ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ
ಮೈಸೂರು

ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ

August 25, 2018

ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಘಟನೆ
ಮೈಸೂರು: -ಮನೆ ಬೀಗ ಮುರಿದು ನಗದು ಸೇರಿ ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಲೂಟಿ ಮಾಡಿರುವ ಘಟನೆ ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಸಂಭವಿಸಿದೆ.

ಲಷ್ಕರ್ ಮೊಹಲ್ಲಾದ ಹಳ್ಳದಕೇರಿ ಬಸ್ ತಂಗುದಾಣದ ಹಿಂಭಾಗದಲ್ಲಿರುವ ಬಟ್ಟೆ ವ್ಯಾಪಾರಿ ಅಶೋಕ್‍ಕುಮಾರ್ ಮನೆಯಲ್ಲಿ ಖದೀಮರು ದಾಳಿ ನಡೆಸಿ, 390 ಗ್ರಾಂ ಚಿನ್ನಾಭರಣಗಳು, 500 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 7000 ರೂ. ನಗದನ್ನು ದೋಚಿದ್ದಾರೆ.
ಮನೆ ಸಮೀಪವೇ ಲಷ್ಕರ್ ಮೊಹಲ್ಲಾದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಅಶೋಕ್‍ಕುಮಾರ್ ಮಾಲು ಖರೀದಿಗೆಂದು ಬುಧವಾರ ಅಹಮದಾಬಾದ್‍ಗೆ ತೆರಳಿದ್ದರು. ರಕ್ಷಾಬಂಧನ ಹಬ್ಬಕ್ಕೆಂದು ಅಶೋಕ್‍ಕುಮಾರ್ ಪತ್ನಿ ಗುರುವಾರ ಬೆಂಗಳೂರಿಗೆ ತೆರಳಿದ್ದರು. ಅಂದು ಮಧ್ಯಾಹ್ನ 12 ಗಂಟೆ ವೇಳೆಗೆ ಅವರ ಮಗ ಮನೆಗೆ ಬೀಗ ಹಾಕಿಕೊಂಡು ಅಂಗಡಿಗೆ ಹೋಗಿ ರಾತ್ರಿ ಸುಮಾರು 10.45 ಗಂಟೆಗೆ ಹಿಂದಿರುಗಿದಾಗ ಮನೆ ಬಾಗಿಲ ಬೀಗ ಮುರಿದಿದ್ದುದು ಕಂಡು ಬಂತು.

ಅಚ್ಚರಿಗೊಂಡ ಆತ ತಂದೆ-ತಾಯಿಗೆ ಫೋನ್ ಮಾಡಿದಾಗ ಅವರೂ ತಾವು ಮೈಸೂರಿಗೆ ಬಂದಿಲ್ಲ ಎಂದು ಹೇಳಿ ಯಾರೋ ಕಳ್ಳರು ನುಗ್ಗಿರಬಹುದು. ಮೊದಲು ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಷ್ಕರ್ ಠಾಣೆ ಇನ್ಸ್‍ಪೆಕ್ಟರ್ ಹೆಚ್.ಆರ್. ವಿವೇಕಾನಂದ ಹಾಗೂ ಸಿಬ್ಬಂದಿ ಮಹಜರು ನಡೆಸಿದರು. ಮನೆ ಮುಂದಿನ ಬಾಗಿಲ ಬೀಗ ಮುರಿದು ಒಳಗೆ ನುಸುಳಿರುವ ಖದೀಮರು, ಮೊದಲ ಮಹಡಿಯ ಕೊಠಡಿಗಳ ವಾಲ್‍ಡ್ರೋಬ್‍ಗಳನ್ನೆಲ್ಲಾ ಶೋಧಿಸಿ ಬಟ್ಟೆ, ಇನ್ನಿತರೆ ಪದಾರ್ಥಗಳನ್ನೆಲ್ಲಾ ಚಿಲ್ಲಾಪಿಲ್ಲಿ ಮಾಡಿ, ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ನಗದನ್ನು ಅಪಹರಿಸಿರುವುದು ಕಂಡು ಬಂದಿತು.

ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ, ಬೆರಳಚ್ಚು ಮುದ್ರೆ ನಗರ ಘಟಕದ ಎಸಿಪಿ ರಾಜಶೇಖರ್, ಸಬ್‍ಇನ್ಸ್‍ಪೆಕ್ಟರ್ ಅಪ್ಪಾಜಿಗೌಡ, ಶ್ವಾನ ದಳದ ಸಿಬ್ಬಂದಿ ಸಹ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Translate »