ಮೈಸೂರು ನಗರಪಾಲಿಕೆ ಚುನಾವಣೆ; ಕನಿಷ್ಟ 33 ಸ್ಥಾನ ಗೆಲ್ಲಲೇಬೇಕು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ
ಮೈಸೂರು

ಮೈಸೂರು ನಗರಪಾಲಿಕೆ ಚುನಾವಣೆ; ಕನಿಷ್ಟ 33 ಸ್ಥಾನ ಗೆಲ್ಲಲೇಬೇಕು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ

August 25, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ 65 ವಾರ್ಡ್‍ಗಳ ಪೈಕಿ ಕನಿಷ್ಟ 33 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಗುರಿ ನಿಗದಿ ಮಾಡಿದರು.

ಮೈಸೂರಿನ ರೈಲು ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಮೈಸೂರು ನಗರಪಾಲಿಕೆ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಪಕ್ಷದ ಅಭ್ಯರ್ಥಿಗಳ ಸಭೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಗದಿತ ಗುರಿಯನ್ನು ಸಾಧಿಸಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು. ಟಿಕೆಟ್ ಸಿಗದೆ ಅನ್ಯಾಯಕ್ಕೆ ಒಳಗಾಗಿರುವವರಿಗೆ ನಾಮಕರಣದ ಮೂಲಕ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಇರುವವರಿಗೆ ಅವಕಾಶಗಳು ಇದ್ದೇ ಇರುತ್ತದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ ಜಯ ಸಾಧಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆರ್.ಧರ್ಮಸೇನಾ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಸತ್ಯನಾರಾಯಣ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇನ್ನಿತರರು ಉಪಸ್ಥಿತರಿದ್ದರು.

ಬಿಜೆಪಿ ಬೂಟಾಟಿಕೆ, ಬೊಗಳೆ ದಾಸರ ಪಕ್ಷ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ

ಮೈಸೂರು:  ಭಾರತೀಯ ಜನತಾಪಕ್ಷ ಕೇವಲ ಬೂಟಾಟಿಕೆ ಮತ್ತು ಬೊಗಳೆ ದಾಸರ ಪಕ್ಷ. ಅದರಲ್ಲೂ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಆರೋಪಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಸ್ನೇಹಿತರೇ ದೇಶ ಲೂಟಿ ಮಾಡಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ ಕೋಟಿ ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ರಾಜ್ಯದಲ್ಲಿ ಬಲಪಂಥೀಯ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಪ್ರಗತಿಪರ ಚಿಂತಕರೇ ಬಲಪಂಥೀಯರ ಟಾರ್ಗೆಟ್ ಆಗಿದ್ದಾರೆ. ಇದರ ಪರಿಣಾಮ ದಾಬೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್ ಇನ್ನಿತರರ ಹತ್ಯೆಯಾಯಿತು. ಇವರ ಆಡಳಿತವೇ ಒಂದು ರೀತಿ ಫ್ಯಾಸಿಸ್ಟ್ ರೀತಿಯಲ್ಲಿದೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕಿಸಿದರು.

ಬಲಪಂಥೀಯರು ನಕ್ಸಲೈಟ್‍ಗಳಿಗಿಂತ ಅಪಾಯಕಾರಿ ಎಂದ ಅವರು, ಮನ್ ಕೀ ಬಾತ್‍ನಲ್ಲಿ ಬೇರೆಲ್ಲಾ ವಿಚಾರಗಳನ್ನು ಹೇಳುವ ಹಾಗೂ ಅನಗತ್ಯ ವಿಚಾರಗಳಿಗೆ ಟ್ವೀಟ್ ಮಾಡುವ ಮೋದಿ ಇಂತಹ ವಿಚಾರಗಳ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.

ರಾಮನ ಹೆಸರು ಹೇಳುವ ಬಿಜೆಪಿಯವರು ರಾಮನ ವಿರುದ್ಧದ ಕೆಲಸಗಳನ್ನೇ ಮಾಡುತ್ತಾರೆ. ರಾಮನಲ್ಲಿರುವ ಯಾವ ಗುಣಗಳು ಇವರಲ್ಲಿ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಗರ ಸ್ವಚ್ಛತೆ, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಂಸದ ಆರ್.ಧ್ರುವನಾರಾಯಣ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಕಳೆದ ಬಾರಿ 22 ಸ್ಥಾನ ಗಳಿಸಿದ್ದು, ಪಾಲಿಕೆ ಮತ್ತು ಜಿಪಂನಲ್ಲಿ ಅಧಿಕ ಸ್ಥಾನ ಬಂದಿದ್ದರೂ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಪಕ್ಷ ಮತ್ತು ವ್ಯಕ್ತಿ ಮುಖ್ಯವಾಗಿರುತ್ತದೆ. ಒಳ್ಳೆಯ ಅಭ್ಯರ್ಥಿಗಳನ್ನೇ ವರಿಷ್ಠರು ಆಯ್ಕೆ ಮಾಡಿದ್ದಾರೆ. ಸಿಕ್ಕಿದ ಅವಕಾಶ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಯಾರಿಗೆ, ಯಾವ ಸಮಾಜಕ್ಕೆ ಟಿಕೆಟ್ ಸಿಕ್ಕಿಲ್ಲವೋ ಅಂಥವರಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಆದ್ಯತೆ ನೀಡಲಿದ್ದೇವೆ. ಮನೆ ಮನೆಗೆ ಹೋಗಿ, ಕಠಿಣ ಪರಿಶ್ರಮದಿಂದ ಎಲ್ಲರೂ ತೊಡಗಿಸಿಕೊಂಡು ಹೆಚ್ಚು ಸ್ಥಾನ ಗಳಿಸುವುದು ಅಗತ್ಯ. – ಆರ್.ಧ್ರುವನಾರಾಯಣ, ಸಂಸದ.

 

Translate »