ಮೈಸೂರು ನಗರ ಪಾಲಿಕೆಗೆ ಐವರು ಪೌರಕಾರ್ಮಿಕರ ಸ್ಪರ್ಧೆ
ಮೈಸೂರು

ಮೈಸೂರು ನಗರ ಪಾಲಿಕೆಗೆ ಐವರು ಪೌರಕಾರ್ಮಿಕರ ಸ್ಪರ್ಧೆ

August 25, 2018

ಮೈಸೂರು: ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎಂಬ ಗಾದೆ ಮಾತಿನಂತೆ ನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಪೌರಕಾರ್ಮಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುತ್ತೇವೆಂದು, ಸಾಂಸ್ಕೃತಿಕ ನಗರಿ ಮೈಸೂರು ದೇಶದಲ್ಲೇ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಪಡೆಯಲು ಹಗಲಿರುಳು ದುಡಿದಿದ್ದ ಪೌರಕಾರ್ಮಿಕರು ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 5 ವಾರ್ಡ್‍ಗಳಿಂದ ಸ್ಪರ್ಧೆ ಮಾಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ-32 (ಗೌಸಿಯಾ ನಗರ ಎ ಬ್ಲಾಕ್)ನಿಂದ ಬಿಜೆಪಿ ಅಭ್ಯರ್ಥಿಯಾಗಿ ಆರ್.ಪೂಜಾ, ವಾರ್ಡ್ ನಂ-39 (ಗಾಯತ್ರಿಪುರಂ 1ನೇ ಹಂತ) ಬಿಜೆಪಿ ಅಭ್ಯರ್ಥಿಯಾಗಿ ಆರ್. ಸುಬ್ಬಮಣಿ, ವಾರ್ಡ್ ನಂ-62 (ವಿಶ್ವೇಶ್ವರನಗರ)ದಿಂದ ಆರ್.ಶಾಂತಮ್ಮವಡಿವೇಲು ಬಿಜೆಪಿಯಿಂದ ಮತ್ತು ಇದೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ನಾಗರತ್ನ ಸ್ಪರ್ಧೆ ಮಾಡುತ್ತಿದ್ದರೆ, ವಾರ್ಡ್ ನಂ-63 (ಜೆ.ಪಿ ನಗರ)ರಿಂದ ಎಚ್.ಎಸ್ ವಾಸಂತಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಗೆದ್ದರೆ ಪೌರಕಾರ್ಮಿಕರ ಸಮಸ್ಯೆಗಳಿಗೆ ದನಿಯಾಗಲು ಒಂದು ಅವಕಾಶ ಲಭಿಸಲಿದೆ ಎನ್ನುತ್ತಾರೆ ಈ ಎಲ್ಲಾ ಅಭ್ಯರ್ಥಿಗಳು.

ಪೌರಕಾರ್ಮಿಕರ ಶ್ರಮದಿಂದಲೇ ಮೈಸೂರಿಗೆ ಸತತ ಎರಡು ಬಾರಿ ಸ್ವಚ್ಛ ನಗರಿ ಪಟ್ಟ ಸಿಕ್ಕಿದ್ದು, ಅವರ ಶ್ರಮವನ್ನು ನಾವೆಲ್ಲಾ ಮರೆಯುವ ಹಾಗಿಲ್ಲ. ಹೀಗಾಗಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪೌರಕಾರ್ಮಿಕ ಸಮುದಾಯದ ಐವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಮೂರು ಪಕ್ಷಗಳು ಅವಕಾಶ ಮಾಡಿಕೊಟ್ಟಿದ್ದು, ಬಿಜೆಪಿಯಿಂದ ಮೂವರು, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಬ್ಬರಿಗೆ ಟಿಕೆಟ್ ನೀಡಿವೆ.

ಮೂಲಭೂತ ಸೌಕರ್ಯಗಳೇ ಇಲ್ಲ: ಪೌರಕಾರ್ಮಿಕರಿಗಾಗಿ ಡಿ.ದೇವರಾಜ ಅರಸು ಕಾಲೋನಿ ಮತ್ತು ಧರ್ಮಸಿಂಗ್ ಕಾಲೋನಿಗಳನ್ನು ನಿರ್ಮಿಸಿ 30ಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೆ ಈ ಭಾಗದ ನಿವಾಸಿಗಳು ಮೂಲಭೂತ ಸೌಕರ್ಯಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಡಾಂಬರ್ ಇಲ್ಲದ ರಸ್ತೆಯಲ್ಲಿ ಎತ್ತ ನೋಡಿದರು ಗುಂಡಿಗಳು, ಕಸದ ರಾಶಿ, ಕೊಳಚೆಯಿಂದ ತುಂಬಿದ ಚರಂಡಿಗಳೇ ಕಾಣುತ್ತವೆ. ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದನ್ನು ಸರಿಪಡಿಸುವ ಕೆಲಸಕ್ಕೆ ಯಾರು ಮುಂದಾಗಿಲ್ಲ. ಮಕ್ಕಳು ರಸ್ತೆಗಳಲ್ಲಿ ತಿರುಗಾಡುವುದು ಕಷ್ಟವಾಗಿದೆ. ಇಲ್ಲಿ ಯಾವುದೇ ಪಾರ್ಕ್ ಇಲ್ಲ ಹಾಗೂ ಕೆಲವರಿಗೆ ಸ್ವಂತ ಮನೆಯಿಲ್ಲದೇ ಬದುಕುತ್ತಿದ್ದೇವೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಆಳಲನ್ನು ತೊಡಿಕೊಂಡರು.

