ಕಾಂಗ್ರೆಸ್‌ಗೆ ಮತ ಹಾಕಿ ನೆಹರು ವಂಶಸ್ಥರೊಂದಿಗೆ  ಫೋಟೋ ತೆಗೆಸಿಕೊಂಡಿದ್ದೆ ಮುಸ್ಲಿಂರಿಗೆ ಸಿಕ್ಕ ಭಾಗ್ಯ
ಮೈಸೂರು

ಕಾಂಗ್ರೆಸ್‌ಗೆ ಮತ ಹಾಕಿ ನೆಹರು ವಂಶಸ್ಥರೊಂದಿಗೆ  ಫೋಟೋ ತೆಗೆಸಿಕೊಂಡಿದ್ದೆ ಮುಸ್ಲಿಂರಿಗೆ ಸಿಕ್ಕ ಭಾಗ್ಯ

August 25, 2018

ಮೈಸೂರು:  ಕಳೆದ 70 ವರ್ಷ ಗಳಿಂದ ಕಾಂಗ್ರೆಸ್‌ಗೆ ಮತ ನೀಡಿ, ನೆಹರು ವಂಶಸ್ಥರ ಜೊತೆ ಫೋಟೋ ತೆಗೆಸಿಕೊಂಡಿದ್ದೇ ಮುಸ್ಲಿಂ ಸಮುದಾಯದವರಿಗೆ ಬಂದ ಭಾಗ್ಯ. ಇದನ್ನು ಬಿಟ್ಟರೆ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಆ ಪಕ್ಷ ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂದು ಎಐಎಂಐಎಂ ಅಧ್ಯಕ್ಷರೂ ಆದ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮೈಸೂರು ಬನ್ನಿಮಂಟಪ ಹುಡ್ಕೋ ಬಡಾ ವಣೆಯ ಮುಖ್ಯರಸ್ತೆಯಲ್ಲಿ ಮೈಸೂರು ನಗರ ಪಾಲಿಕೆ ವಾರ್ಡ್ ನಂ.8ರ ಎಐಎಂಐಎಂ ಪಕ್ಷದ ಅಭ್ಯರ್ಥಿಯಾಗಿರುವ ರಫತುಲ್ಲಾ ಖಾನ್ ಅವರ ಪರ ಮತಯಾಚಿಸಿ, ಅವರು ಮಾತನಾಡಿದರು.

ಕಳೆದ ಕೆಲವು ತಿಂಗಳ ಹಿಂದೆ ಸುಪ್ರೀಂಕೋರ್ಟ್ 1989ರ ಎಸ್ಸಿ-ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆ ಪರಿಷ್ಕರಿಸಿ, ತೀರ್ಪು ನೀಡಿತ್ತು. ಆಗ ದಲಿತ ಸಮುದಾಯ ಇದನ್ನು ದೇಶಾದ್ಯಂತ ಒಗ್ಗಟ್ಟಾಗಿ ವಿರೋಧಿಸಿದರು. ವಿಧಿಯಿಲ್ಲದೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ, ಈ ಕಾಯ್ದೆಯನ್ನು ಹಳೆ ಸ್ವರೂಪದಲ್ಲೇ ಉಳಿಸಿಕೊಂಡಿತು. ಈ ಹೋರಾಟದಿಂದ ಮುಸ್ಲಿಂ ಸಮುದಾಯ ಕಲಿಯುವುದು ಬೇಕಾದಷ್ಟಿದೆ. ಈ ಕಿಚ್ಚು ನಮ್ಮಲೂ ಬರಬೇಕು ಎಂದು ಸಲಹೆ ನೀಡಿದರು.

ತ್ರಿಬಲ್ ತಲಾಖ್ ನಿಷೇಧಪಡಿಸುವ ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರವಾಗಿ, ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಆದರೆ, ತಲತಲಾಂತರದಿಂದ ಮತ ಹಾಕಿಸಿಕೊಂಡ ಕಾಂಗ್ರೆಸ್ ಸದಸ್ಯರು, ಸಂಸತ್‍ನಲ್ಲಿ ಇದರ ಬಗ್ಗೆ ಮಾತನಾಡುತ್ತಿಲ್ಲ. ಇದರ ಬಗ್ಗೆ ಮಾತನಾಡಿದ್ದು, ನಾನೊಬ್ಬನೇ. ಇದರಲ್ಲಿ ನಮ್ಮ ಸಮುದಾಯದ ಲಕ್ಷಾಂತರ ಕುಟುಂಬಗಳ ಭವಿಷ್ಯ ಅಡಗಿದೆ. ಈ ಕಾಯಿದೆ ಜಾರಿಯಾದರೆ, ನಮ್ಮ ಯುವಕರು ಜೈಲಿನಲ್ಲಿ ಕೊಳೆಯ ಬೇಕಾಗುತ್ತದೆ. ಈ ಕಾಯ್ದೆ ಮಂಡನೆಯಾಗಲು ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ಕಾರಣ ಎಂದರು.

ಇದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ನಮ್ಮ ವಿರುದ್ಧ ಮಸಲತ್ತು ಮಾಡುತ್ತಿದೆ. ಈ ದೇಶದ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಈ ದೇಶದ ‘ವಜ್ರ’ ಗಳಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಹಾಗಾದರೆ, ನಾವುಗಳೇನು? ಎಂದು ಪ್ರಶ್ನಿಸಿದ ಅವರು, ನಾನು ಬಂದು ಹೋದ ಜಾಗಗಳಲ್ಲಿ ಸಮುದಾಯದ ಹೆಸರಿನಲ್ಲಿ ಮತ ಕೇಳಿ, ಕೋಮುವಾದಿಗಳು ಗೆಲ್ಲಲು ಅನುಕೂಲ ಮಾಡಿ ಕೊಡುತ್ತಿದ್ದೇನೆ ಎಂಬ ಆರೋಪವನ್ನು ವಿರೋಧಿಗಳು ಮಾಡುತ್ತಿದ್ದಾರೆ. ನಾನು ಅವರಿಗೆ ಕೇಳುತ್ತೇನೆ. ಇನ್ನು ಮುಂದೆ ನಮ್ಮನ್ನು ವಂಚಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ಬದ್ಧ ಹಕ್ಕು ಪಡೆಯಲು ನಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದು ತಿರುಗೇಟು ನೀಡಿದರು.

ನಾನು ಮೊಹಮ್ಮದ್ ಅಲಿ ಜಿನ್ನಾ ರಾಜಕಾರಣವನ್ನು ಹಿಂದೂಸ್ತಾನದಲ್ಲಿ ಮತ್ತೆ ಆರಂಭಿಸಿದ್ದೇನೆ ಎಂದು ಕೆಲ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಜಿನ್ನಾ ರಾಜಕಾರಣ 1947ರ ಇಸವಿಗೆ ಮುಗಿದ ಅಧ್ಯಾಯ. ನಾವು ಹಿಂದೂಸ್ತಾನದ (ಮುಸ್ಲಿಂ ಸಮುದಾಯ) ಭೂಮಿ ಯಲ್ಲಿ ಭಾಗ ಕೇಳುತ್ತಿಲ್ಲ. ಬದಲಾಗಿ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ನೀಡಿರುವ ಸವಲತ್ತುಗಳನ್ನು ಕೊಡಿ ಎಂದು ಹೋರಾಟ ಮಾಡುತ್ತಿ ದ್ದೇನೆ. ಬೇಕಿದ್ದರೆ, ಮಾಧ್ಯಮಗಳು, ನನ್ನ ಭಾಷಣಗಳನ್ನು ರೆಕಾರ್ಡ್ ಮಾಡಿ, ಬಿತ್ತರಿಸಿ ನೋಡಲಿ. ನನ್ನ ಮಾತು ಸಂವಿಧಾನ ಚೌಕಟ್ಟು ಮೀರಿದ್ದರೆ, ನನ್ನ ವಿರುದ್ಧ ಎಫ್‍ಐಆರ್ ದಾಖಲಿಸಲಿ ಎಂದು ಸವಾಲು ಹಾಕಿದರು.

