ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ: ಹೆಚ್‍ಡಿಕೆ
ಮೈಸೂರು

ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ: ಹೆಚ್‍ಡಿಕೆ

August 26, 2018

ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಹಾಸನ ಜಿಲ್ಲೆಯಲ್ಲಿ ನೀಡಿದ ಹೇಳಿಕೆ ಬೆನ್ನಲ್ಲೇ ಕುಮಾರಸ್ವಾಮಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನೆ ಮಾಡಿದಂತಿದೆ.

ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಿದಂತೆ ನಾನು 12 ವರ್ಷಗಳ ಕಾಲ ಕಷ್ಟನಷ್ಟಗಳನ್ನು ಕಂಡಿದ್ದೇನೆ.
ಮೈತ್ರಿ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಲು ಬಂದಿದ್ದೇನೆ. ಅಧಿಕಾರದಲ್ಲಿ ಇರುವಷ್ಟು ದಿನ ರೈತರು ಹಾಗೂ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ಸರ್ಕಾರ ನಾಳೆಯೇ ಬಿದ್ದು ಹೋದರೂ ಚಿಂತಿಸುವುದಿಲ್ಲ. ಇದ್ದಷ್ಟು ದಿನ ಒಳ್ಳೆ ಕೆಲಸ ಮಾಡಿದೆ ಎಂಬ ತೃಪ್ತಿ ಬಂದರೆ ಸಾಕು.

ಅಧಿಕಾರ ಭದ್ರ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ. ಸರ್ಕಾರ ಬೀಳಿಸಿದರೆ ಬೀಳಿಸಿ ಕೊಳ್ಳಲಿ. ಮುಂದೇನಾಗುತ್ತದೆ ಎಂಬುದೂ ನನಗೆ ಗೊತ್ತಿದೆ. ಸೆಪ್ಟೆಂಬರ್ ನಲ್ಲಿ ಹೊಸ ಸರ್ಕಾರ ಬರುತ್ತದೆ ಎಂದು ಕೆಲವರು ಸೂಟು ಹೊಲಿಸಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕನಸು ಕಾಣುತ್ತಿದ್ದಾರೆ. ಮತ್ತೊಬ್ಬರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಇದೆಲ್ಲವನ್ನೂ ನಾನು ಮಾಧ್ಯಮಗಳಲ್ಲೇ ತಿಳಿದುಕೊಂಡಿದ್ದೇನೆ. ಅದರ ಜೊತೆಗೆ ನನ್ನ ಗಮನಕ್ಕೂ ಕೆಲವು ವಿಷಯಗಳು ಬಂದಿವೆ. ನಮ್ಮ ಶಾಸಕರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ನನಗೆ ಗೊತ್ತಿದೆ ಎಂದು ನಾನು ಸಚಿವರು, ಶಾಸಕರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದರು.

ಅಧಿಕಾರಕ್ಕಾಗಿ ಬಂದವನಲ್ಲ. ರೈತರ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಎಲ್ಲಾ ವರ್ಗದ ರೈತರ ಕೃಷಿ ಸಾಲ ಮನ್ನಾ ಮಾಡುವ ನಿರ್ಧಾರವನ್ನು ನನ್ನ ಸರ್ಕಾರ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಇತರ ವರ್ಗದ ಬಡವರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ಋಣಮುಕ್ತ ಕಾಯಿದೆ ತರಲು ಹೊರಟಿದ್ದೇನೆ. ನನ್ನ ಸಂಪುಟ ಸಹೋದ್ಯೋಗಿಗಳು ಮತ್ತು ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮ ಕೈಗೊಳ್ಳುತ್ತೇನೆಂದು ಸಹಿಸದ ಕೆಲವರು ಸರ್ಕಾರ ಉರುಳಿಸುವ ಪ್ರಯತ್ನ ಮಾಡಿದ್ದಾರೆ.

Translate »