನ ದುಸ್ತರವಾಗಿದೆ. ಸ್ವಾಭಿಮಾನ ಹಾಗೂ ಸ್ವಂತ ಬಲದಿಂದ ಬದುಕಿದಂತಹ ಈ ಕುಟುಂಬ ನಿತ್ಯವೂ ಆತಂಕ ಹಾಗೂ ಅತಂತ್ರ ಪರಿಸ್ಥಿತಿಯಲ್ಲಿ ದಿನ ದೂಡುವಂತಾಗಿದೆ. ಈ ಒಂದು ಆಘಾತ ದಿಂದ ಹೊರಬರಲು ಹೆಣಗಾಡುತ್ತಿದೆ.

ಕುಟುಂಬದ ಹಿರಿಯರಾದ ವಯೋವೃದ್ಧ ದಂಪತಿ ತಮ್ಮಯ್ಯ (68), ಪತ್ನಿ ಸೀತಮ್ಮ(60), ಮಡಿಕೇರಿ ಗಂಜಿ ಕೇಂದ್ರದಲ್ಲಿ ತಂಗಿದ್ದರೆ, ಪುತ್ರ ಪೂವಣ್ಣ (41), ಸೊಸೆ ನವೀನಾ(33), ಮೊಮ್ಮಗ ಸಜ್ಜನ್ ಸುಬ್ಬಯ್ಯ (11) ಹಾಗೂ ಮೊಮ್ಮಗಳು ಗ್ರೀನಾ ತಂಗಮ್ಮ (2) ಮೈಸೂರಿನ ರಕ್ತ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಎಲ್ಲವನ್ನೂ ಕಳೆದುಕೊಂಡಿರುವ ಈ ಕುಟುಂಬ ಮುಂದೇನೆಂಬ ಚಿಂತೆಯಲ್ಲಿ ಮುಳುಗಿದೆ.

ಎಂಟು ಎಕರೆ ಕಾಫಿ ತೋಟ, ಒಂದು ಪುಟ್ಟ ಹೆಂಚಿನ ಮನೆ, ಜೀಪು, ಬೈಕು ಹೀಗೆ ಎಲ್ಲವೂ ಇತ್ತು. ಕಳೆದ 50-60 ವರ್ಷದಿಂದ ಈ ಕುಟುಂಬ ತಕ್ಕಮಟ್ಟಿಗೆ ನೆಮ್ಮದಿಯ ಜೀವನವನ್ನೇ ನಡೆಸುತ್ತಿತ್ತು. ಕಾಫಿ ತೋಟದಲ್ಲಿ ಬಂದಂತಹ ಆದಾಯದಲ್ಲಿ ಸ್ವಲ್ಪ ಉಳಿತಾಯ ಮಾಡಿ, ಜೊತೆಗೆ ಸೊಸೈಟಿ, ಖಾಸಗಿ ವ್ಯಕ್ತಿಗಳಿಂದ ಸಾಲ ಸೋಲ ಮಾಡಿ ಈಗ ನೆಲೆಸಿರುವ ಮನೆಯ ಅನತಿ ದೂರದಲ್ಲಿ ಹೊಸದೊಂದು ತಾರಸಿ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಈಗಾಗಲೇ ಈ ಮನೆಗೆ 20 ಲಕ್ಷ ರೂ. ಖರ್ಚಾಗಿದ್ದು, ಶೇ.75ರಷ್ಟು ನಿರ್ಮಾಣ ಕಾರ್ಯವೂ ಪೂರ್ಣ ಗೊಂಡಿತ್ತು. ಕಳೆದ ಮಾರ್ಚ್ ತಿಂಗಳಿಂದಲೂ ಕೊಡಗಿನಲ್ಲಿ ಮಳೆಯಾಗುತ್ತಿದ್ದು, ಇದರ ನಡುವೆ ಮಳೆ ಸ್ವಲ್ಪ ಬಿಡುವು ಕೊಟ್ಟ ಸಂದರ್ಭ ನೋಡಿ ಮನೆ ತಾರಸಿಯನ್ನು ಹಾಕಿದ್ದರು. ಆದರೆ ಈಗ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬ ದುಸ್ತರ ಸ್ಥಿತಿಯಲ್ಲಿದೆ.