ಇಷ್ಟು ವರ್ಷ ಜಾತ್ಯಾತೀತ ಸೋಗಿನಲ್ಲಿ ಕಾಂಗ್ರೆಸ್ ಪಕ್ಷ ದಲಿತರು, ಮುಸ್ಲಿಮ್ ಹಾಗೂ ಬುಡಕಟ್ಟು ಜನಾಂಗದವರನ್ನು ವಂಚಿಸುತ್ತ ಬಂದಿದೆ. ಇನ್ನು ಮುಂದೆ ಅದು ಸಾಧ್ಯವಿಲ್ಲ. ಇಲ್ಲಿಯವರೆಗೂ ಕೇವಲ ಮತ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್, ನಮ್ಮ ಯುವಕರನ್ನು ಅಭಿವೃದ್ಧಿಯಿಂದ ವಂಚಿಸಿದೆ. ಇನ್ನು ಮುಂದೆ ಈ ಕುತಂತ್ರಕ್ಕೆ ನಾವು ಬಲಿಯಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಕಾಶ್ಮೀರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಮ್ಮ ಸಮುದಾಯದ ವಿರುದ್ಧ ದೌರ್ಜನ್ಯ ನಡೆದರೂ ಅಲ್ಲಿನ ಗೃಹ ಇಲಾಖೆಯಿಂದ ಕ್ರಮ ಕೈಗೊಳ್ಳದಿರುವುದೇ ಸಾಕ್ಷಿ ಎಂದರು.

ಆದ್ದರಿಂದ ಇಲ್ಲಿನ ಯುವಕರಲ್ಲಿ, ಹಿರಿಯರಲ್ಲಿ ನನ್ನೊಂದು ವಿಜ್ಞಾಪನೆ, ರಾಜಕಾರಣದಲ್ಲಿ ಈ ಹಿಂದೆ ಕಾಂಗ್ರೆಸ್ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಇದೀಗ ನಮ್ಮ ಪಕ್ಷ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಅನೇಕ ಮುಖಂಡರಿದ್ದಾರೆ. ಅವರನ್ನು ಗುರುತಿಸಿ, ರಾಜಕಾರಣದಲ್ಲಿ ಬೆಳಸಬೇಕು. ಇಲ್ಲವಾದರೆ, ಇನ್ನೂ ನೂರು ವರ್ಷವಾದರೂ ನಮ್ಮ ಸಮುದಾಯದ ಅಭಿವೃದ್ಧಿ ಅಸಾಧ್ಯ ಎಂದು ಕಿವಿ ಮಾತು ಹೇಳಿದರು.

1994-95ರ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿ, ಶಾಸಕನಾದೆ. ನಂತರ ಸಂಸದನಾಗಿ ಆಯ್ಕೆಯಾಗಿದ್ದೇನೆ. ಮತ್ತೊಬ್ಬ ಅಭ್ಯರ್ಥಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ನಾನೊಬ್ಬನೇ ದೇಶದ ಯಾವುದೇ ಭಾಗದಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ ಗಳು ನಡೆದಾಗ ಸಾರ್ವಜನಿಕವಾಗಿ ಖಂಡಿಸುತ್ತಿದ್ದೇನೆ. ಮುಂದೆಯೂ ಖಂಡಿಸುತ್ತೇನೆ. ಅಹಿಂದ ವರ್ಗದ ದನಿಯಾಗಿ ಕೆಲಸ ಮಾಡುತ್ತೇನೆ. ನನಗೆ ದನಿಯಾಗಿ ಮೈಸೂರು ಮಹಾ ನಗರ ಪಾಲಿಕೆ ವಾರ್ಡ್.8ರಿಂದ ಅಭ್ಯರ್ಥಿಯಾಗಿರುವ ರಫತುಲ್ಲಾಖಾನ್ ಅವರನ್ನು ಗೆಲ್ಲಿಸುವ ಮೂಲಕ ದೇಶಾದ್ಯಂತ ಮುಸ್ಲಿಂ ಜನಪ್ರತಿನಿಧಿ ಗಳು, ರಾಜಕಾರಣದಲ್ಲಿ ಬೆಳೆಯಲು ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.

ನಾವು ಹಿಂದೂಸ್ತಾನದ ಸಂವಿಧಾನದಲ್ಲಿ ನಂಬಿಕೆಯಿಟ್ಟು ಹೋರಾಟ ಮಾಡೋಣ, ಸಂವಿಧಾನ ಎಲ್ಲರಿಗಾಗಿ ರಚನೆಯಾಗಿದೆ. ಕೇವಲ ಆಳುವ ಸರ್ಕಾರಗಳ ಕೈಗೊಂಬೆ ಯಾಗಿ ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಳ್ಳು ವುದು ಬೇಡ ಎಂದರಲ್ಲದೆ, ಅಂಬೇಡ್ಕರ್ ಜೀವಿತಾವಧಿ ಯಲ್ಲಿ ಒಂದು ಮಾತು ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಹೀರೋ ಆಗಿರಬೇಕು. ಹೀರೋ ರಾಜ ಕಾರಣಿ ಕೈಕೆಳಗೆ ಸಂವಿಧಾನ ಇರಬಾರದು. ಇದರಿಂದ ಸಂವಿಧಾನಕ್ಕೆ ಅಪಾಯ ಎಂದು ಅಭಿಪ್ರಾಯ ಮಂಡಿಸಿದ್ದರು.