ವಿಪರೀತ ದುರ್ವಾಸನೆ: ವಿಶ್ವೇಶ್ವರನಗರದಲ್ಲಿರುವ ಎಕ್ಸೆಲ್‍ಪ್ಲಾಂಟ್(ಕಸ ಸಂಸ್ಕರಣಾ ಘಟಕ) ಮತ್ತು ಕಸದ ರಾಶಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ. ಇಲ್ಲಿ ಮೈಸೂರಿನ ತ್ಯಾಜ್ಯವನ್ನೆಲ್ಲಾ ತಂದು ಸುರಿಯಲಾಗುತ್ತದೆ. ಇದರಿಂದ ತ್ಯಾಜ್ಯ ರಾಶಿ ಕೊಳೆತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿವಿಧ ಪಕ್ಷದ ಜನ ಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಗೊತ್ತಿದ್ದರೂ ಯಾರು ಸಹ ಸ್ಪಂದಿಸುತ್ತಿಲ್ಲ. ಚುನಾವಣೆಯ ಸಮಯದಲ್ಲಿ ಬರುತ್ತಾರೆ. ನಂತರ ಮಾಯವಾಗುತ್ತಾರೆ. ಸಮಸ್ಯೆಗಳು ಮಾತ್ರ ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಈ ಬಾರಿ ಐದು ಜನ ನಮ್ಮ ಪೌರಕಾರ್ಮಿಕರೇ ಚುನಾವಣೆ ಸ್ಪರ್ಧಿಸಿದ್ದು, ಇನ್ನಾದರೂ ಸಮಸ್ಯೆಗಳಿಂದ ನಮಗೆ ಮುಕ್ತಿ ಸಿಗುತ್ತಾ ಎಂದು ಎದುರು ನೋಡುತ್ತಿದ್ದೇವೆ ಎಂಬುದು ಸ್ಥಳಿಯರ ಪ್ರತಿಕ್ರಿಯೆಯಾಗಿದ್ದು, ಈ ಬಾರಿಯ ನಗರ ಪಾಲಿಕೆ ಚುನಾವಣೆ ವಿಶೇಷವಾಗಿದೆ.

ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವುದು, ಸೇವೆ ಖಾಯಂಗೊಳಿಸುವುದು ಮತ್ತು ವಾರ್ಡ್‍ಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಪ್ರಮುಖವಾಗಿ ರಸ್ತೆ ಸರಿ ಪಡಿಸಬೇಕು, ಗುಂಡಿ ಮುಚ್ಚಬೇಕು. ಉದ್ಯಾನವನ ಅಭಿವೃದ್ದಿಪಡಿಸಬೇಕು, ಎಕ್ಸೆಲ್‍ಪ್ಲಾಂಟ್(ಕಸ ಸಂಸ್ಕರಣಾ ಘಟಕ) ಮುಕ್ತಿಗಾಗಿ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಅತ್ತೆಯವರು 15 ವರ್ಷ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಮಾಡಿದ್ದಾರೆ. ಆದ್ದರಿಂದ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಗೆದ್ದರೆ ಆದ್ಯತೆ ಮೇಲೆ ಈ ಕೆಲಸ ಮಾಡುತ್ತೇನೆ. – ಆರ್. ಶಾಂತಮ್ಮ ವಡಿವೇಲು, ವಾರ್ಡ್ ನಂ-62(ವಿಶ್ವೇಶ್ವರನಗರ)

 

32 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದೇನೆ. ಖಾಯಂ ಆಗದ ಕಾರಣ ಕೆಲಸ ತೊರೆದು ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಪೌರಕಾರ್ಮಿಕರನ್ನು ಕೆಲವರು ನೋಡುವ ದೃಷ್ಟಿಕೋನವೇ ಬೇರೆಯಾಗಿದ್ದು, ರಾಜಕೀಯದಲ್ಲಿ ಬೆಳೆದು ಉತ್ತಮ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂಬುದು ನನ್ನ ಕನಸು. ಹೆಚ್ಚಿನವರಿಗೆ ಸೂರು ಇಲ್ಲ. ಗೆದ್ದರೆ ಮನೆ ನಿರ್ಮಿಸಿಕೊಡಲು ಶ್ರಮಿಸುತ್ತೇನೆ. – ಆರ್. ಸುಬ್ರಮಣಿ, ವಾರ್ಡ್ ನಂ-39(ಗಾಯತ್ರಿಪುರಂ 1ನೇ ಹಂತ)

Translate »