ಬದುಕಿದ್ದೇ ಪವಾಡ: ಕಳೆದ ಆಗಸ್ಟ್ 9 ರಂದು ರಾತ್ರಿ 10 ಗಂಟೆ ಸಂದರ್ಭದಲ್ಲಿ ಭೂಮಿ ಕಂಪಿಸಿದಂತಾಗಿ ಮನೆಯ ಪದಾರ್ಥಗಳು ಚೆಲ್ಲಾಪಿಲ್ಲಿ ಯಾಗಿವೆ. ಇದರಿಂದ ಭಯಭೀತಗೊಂಡ ಕುಟುಂ ಬದ ಹಿರಿಯ ಸದಸ್ಯರು, ಮಕ್ಕಳನ್ನು ಎಳೆದುಕೊಂಡು ಕೂಡಲೇ ಮನೆಯಿಂದ ಹೊರ ಓಡಿ ಬಂದು, ಕೆಲ ಕಾಲ ರಸ್ತೆ ಬದಿ ಕಾಲಕಳೆದು ಮತ್ತೆ ಮನೆ ಸೇರಿದ್ದಾರೆ.

ಇದಾದ ವಾರದ ನಂತರ, ಆಗಸ್ಟ್ 16ರಂದು ರಾತ್ರಿ ಭಾರೀ ಸದ್ದು ಕೇಳಿ ಬಂದಿದೆ. ಇದರ ಹಿಂದೆಯೇ ಭಾರೀ ಮಳೆ. ಹೊರಬಂದು ನೋಡಿದರೆ ಬೆಟ್ಟ ಕುಸಿಯುತ್ತಿರುವ ಭಯಾನಕ ದೃಶ್ಯ ಕಣ್ಣಿಗೆ ಕಟ್ಟಿತು. ಎಲ್ಲವನ್ನೂ ಬಿಟ್ಟು ಮಳೆಯಿಂದ ಮಕ್ಕಳ ರಕ್ಷಿಸಲು ಅಲ್ಲೇ ಇದ್ದ ಪ್ಲಾಸ್ಟಿಕ್ ಚೀಲವನ್ನು ಅವರ ತಲೆಗೆ ಕಟ್ಟಿ, ಆರೂ ಜನ, ಒಬ್ಬರ ಕೈ ಒಬ್ಬರು ಹಿಡಿದು ಕೊಂಡು ಬೆಟ್ಟದ ಮೇಲೆರಲು ಆರಂಭಿಸಿದ್ದಾರೆ. ಭಾರೀ ಮಳೆ, ಕಗ್ಗತ್ತಲು ಬೇರೆ, ಕುಸಿಯುತ್ತಿದ್ದ ಮಣ್ಣು, ಕ್ಷಣ ಕ್ಷಣಕ್ಕೂ ಆತಂಕ. ಆದರೂ ಜೀವ ಉಳಿಸಿಕೊಳ್ಳಲು ಮುಂದೆ ಮುಂದೆ ಸಾಗುತ್ತಿರು ವಂತೆ ಪುಟ್ಟ ಮಗುವಿನ ಕಾಲು ಮಣ್ಣಲ್ಲಿ ಹೂತು ಕೊಂಡಿದೆ. ಹೇಗೋ ಪ್ರಯಾಸಪಟ್ಟು ಮಗುವಿನ ಕಾಲು ಬಿಡಿಸಿಕೊಂಡು ಅಂತು ಇಂತು ಎಲ್ಲರೂ ಬೆಟ್ಟದ ತುದಿ ತಲುಪಿದ್ದಾರೆ. ಅಲ್ಲಿ ಸ್ವಲ್ಪ ಗಟ್ಟಿಯಾದ ನೆಲದಲ್ಲಿ ನಿಂತು, ಅತ್ತಿತ್ತ ಕಣ್ಣು ಹಾಯಿಸಿದರೆ ಇವರ ಅದೃಷ್ಟಕ್ಕೆ ಅಲ್ಲಿಯೇ ಮನೆಯೊಂದು ಕಣ್ಣಿಗೆ ಬಿದ್ದಿದೆ. ಸದ್ಯ ಆಶ್ರಯ ಸಿಕ್ಕಿತು ಎಂದು ಮನೆ ಬಳಿ ಹೋದರೆ, ಆ ಮನೆಯಲ್ಲಿದ್ದವರು ಅಪಾಯದ ಮುನ್ಸೂಚನೆ ಅರಿತು ಬಾಗಿಲಿಗೆ ಬೀಗ ಜಡಿದು ಅದಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.