ಇಲ್ಲಿಯವರೆಗೆ ನಾವು ಸಂವಿಧಾನವನ್ನು ಹೀರೋ ಆಗಿ ನೋಡಲಿಲ್ಲ. ಬದಲಾಗಿ, ಒಂದು ಕುಟುಂಬದವರ ಹೀರೋ ಮಾಡಿದೆವು. ಅವರು ಗೆದ್ದ ಮೇಲೆ, ಹೀರೋ ಆಗಿದ್ದ ಸಂವಿಧಾನವನ್ನು ಪಕ್ಕಕ್ಕೆ ತಳ್ಳಿ, ತಮಗೆ ಬೇಕಾದಂತೆ ಸಂವಿಧಾನವನ್ನು ಬದಲಿಸಿಕೊಂಡರು. ಇನ್ನು ಮುಂದೆ ನಮ್ಮ ಹಕ್ಕುಗಳನ್ನು ರಕ್ಷಿಸುವ ಪಕ್ಷಗಳಿಗೆ ಮತ ನೀಡುವ ಮೂಲಕ ನಮ್ಮ ಸಮುದಾಯ ಬದಲಾವಣೆಗೆ ತೆರೆದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕುಮಾರಸ್ವಾಮಿ ಕಿಂಗ್….

ಮೈಸೂರು: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ದೇಶದ ಗಮನ ಸೆಳೆದಿತ್ತು. ಕರ್ನಾಟಕದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತದೆ ಎಂದು ಎಲ್ಲಾ ಮಾಧ್ಯಮಗಳು ಹೇಳುತ್ತಿದ್ದವು. ಆಗ ನಾನು ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ತಿಳಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಫಲಿತಾಂಶದ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಕುಳಿತಿದ್ದೆ. ಆಗ ಮಾಧ್ಯಮಗಳು ನನ್ನನ್ನು ಹಲವು ರೀತಿಯಲ್ಲಿ ಪ್ರಶ್ನಿಸಿದ್ದವು. ಆಗ ನಾನು ಹೇಳಿದ್ದು ಒಂದೇ ಮಾತು. ಕರ್ನಾಟಕದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತಾರೆ ಎಂದು. ಪೂರ್ಣ ಫಲಿತಾಂಶ ಬಂದ ನಂತರ ನನ್ನ ಮಾತು ನಿಜವಾಯಿತು ಎಂದರು. ಆದ್ದರಿಂದ ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ನಿಮ್ಮ ಬೆಂಬಲ ದೊರೆತರೆ, ಜೆಡಿಎಸ್‍ನಂತೆ ದೇಶದ ಕೆಲವು ರಾಜ್ಯಗಳಲ್ಲಿ ಕಿಂಗ್ ಮೇಕರ್ ಆಗಬಹುದು. ಇಲ್ಲವೇ ನಾವೇ ಕಿಂಗ್ ಆಗಬಹುದು. ಸ್ವಾತಂತ್ರಯೋಧ ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ ನಾಡಿ ನಲ್ಲಿ ಮತ್ತೆ ಆ ವೈಭವವನ್ನು ನೋಡಬೇಕಾದರೆ, ಸ್ಥಳೀಯವಾಗಿ ನಮ್ಮ ಯುವಕರನ್ನು ರಾಜಕಾರಣದಲ್ಲಿ ಗೆಲ್ಲಿಸಿ ಎಂದರಲ್ಲದೆ, ಯಾವುದೇ ರೀತಿಯ ಹೋರಾಟಗಳು ಮಾತ್ರ ಸಂವಿಧಾನ ಚೌಕಟ್ಟಿನಲ್ಲಿರಬೇಕು ಎಂದರು.

Translate »