ಸರಿ ರಾತ್ರಿಯಲ್ಲಿ ಹೋಗುವುದಾದರೂ ಎಲ್ಲಿಗೆ? ಧೃತಿಗೆಟ್ಟ ಕುಟುಂಬದ ಪೂವಣ್ಣ ಅಲ್ಲಿಂದಲೇ ತಮಗೆ ಪರಿಚಯಸ್ಥರಾದ ಸಹಕಾರಿ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ, ತಮಗೆ ಬಂದೊದಗಿರುವ ಆಪತ್ತಿನ ಬಗ್ಗೆ ವಿವರಿಸಿ, ರಾತ್ರಿ ತಂಗಲು ಸದರಿ ಮನೆಯಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಇವರ ದಯನೀಯ ಪರಿಸ್ಥಿತಿ ಯನ್ನು ತಿಳಿದ ಸಹಕಾರ ಸಂಘದ ಅಧ್ಯಕ್ಷರು, ತಕ್ಷಣ ತಾವೇ ಅಲ್ಲಿಗೆ ಧಾವಿಸಿ ಮನೆ ಬೀಗ ಒಡೆದು, ಈ ಕುಟುಂಬ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಂದು ಆ ಮನೆಯಲ್ಲಿ ಇದ್ದಂತಹ ಅಕ್ಕಿಯಲ್ಲಿ ಗಂಜಿ ಮಾಡಿ, ಅದಕ್ಕೆ ಉಪ್ಪು ಸೇರಿಸಿ ಕುಟುಂಬದ ಸದಸ್ಯರೆಲ್ಲಾ ಸೇವಿಸಿ, ಅಲ್ಲಿಯೇ ರಾತ್ರಿ ಕಳೆದಿದ್ದಾರೆ. ಮುಂಜಾನೆ ಅಲ್ಲಿಂದ ಹೊರಟ ಈ ಕುಟುಂಬ, ಸಾಕಷ್ಟು ಪ್ರ್ರಯಾಸದಿಂದಲೇ ಮಡಿಕೇರಿಗೆ ಬಂದು ಅಲ್ಲಿನ ಕೊಡವ ಸಮಾಜದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದೆ. ಕುಟುಂಬದ ವಯೋವೃದ್ಧ ತಮ್ಮಯ್ಯ ಹಾಗೂ ಸೀತಮ್ಮ ಗಂಜಿ ಕೇಂದ್ರದಲ್ಲೇ ಇದ್ದರೆ, ಇವರ ಪುತ್ರ ಪೂವಣ್ಣ, ಸೊಸೆ ನವೀನಾ, ಮೊಮ್ಮಗ ಸಜ್ಜನ್ ಸುಬ್ಬಯ್ಯ ಹಾಗೂ ಮೊಮ್ಮ ಗಳು ಗ್ರೀನಾ ತಂಗಮ್ಮ ಅವರನ್ನು ನವೀನಾ ಅವರ ಬಾವ (ಸಹೋದರಿ ಪತಿ) ಕೆ.ಸಿ. ನಾಣಯ್ಯ ಮೈಸೂರಿಗೆ ಕರೆ ತಂದು, ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಬಾಲಕ ಸಜ್ಜನ್ ಪೂವಯ್ಯ ಮಡಿಕೇರಿಯ ಜನರಲ್ ಕೆ.ಎಸ್.ತಿಮ್ಮಯ್ಯ ಶಾಲೆ ಯಲ್ಲಿ 5ನೇ ತರಗತಿ ಓದುತ್ತಿದ್ದು, ಈಗ ಶಾಲೆ ಇಲ್ಲದೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ.

ನವೀನಾ ಅವರ ಬಾವ ಕೆ.ಸಿ. ನಾಣಯ್ಯ, ಮೈಸೂರಿನ ಸಾತಗಳ್ಳಿಯ ರಾಜ್‍ಕುಮಾರ್ ರಸ್ತೆಯಲ್ಲಿ ಪ್ರಾವಿಷನ್ ಸ್ಟೋರ್‌ವೊಂದನ್ನು ಇಟ್ಟುಕೊಂಡಿದ್ದಾರೆ.

ಅಂದಿನ ಘಟನೆಯ ಆಘಾತದಿಂದ ಮಕ್ಕಳಾದಿಯಾಗಿ ಇಡೀ ಕುಟುಂಬ ಇನ್ನೂ ಹೊರಬಂದಿಲ್ಲ. ಮನೆ, ತೋಟ ಎಲ್ಲವನ್ನೂ ಕಳೆದುಕೊಂಡಿರುವ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಮೈಸೂರು ಕೊಡವ ಸಮಾಜದಿಂದ ಇವರಿಗೆ ದಿನನಿತ್ಯದ ಸ್ವಲ್ಪ ಅಕ್ಕಿ, ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಪೂರೈಕೆಯಾಗಿದೆ. ಆದರೂ ಮುಂದೇನು ಎಂಬ ಭವಿಷ್ಯದ ಚಿಂತೆ ಇವರನ್ನು ಕಾಡುತ್ತಿದೆ.

Translate »